Advertisement

ಯೋಧನ ಕುಟುಂಬದಲ್ಲಿ ಅತ್ತೆ-ಸೊಸೆ ಜಗಳ ಬೀದಿಗೆ

01:11 PM Apr 24, 2019 | Suhan S |

ಭಾರತೀನಗರ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹೊಗೆಯಾಡುತ್ತಿದ್ದ ಅತ್ತೆ-ಸೊಸೆಯರ ಜಗಳ ಇದೀಗ ಹಾದಿ-ಬೀದಿ ರಂಪಾಟವಾಗಿ ಗುಡಿಗೆರೆ ಗ್ರಾಮಸ್ಥರು ತಲೆತಗ್ಗಿಸುವಂತಾಯಿತು.

Advertisement

ಇಡೀ ದೇಶವೇ ಯೋಧರ ಸಾವಿಗೆ ಮಮ್ಮಲ ಮರುಗಿದ್ದು, ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಗುರುವಿನ ಅಂತ್ಯಸಂಸ್ಕಾರ ನಡೆಸಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಗುಡಿಗೆರೆಗೆ ಆಗಮಿಸಿ ಗುರು ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರ ದೊರಕಿಸಿದ್ದರು.

ಬೀದಿಗೆ ಬಂದ ರಂಪಾಟ: ಇದಲ್ಲದೆ ಅನೇಕ ಕಂಪನಿ, ಸಂಘ-ಸಂಸ್ಥೆಗಳಿಂದ ನೆರವಿನ ಮಹಾಪೂರವೇ ಹರಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಹಲವಾರು ಬಾರಿ ಜಗಳ ನಡೆದಿದ್ದು, ಅತ್ತೆ ಚಿಕ್ಕೋಳಮ್ಮ ಹಾಗೂ ಗುರು ಪತ್ನಿ ಕಲಾವತಿ ನಡುವೆ ಇದ್ದ ಮನಸ್ತಾಪ ಮಂಗಳವಾರ ಬೀದಿಗೆ ಬಂದು ಇಬ್ಬರೂ ಪರಸ್ಪರ ಬೈದಾಡಿ ನಿಂದಿಸಿದ ಪ್ರಸಂಗ ನಡೆಯಿತು.

ಪ್ರಯೋಜನವಾಗದ ಮಾತುಕತೆ: ಆದರೆ, ಗ್ರಾಮಸ್ಥರು ಇವರ ಜಗಳವನ್ನು ಬಿಡಿಸಲು ಮುಂದಾಗಲಿಲ್ಲ. ಈಗಾಗಲೇ ಹಲವಾರು ಬಾರಿ ಗ್ರಾಮದ ಮುಖಂಡರು ಇಬ್ಬರ ನಡುವಿನ ಮನಸ್ತಾಪ ಹೋಗಲಾಡಿಸಲು ಮಾತುಕತೆ ನಡೆಸಿದ್ದರು. ಆದರೆ, ಪರಿಹಾರ ರೂಪದಲ್ಲಿ ಬಂದ ಚೆಕ್‌ಗಳು ಕಲಾವತಿಯವರ ಬ್ಯಾಂಕ್‌ ಖಾತೆಗೆ ನೇರವಾಗಿ ಸಂದಾಯವಾದರೆ, ನಗದು ರೂಪದಲ್ಲಿ ಬಂದ ಪರಿಹಾರದ ಹಣ ಗುರು ಅವರ ತಾಯಿ ಚಿಕ್ಕೋಳಮ್ಮ ಅವರಿಗೆ ಬಂದಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಹೊಗೆಯಾಡುತ್ತಿದ್ದ ದ್ವೇಷ ಇಂದು ಭುಗಿಲೆದ್ದು ಮನೆಯೊಳಗೆ ನಡೆದಿದ್ದ ಇದುವರೆಗಿನ ಜಗಳ ಇಂದು ಬೀದಿಯಲ್ಲಿ ಅನಾವರಣಗೊಂಡಿತ್ತು. ಇದಕ್ಕೆಲ್ಲ ಕಾರಣ ಹಣ ಎಂಬುದು ವಿಷಾದದ ಸಂಗತಿ. ಗಲಾಟೆ ಬಿಡಿಸಲು ಗುರು ಸಹೋದರ ಮಧು ಹೆಣಗಾಡಿದರು. ಒಂದು ಹಂತದಲ್ಲಿ ಕಲಾವತಿಯನ್ನು ಮಧುವಿಗೆ ಮದುವೆ ಮಾಡಿಕೊಳ್ಳುವ ಇರಾದೆ ವ್ಯಕ್ತವಾಗಿತ್ತು. ಆದರೆ ಇಂದು ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಜಗಳ ನಡೆಯುತ್ತಿದ್ದ ಸಂದರ್ಭದಲ್ಲೇ ಸಾಸಲಪುರದಿಂದ ಕಲಾವತಿ ಪೋಷಕರು ಕಾರಿನಲ್ಲಿ ಬಂದು ಮಗಳನ್ನು ಕರೆದೊಯ್ದರು.

Advertisement

ಆದರೆ, ಅತ್ತೆ ಚಿಕ್ಕೋಳಮ್ಮ ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ಮನೆಯೆಂದ ಮೇಲೆ ಇವೆಲ್ಲ ಸಹಜ. ಸಂಸಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಇದೇ ವಿಚಾರವಾಗಿ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ ಕುರಿತು ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರು, ಇದು ಹುತಾತ್ಮ ಯೋಧನ ಕುಟುಂಬಕ್ಕೆ ಗೌರವ ತರುವಂಥ ಬೆಳವಣಿಗೆಯಲ್ಲ. ನಿಮ್ಮ ಕುಟುಂಬದ ವ್ಯತ್ಯಾಸಗಳನ್ನು ನೀವೇ ಕುಳಿತು ಬಗೆಹರಿಸಿಕೊಳ್ಳಬೇಕು. ಹಾದಿ-ಬೀದಿ ರಂಪಾಟ ಮಾಡಿಕೊಂಡರೆ ವೀರಯೋಧನಿಗೆ ಅವಮಾನಿಸಿದಂತೆ ಎಂದು ಬುದ್ದಿಮಾತು ಹೇಳಿದ್ದರು.

ಯೋಧ ಗುರು ಪತ್ನಿ ಕಲಾವತಿ ಅವರ ಬ್ಯಾಂಕ್‌ ಖಾತೆ ವಿವರ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಜನರು ಸಹಜವಾಗಿ ಸ್ಪಂದಿಸಿದರು. ಇದರ ಮೊತ್ತವೇ ಸುಮಾರು 15 ಕೋಟಿ ರೂ. ಎನ್ನಲಾಗಿದೆ. ವಿದೇಶಿ ಉದ್ಯಮಿಯೊಬ್ಬರು 1 ಕೋಟಿ ಹಣ ರೂ., ರಾಜ್ಯ ಸರ್ಕಾರ 25 ಲಕ್ಷ ರೂ., ಅಂಬಾನಿ ಕಂಪನಿಯಿಂದ 25 ಲಕ್ಷ, ಇನ್ಫೋಸಿಸ್‌ ಫೌಂಡೇಷನ್‌ನಿಂದ 10 ಲಕ್ಷ, ನ್ಯಾಷನಲ್ ಟ್ರ್ಯಾವಲ್ಸ್ನ ಮಾಲೀಕ, ಸಚಿವ ಜಮೀರ್‌ಅಹ್ಮದ್‌ಖಾನ್‌ 10 ಲಕ್ಷ, ಆಳ್ವಾಸ್‌ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ, ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಾಯಕರು ಸೇರಿದಂತೆ ದಾನಿಗಳು ಸಾಕಷ್ಟು ಪರಿಹಾರ ನೀಡಿದ್ದಾರೆ. ಅಂಬರೀಶ್‌ ಪತ್ನಿ ಸುಮಲತಾ 20 ಗುಂಟೆ ಜಮೀನು ಕೊಡುಗೆಯಾಗಿ ನೀಡಿದ್ದರು. ಇದರ ಜತೆಗೆ ಶಾಲಾ ಮಕ್ಕಳು, ಶಿಕ್ಷಕರು, ವಕೀಲರು, ಎಲ್ಐಸಿ ಪ್ರತಿನಿಧಿಗಳು, ಸಾರ್ವಜನಿಕರು ಕೂಡ ಧನ ಸಹಾಯ ಮಾಡಿದ್ದರು. ಈ ಹಣವೇ ಕುಟುಂಬ ಸದಸ್ಯರ ಸಂಬಂಧಕ್ಕೆ ಮುಳುವಾಗಿದೆ ಎನ್ನಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next