Advertisement
ಆದರೆ, ಬಾವಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ವಿರೋಧದ ಹಿನ್ನೆಲೆಯಲ್ಲಿ ಬಾವಾ ಅವರಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸದಂತೆ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದರು.
Related Articles
Advertisement
ಆ ಸಂದರ್ಭದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಪ್ರಭಾವದಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಒಂದೂ ಟಿಕೆಟ್ ನೀಡದ್ದಿದ್ದರೆ, ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್.ಕೆ.ಪಾಟೀಲ್ ಆ ಸಂದರ್ಭದಲ್ಲಿಯೇ ಎ.ಎಂ. ಹಿಂಡಸಗೇರಿಗೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ಮಾತುಕತೆ ನಡೆಸಿದ್ದರು.
ಅಲ್ಲದೇ ಕಳೆದ ಮೂವತ್ತೈದು ವರ್ಷಗಳಿಂದ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನ ಉತ್ತರ ಕರ್ನಾಟಕದವರಿಗೆ ನೀಡದಿರುವುದರಿಂದ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂದು ರಾಹುಲ್ ಗಾಂಧಿ ಒಪ್ಪಿಗೆ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ.
ಆದರೆ, ಲೋಕಸಭೆ ಚುನಾವಣೆ ಮುಗಿದ ತಕ್ಷಣ ಆಹಾರ ಮತ್ತು ನಾಗರಿಕ ಸಚಿವ ಜಮೀರ್ ಅಹಮದ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೂಲಕ ಬಾವಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಅಸಮಾಧಾನಗೊಂಡ ಎಚ್.ಕೆ. ಪಾಟೀಲ್, ಬಾವಾ ಅವರ ನೇಮಕ ಆದೇಶ ತಡೆ ಹಿಡಿಯುವಂತೆ ಒತ್ತಡ ಹೇರಿದ್ದರು. ಅದರಂತೆ ಅವರ ಅಧಿಕಾರ ಸ್ವೀಕಾರವನ್ನು ತಡೆ ಹಿಡಿಯಲಾಗಿತ್ತು.
ಆ ಬೆಳವಣಿಗೆಯ ನಂತರ ಜಿ.ಎ. ಬಾವಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು. ಅಲ್ಪ ಸಂಖ್ಯಾತ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ಅಧ್ಯಕ್ಷ ಸ್ಥಾನ ಸಾಂವಿಧಾನಿಕ ಹುದ್ದೆಯಾಗಿದೆ. ಒಮ್ಮೆ ನೇಮಕ ಮಾಡಿದ ಮೇಲೆ ಮೂರು ವರ್ಷ ಅಧಿಕಾರದಿಂದ ತೆಗೆದು ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲದಿರುವುದರಿಂದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಂತೆ ಸಲಹೆಯನ್ನೂ ಕೆಲವು ನಾಯಕರು ನೀಡಿದ್ದರು.
ಹೀಗಾಗಿ, ಬಾವಾ ಆಯೋಗದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಬಾವಾ ಅವರಿಗೆ ನೀಡಿರುವ ಅಧಿಕಾರ ವಾಪಸ್ ಪಡೆದು ಎ.ಎಂ. ಹಿಂಡಸಗೇರಿಗೆ ನೀಡಬೇಕೆಂಬ ಒತ್ತಡವನ್ನು ಎಚ್.ಕೆ. ಪಾಟೀಲ್ ಮುಂದುವರಿಸಿದ್ದಾರೆ. ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಅವರು ರಾಹುಲ್ ಗಾಂಧಿ ಸೂಚನೆಯನ್ನೇ ನಿರ್ಲಕ್ಷಿಸಿ ಬಾವಾರನ್ನು ನೇಮಕ ಮಾಡಲಾಗಿದೆ. ಹೀಗಾಗಿ ಅವರಿಂದ ರಾಜೀನಾಮೆ ಪಡೆಯಬೇಕೆಂದು ಹೈ ಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ವೇಣುಗೋಪಾಲ್ ಸೂಚನೆ: ಬಾವಾ ಅವರ ರಾಜೀನಾಮೆ ಪಡೆಯುವಂತೆ ಎಚ್.ಕೆ. ಪಾಟೀಲ್ ಒತ್ತಡ ಹೇರುತ್ತಿರುವುದರಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಬಾವಾಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇಲ್ಲದಿದ್ದರೆ, ಪಕ್ಷದಿಂದ ಉಚ್ಚಾಟಿಸುವ ಎಚ್ಚರಿಕೆ ನೀಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
* ಶಂಕರ ಪಾಗೋಜಿ