ಚಿಂತಾಮಣಿ: ಅಂತರಂಗದ ಗೆಲುವು ಸನ್ಯಾಸದ ಮೂಲ ಲಕ್ಷಣ. ಮನಸ್ಸಿನಲ್ಲಿ ಸನ್ಯಾಸಿಯಾಗಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು. ಕೈವಾರದ ಶ್ರೀ ಯೋಗಿನಾರೇಯಣ ಮಠದಿಂದ ಚಿಂತಾಮಣಿ ತಾಲೂಕು ಕಸಬಾ ಕಲ್ಲಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಆತ್ಮಬೋಧಾಮೃತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮಬೋಧನೆ: ಗುರು ಉಪದೇಶದಿಂದ ಆತ್ಮಪ್ರಕಾಶವೆಂದು ಸಾರಿರುವ ಕೈವಾರದ ತಾತಯ್ಯನವರು ಅಂತರಂಗದ ಸಾಧಕ ಋಷಿಮುನಿಗಳು. ಪ್ರಾಣಶಕ್ತಿಯನ್ನು ಕೊಟ್ಟು ಜೀವವನ್ನು ಸೃಷ್ಟಿಸುವ ಶಕ್ತಿಯನ್ನು ತಾತಯ್ಯನವರು ಪಡೆದಿದ್ದರು. ತಾತಯ್ಯನವರು ಪ್ರತಿಯೊಬ್ಬ ಮಾನವರಿಗೂ ಅನುಕೂಲವಾಗುವಂತೆ ಸರಳವಾದ ಭಾಷೆಯಲ್ಲಿ ಆತ್ಮಬೋಧನೆ ಮಾಡಿದ್ದಾರೆ.
ಗುರುಗಳ ಸ್ಮರಣೆ ಮಾಡಬೇಕು: ಆತ್ಮವಿಚಾರದ ಚಿಂತನೆಯನ್ನು ಮಾಡಿ ಜ್ಞಾನವನ್ನು ಗಳಿಸಿಕೊಳ್ಳಬೇಕು. ಆತ್ಮಚಿಂತನೆಯಿಂದ ಮಾನವನು ಮುಕ್ತಿಯೆಡೆಗೆ ತಲುಪಲು ಸಾಧ್ಯವಿದೆ. ಹಿಂದಿನ ಜನ್ಮಗಳಲ್ಲಿ ಮಾಡಿರುವ ಕರ್ಮಗಳೂ ಸಹ ಗುರುಕೃಪೆಯಿಂದ ನಾಶವಾಗುತ್ತದೆ. ಪ್ರತಿನಿತ್ಯವೂ ಬಿಡದೆ ನಿರಂತರವಾಗಿ ಗುರುಗಳ ಸ್ಮರಣೆ ಮಾಡಬೇಕು ಎಂದರು.
ವಿರಾಗಿಯಾಗಬೇಕು: ಮೋಕ್ಷವು ಬೇಕಾದರೆ ಮೊದಲನೆಯದಾಗಿ ವಿರಾಗಿಯಾಗಬೇಕು. ವೈರಾಗ್ಯವು ಮೋಕ್ಷದ ಮೊದಲ ಮೆಟ್ಟಿಲು. ವೈರಾಗ್ಯವು ಬಾಹ್ಯವಾದ ಕೇವಲ ತೋರಿಕೆಯ ತ್ಯಾಗದಿಂದ ಸಿದ್ಧಿಸುವುದಿಲ್ಲ. ವೈರಾಗ್ಯವು ಮನಸ್ಸಿನಿಂದ ಬರಬೇಕು. ಸಂಸಾರವನ್ನು ತ್ಯಜಿಸುವುದರಿಂದ ಸನ್ಯಾಸಿಗಳಾದೆವು ಎಂದು ಭಾವಿಸಿದರೆ ತಪ್ಪಾಗುತ್ತದೆ. ಕೇವಲ ಸಂಸಾರ, ಪುತ್ರ, ಬಂಧುಬಳಗವನ್ನು ಬಿಡುವುದರಿಂದ ಮಾತ್ರವೇ ವೈರಾಗ್ಯ ಬರುವುದಿಲ್ಲ. ಮನಸ್ಸಿನಲ್ಲಿ ಅವುಗಳ ಮೇಲಿನ ಆಸಕ್ತಿಯನ್ನು ಮನಸ್ಸಿನಲ್ಲಿ ಬಿಡದಿದ್ದರೆ ತೋರಿಕೆಯ ವಿರಾಗಿಯಾಗಿ ಹುಟ್ಟು-ಸಾವುಗಳ ಪ್ರಪಂಚದಲ್ಲೇ ಅಲೆದಾಡಿ ನರಳಬೇಕಾಗುತ್ತದೆ. ಎಲ್ಲವನ್ನೂ ಬಿಡಬಹುದು, ಆದರೆ ಮನಸ್ಸಿನಲ್ಲಿ ಆಸೆಗಳನ್ನು ಬಿಡುವುದು ಕಷ್ಟ. ಹಾಗೇ ಬಿಡುವುದೇ ವೈರಾಗ್ಯ ಎಂದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮದಲ್ಲಿರುವ ಆಂಜನೇಯಸ್ವಾಮಿ ದೇವಾಲಯದವರೆಗೂ ಶೋಭಾಯಾತ್ರೆಯಲ್ಲಿ ಬರಲಾಯಿತು. ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ವಿದೂಷಿ ಸರೋಜಮ್ಮ ಪ್ರಾರ್ಥಿಸಿದರು. ಕಲ್ಲಹಳ್ಳಿ ಲಕ್ಷ್ಮೀನಾರಾಯಣಪ್ಪ ಸ್ವಾಗತಿಸಿದರು. ನರಸಿಂಹರೆಡ್ಡಿ ವಂದಿಸಿದರು.
ಗ್ರಾಮಸ್ಥರ ಪರವಾಗಿ ಡಾ.ಎಂ.ಆರ್.ಜಯರಾಮ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ.ಚೌಡರೆಡ್ಡಿ, ಕೈವಾರ ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ನಿವೃತ್ತ ಕೆಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಎಪಿಎಂಸಿ ಅಧ್ಯಕ್ಷ ಕುರುಟಹಳ್ಳಿ ಕೃಷ್ಣಮೂರ್ತಿ, ಕಲ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರು ಉಪಸ್ಥಿತರಿದ್ದರು.