Advertisement

ಜ.16ರಿಂದ ಇಂಟರ್‌ನ್ಯಾಷನಲ್‌ ಕಾಫಿ ಫೆಸ್ಟಿವಲ್‌

11:16 AM Dec 22, 2017 | Team Udayavani |

ಬೆಂಗಳೂರು: ಭಾರತೀಯ ಕಾಫಿ ಸ್ವಾದ ಸವಿಯುವಂತೆ ದೇಶೀಯರನ್ನು ಪ್ರೇರೇಪಿಸುವ ಜತೆಗೆ ಜಾಗತಿಕ ಮಟ್ಟದಲ್ಲೂ ಪ್ರಚಾರ ಪಡಿಸುವ ಸಲುವಾಗಿ ಇಂಡಿಯಾ ಕಾಫಿ ಟ್ರಸ್ಟ್‌, ಕಾಫಿ ಬೋರ್ಡ್‌ ಸಹಯೋಗದಲ್ಲಿ ಜ.16ರಿಂದ 19ರವರೆಗೆ ನಗರದಲ್ಲಿ 7ನೇ “ಇಂಡಿಯಾ ಇಂಟರ್‌ನ್ಯಾಷನಲ್‌ ಕಾಫಿ ಫೆಸ್ಟಿವಲ್‌’ ಆಯೋಜಿಸಿದೆ.

Advertisement

ನಗರದ ಲಲಿತ್‌ ಅಶೋಕಾ ನಡೆಯಲಿರುವ ಉತ್ಸವದಲ್ಲಿ ಕಾಫಿ ಉದ್ಯಮದ ಪ್ರಮುಖರು, ಸಂಸ್ಥೆಗಳು, ನೀತಿ ನಿರೂಪಕರು, ರಫ್ತುದಾರರು, ಉತ್ಪಾದಕರು ಪಾಲ್ಗೊಳ್ಳಲಿದ್ದು, ಚರ್ಚೆ, ಕಾರ್ಯಾಗಾರ, ಉತ್ಪನ್ನ ಬಿಡುಗಡೆ, ರಸಪ್ರಶ್ನೆ, ಪ್ರಶಸ್ತಿ ಪ್ರದಾನ ಇತರೆ ಕಾರ್ಯಕ್ರಮಗಳು ನಡೆಯಲಿವೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಡಿಯಾ ಕಾಫಿ ಟ್ರಸ್ಟ್‌ ಅಧ್ಯಕ್ಷ ಅನಿಲ್‌ ಭಂಡಾರಿ, ದೇಶೀಯ ಕಾಫಿಯ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಪಡಿಸುವ ಜತೆಗೆ ದೇಶೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಗೆ ಉತ್ತೇಜಿಸುವ ಉದ್ದೇಶದಿಂದ ಕಾಫಿ ಉತ್ಸವ ನಡೆಯಲಿದೆ ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ: ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, “ವಿಶಿಷ್ಟ ಬಗೆಯ ಕಾಫಿಗೆ ಹೆಸರಾದ ದೇಶೀಯ ಕಾಫಿಗೆ ಉತ್ತಮ ಬೇಡಿಕೆ ಸೃಷ್ಟಿಸಬೇಕಿದೆ. ಕಾಫಿ ಬೆಳೆಯುವ ಪ್ರದೇಶಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಸೆಳೆಯುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಕಾಫಿ ಹೆಚ್ಚಾಗಿ ಬೆಳೆಯುವ ಪ್ರದೇಶಗಳ ಭೌಗೋಳಿಕ ಸೌಂದರ್ಯದ ಬಗ್ಗೆ ಪರಿಚಯಿಸುವ ಮೂಲಕ
ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. 

ಸ್ಟಾರ್ಟ್‌ಅಪ್‌ಗೂ ಚಿಂತನೆ: ಕಾಫಿ ಮಾರ್ಗ (ಕಾಫಿ ಟ್ರೇಲ್‌) ಹಾಗೂ ಹೋಮ್‌ ಸ್ಟೇಗಳ ಮೂಲಕ ಅನುಭಾವಿಕ ಪ್ರವಾಸೋದ್ಯಮಕ್ಕೆ (ಎಕ್ಸ್‌ಪೀರಿಯನ್ಸ್‌ ಟೂರಿಸಂ) ಅಗತ್ಯವಿರುವ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಐಐಸಿಎಫ್ನಲ್ಲಿ ಸ್ಟಾರ್ಟ್‌ಅಪ್‌ ಪೆವಿಲಿಯನ್‌ ಮೂಲಕ ವೇದಿಕೆ ಕಲ್ಪಿಸಲಾಗುತ್ತಿದೆ. ಕಾಫಿ ಬಳಕೆ ಪ್ರಚಾರ, ಉತ್ತೇಜನಕ್ಕೆ ಸ್ಟಾರ್ಟ್‌ಅಪ್‌ ಗೂ ಚಿಂತಿಸಲಾಗುವುದು ಎಂದು ಭರವಸೆ
ನೀಡಿದರು.

Advertisement

“ಅರೇಬಿಕಾ’ ಕಾಫಿ ಬೆಳೆಗೆ ಒತ್ತು: ಕಾಫಿ ಬೋರ್ಡ್‌ ಆಫ್ ಇಂಡಿಯಾದ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ, ಸುಮಾರು 75 ವರ್ಷಗಳ ಹಿಂದೆ ರೂಪುಗೊಂಡ ಕಾಯ್ದೆಗಳಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಆದ್ಯತೆ ಇರಲಿಲ್ಲ. ಇದೀಗ ತಂತ್ರಜ್ಞಾನದ ವ್ಯಾಪಕ ಬಳಕೆಗೆ ಒತ್ತು ನೀಡಲಾಗಿದ್ದು, ಪ್ರತಿಷ್ಠಿತ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ.ದಶಕದಿಂದೀಚೆಗೆ “ಅರೇಬಿಕಾ’ ಕಾಫಿ ಬೆಳೆ ಪ್ರಮಾಣ ಶೇ.30ರಿಂದ ಶೇ.40ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದರು.

ವಿದೇಶಗಳಲ್ಲಿ ಒಂದು ಕಾಫಿಗೆ 4ರಿಂದ 5 ಡಾಲರ್‌ ಬೆಲೆಯಿದ್ದರೆ ಬೆಳೆಗಾರರಿಗೆ ಸಿಗುವುದು 5 ಸೆಂಟ್ಸ್‌ ಮಾತ್ರ. ಕಾಫಿಗೆ ವಿಶೇಷ ಬ್ರಾಂಡ್‌ ಸೃಷ್ಟಿಸಬೇಕಿದೆ. ದೇಶದಲ್ಲಿ ಕಾಫಿಗೆ ಹೋಲಿಸಿದರೆ ಟೀ ಸೇವಿಸುವವರ ಸಂಖ್ಯೆ ಬಹಳ ಹೆಚ್ಚಿದ್ದು, ಕಾಫಿ ಬಳಕೆಯನ್ನು
ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ.
 ● ಶ್ರೀವತ್ಸ ಕೃಷ್ಣ, ಕಾಫಿ ಬೋರ್ಡ್‌ ಆಫ್ ಇಂಡಿಯಾದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next