ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ನಡುವೆಯೇ ಇಡೀ ಜಗತ್ತಿನಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರ ಬಹುಚರ್ಚಿತ ವಿಷಯವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಎಂಬುದು ಯಾವುದೇ ಸಮಾಜ ಒಪ್ಪತಕ್ಕ ವಿಚಾರವಂತೂ ಅಲ್ಲವೇ ಅಲ್ಲ. ಇಂಥ ವಿಚಾರದಲ್ಲಿ ಜಗತ್ತಿನ ಎಲ್ಲ ಸರಕಾರಗಳು ತೀರಾ ಮುತುವರ್ಜಿಯಿಂದ ಇರಬೇಕಾದದ್ದು ಮತ್ತು ಪ್ರತಿಯೊಬ್ಬರ ಹಕ್ಕುಗಳಿಗೆ ಸಮಾನ ಗೌರವ ನೀಡಬೇಕಾದದ್ದು ಕರ್ತವ್ಯ ಕೂಡ ಆಗಿದೆ.
ಆದರೆ, ಬಹಳಷ್ಟು ಸಂದರ್ಭದಲ್ಲಿ ಮಾನವ ಹಕ್ಕು ವಿಚಾರಗಳು ಬೇರೆ ಕಾರಣಗಳಿಗಾಗಿ ಚರ್ಚೆಗೆ ಬರುವುದು ಮಾತ್ರ ವಿಷಾದದ ಸಂಗತಿ. ಇಂದು ಒಂದು ದೇಶ, ಮಗದೊಂದು ದೇಶಕ್ಕೆ ಮಾನವ ಹಕ್ಕುಗಳ ವಿಚಾರ ಕುರಿತಾಗಿ ಪಾಠ ಹೇಳುವ ಅನಿವಾರ್ಯತೆ ಅಥವಾ ಅಗತ್ಯ ಖಂಡಿತವಾಗಿಯೂ ಇಲ್ಲ.
ಇತ್ತೀಚೆಗಷ್ಟೇ ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್, ಭಾರತದ ಮಾನವ ಹಕ್ಕುಗಳ ವಿಚಾರದ ಕುರಿತಾಗಿ ಮಾತನಾಡಿ, ಇಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳ ಬಗ್ಗೆ ನಾವು ಕಳವಳಕಾರಿ ಮನೋಭಾವ ಹೊಂದಿದ್ದೇವೆ ಎಂದಿದ್ದರು. ಅಂದರೆ, ಮಾನವ ಹಕ್ಕುಗಳ ಸಂಘಟನೆಗಳು, ಜೈಲಿನ ಪರಿಸ್ಥಿತಿ, ಮಾಧ್ಯಮದವರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂಬುದು ಅವರ ಮಾತಿನ ಸಾರಾಂಶವಾಗಿತ್ತು. ಕೆಲವೊಮ್ಮೆ ಅಮೆರಿಕದ ಈ ಅನಿಸಿಕೆಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತವೆ ಎಂಬುದು ಸುಳ್ಳೇನಲ್ಲ. ಇದಕ್ಕೆ ಕಾರಣವೂ ಇದೆ. ಜಗತ್ತಿಗೇ ದೊಡ್ಡಣ್ಣ ಎಂದು ಗುರುತಿಸಿಕೊಂಡಿರುವ ಅಮೆರಿಕ ಯಾವುದೋ ಒಂದು ದೇಶದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದರೆ, ಉಳಿದ ದೇಶಗಳು ಒಪ್ಪಿಕೊಳ್ಳುವುದು ಸಾಮಾನ್ಯ. ಹೀಗಾಗಿ ಅಮೆರಿಕ ಏನು ಹೇಳುತ್ತದೆಯೋ ಅದಕ್ಕೆ ಒಂದಷ್ಟು ಪ್ರಾಮುಖ್ಯವೂ ಇರುತ್ತದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಮೆರಿಕ, ಇನ್ನೊಂದು ದೇಶದ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರ ಮಾತನಾಡುವಾಗ ತನ್ನ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕಿದೆ. ಈ ವಿಚಾರದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಮೆರಿಕಕ್ಕೆ ತಕ್ಕನಾದ ಉತ್ತರವನ್ನೇ ನೀಡಿದ್ದಾರೆ.
ಭಾರತದ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರ ಒತ್ತಟ್ಟಿಗಿರಲಿ, ಇತ್ತೀಚೆಗಷ್ಟೇ ಅಮೆರಿಕದಲ್ಲಿ ಆದ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದ ಬಗ್ಗೆ ನಾನು ಪ್ರಸ್ತಾವಿಸುತ್ತೇನೆ. ಇಲ್ಲಿ ಭಾರತೀಯರ ಮೇಲೆ ಆಗಾಗ ಕಿರುಕುಳ ನೀಡುವ ಪ್ರಕರಣಗಳು ಆಗುತ್ತಲೇ ಇವೆ. ಮೊದಲಿಗೆ ಈ ವಿಚಾರದ ಬಗ್ಗೆ ಅಮೆರಿಕ ಗಮನಹರಿಸಬೇಕು ಎಂದು ಜೈಶಂಕರ್ ನೇರವಾಗಿಯೇ ಹೇಳಿದ್ದಾರೆ. ಜೈಶಂಕರ್ ಹೇಳಿದ್ದರಲ್ಲಿ ಸುಳ್ಳೇನಿಲ್ಲ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ವೈಟ್ ಸುಪ್ರಿಮಸಿ ಹೆಚ್ಚಾಗಿ ಬೇರೆ ದೇಶಗಳ ಜನರನ್ನು ಕೀಳಾಗಿ ನೋಡುವ ವಿದ್ಯಮಾನಗಳು ಹೆಚ್ಚುತ್ತಿವೆ. ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ನಾನಾ ಭಾಗಗಳಲ್ಲಿ ಪಂಜಾಬ್‌ನ ಸಿಕ್ಖ್ ರುಗಳನ್ನು ನಿಲ್ಲಿಸಿ ಅವರ ಮೇಲೆ ದೈಹಿಕವಾಗಿ ಹಲ್ಲೆಯನ್ನೂ ಮಾಡಲಾಗಿದೆ. ಈ ಸಂಗತಿಗಳನ್ನೂ ಜೈಶಂಕರ್ ಅಮೆರಿಕದ ಮುಂದೆ ಪ್ರಸ್ತಾವಿಸಿ, ಉತ್ತಮ ಕೆಲಸವನ್ನೇ ಮಾಡಿದ್ದಾರೆ.
ಹಾಗೆಂದು, ಭಾರತದಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇಲ್ಲ ಎಂದು ಹೇಳಲು ಆಗುವುದಿಲ್ಲ. ಖಂಡಿತವಾಗಿಯೂ ಇಂಥ ಘಟನೆಗಳು ನಡೆಯುತ್ತಿವೆ. ಇವುಗಳನ್ನು ನಮ್ಮ ಸರಕಾರಗಳು, ಪೊಲೀಸರು, ಕೋರ್ಟ್‌ಗಳು ನೋಡಿಕೊಳ್ಳುತ್ತವೆ. ಇದರಲ್ಲಿ ಹೊರಗಿನವರು ಖಂಡಿತವಾಗಿಯೂ ಮೂಗು ತೂರಿಸುವ ಅಗತ್ಯತೆ ಇಲ್ಲ.