Advertisement

ಆಂತರಿಕ ದೂರು ಸಮಿತಿ; ಮಹಿಳೆಯರಲ್ಲಿ ಮಾಹಿತಿ ಕೊರತೆ

09:14 PM Oct 09, 2021 | Team Udayavani |

ಉಡುಪಿ: ಕೇಂದ್ರ ಸರಕಾರ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯುವ ಉದ್ದೇಶದಿಂದ ಜಾರಿಗೆ ತಂದ ಜಿಲ್ಲಾಮಟ್ಟದ ಸ್ಥಳೀಯ ಹಾಗೂ ಆಂತರಿಕ ದೂರು ಸಮಿತಿಗಳು ಉಡುಪಿಯಲ್ಲಿ ರಚನೆಯಾದರೂ, ಮಾಹಿತಿ ಕೊರತೆಯಿಂದಾಗಿ ಮಹಿಳೆಯರು ದೂರು ನೀಡಲು ಮುಂದಾಗುತ್ತಿಲ್ಲ.

Advertisement

ಕಾನೂನಿನ ಪ್ರಕಾರ ಕನಿಷ್ಠ 10 ಉದ್ಯೋಗಿಗಳಿರುವ ಖಾಸಗಿ ಮತ್ತು ಸರಕಾರಿ ಕಚೇರಿ, ಉದ್ಯಮಗಳಲ್ಲಿ ಆಂತರಿಕ ದೂರು ಸಮಿತಿ ರಚನೆಯಾಗಬೇಕು. 10ಕ್ಕಿಂತ ಕಡಿಮೆ ಮಹಿಳಾ ಸಿಬಂದಿಯಿರುವಲ್ಲಿ ಆಂತರಿಕ ಸಮಿತಿ ರಚನೆಯಾಗದ ಸಂಸ್ಥೆಗಳಿದ್ದರೆ, ಆ ಸಂಸ್ಥೆಯವರು ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಗೆ ದೂರು ನೀಡಬಹುದಾಗಿದೆ. ಜಿಲ್ಲಾ ಸಮಿತಿಗೆ ಸಾಮಾಜಿಕವಾಗಿ ಸಕ್ರಿಯವಾಗಿ ರುವ ಮಹಿಳೆಯೊಬ್ಬರು ಅಧ್ಯಕ್ಷರಾಗಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಕಾರ್ಯದರ್ಶಿಯಾಗಿರುತ್ತಾರೆ. ಸಮಿತಿಯಲ್ಲಿ ವಕೀಲರೂ ಇರುತ್ತಾರೆ.

ಜಿಲ್ಲೆಯಲ್ಲಿ 10ಕ್ಕಿಂತ ಅಧಿಕ ಮಹಿಳಾ ಸಿಬಂದಿಯಿರುವ ಸರಕಾರಿ 29 ಇಲಾಖೆಗಳಲ್ಲಿ ಹಾಗೂ ಅರೆ ಖಾಸಗಿ ಸಂಸ್ಥೆಗಳಲ್ಲಿ ಇದುವರೆಗೆ 97 ಆಂತರಿಕ ದೂರು ಸಮಿತಿ ರಚಿಸಿದೆ. 10ಕ್ಕಿಂತ ಕಡಿಮೆ ಮಹಿಳಾ ಸಿಬಂದಿಯಿರುವ ಸುಮಾರು 10 ಸರಕಾರಿ ಇಲಾಖೆಗಳು ಹಾಗೂ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಯಲ್ಲಿ ದಾಖಲಿಸಿಕೊಂಡಿವೆ.

ಮಾಹಿತಿ ಕೊರತೆ
ಪ್ರಸ್ತುತ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಗೇರುಬೀಜ ಕಾರ್ಖಾನೆ ಸೇರಿದಂತೆ ವಿವಿಧ ಚಿಕ್ಕ ಸಂಸ್ಥೆಗಳಲ್ಲಿ ಮಹಿಳೆಯರ ಸಂಖ್ಯೆ 10ಕ್ಕಿಂತ ಅಧಿಕವಿದ್ದರೂ ಕೆಲವಡೆ ಆಂತರಿಕ ದೂರು ಸಮಿತಿ ರಚನೆಯಾಗಿಲ್ಲ. ರಚನೆಯಾಗಿದ್ದರೂ ಅಲ್ಲಿನ ಮಹಿಳೆಯರಿಗೆ ಮಾಹಿತಿ ಕೊರತೆಯಿಂದ ಕಿರುಕುಳ ಎದುರಿಸಿದ್ದರೂ, ದೂರು ನೀಡಲು ತಿಳಿಯದೆ, ಕೆಲಸ ಬಿಟ್ಟು ಹೋಗಿರುವ ಪ್ರಕರಣಗಳು ಸಾಕಷ್ಟಿವೆ.

ಕೇವಲ 4 ಪ್ರಕರಣ!
ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿ ಹಾಗೂ ಆಂತರಿಕ ದೂರು ಸಮಿತಿಗಳು ರಚನೆಯಾಗಿ ಸುಮಾರು 10 ವರ್ಷಗಳು ಸಮೀಪಿಸುತ್ತಿದೆ. ಇದುವರೆಗೆ ಉಡುಪಿ ಸ್ಥಳೀಯ ದೂರ ಸಮಿತಿಗೆ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ 4 ಮಹಿಳೆಯರಿಂದ ಮಾತ್ರ ದೂರು ದಾಖಲಾಗಿದೆ. ಅದರ ಹೊರತಾಗಿ ಸಂಸ್ಥೆ ಹಾಗೂ ಸರಕಾರಿ ಇಲಾಖೆಯಲ್ಲಿನ ಆಂತರಿಕ ಸಮಿತಿಯಲ್ಲಿ ಇದುವರೆಗೆ ಒಂದೂ ದೂರು ದಾಖಲಾಗಿಲ್ಲ.

Advertisement

ಇದನ್ನೂ ಓದಿ:ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!

ದೂರು ನೀಡಲು ಅಸಾಧ್ಯ
ಕಚೇರಿಗಳಲ್ಲಿ ಈಗಲೂ ಹೆಣ್ಣು ಮಕ್ಕ ಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೆ ಹಿರಿಯ ಅಧಿಕಾರಿಗಳೇ ಸಮಿತಿಯ ಪ್ರಮುಖರಾಗಿರು ವುದರಿಂದ ಆಂತರಿಕ ಸಮಿತಿಗೆ ಮುಕ್ತವಾಗಿ ದೂರು ನೀಡಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಕಚೇರಿಗಳಲ್ಲಿ ಸಮಿತಿ ಮತ್ತು ದೂರು ಪೆಟ್ಟಿಗೆಗಳೇ ಇಲ್ಲ.

3 ತಿಂಗಳೊಳಗೆ ದೂರು ನೀಡಿ
ಲೈಂಗಿಕ ಕಿರುಕುಳ ಬಾಧಿತ ಮಹಿಳೆಯರು ಕೃತ್ಯ ನಡೆದ 3 ತಿಂಗಳೊಳಗಾಗಿ ಲಿಖೀತ ರೂಪದಲ್ಲಿ ಸಮಿತಿಗೆ ದೂರು ನೀಡಬೇಕು. ಬಾಧಿತ ಮಹಿಳೆ 3 ತಿಂಗಳೊಳಗಾಗಿ ದೂರು ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಿಸುತ್ತಿರುವುದಾಗಿ ನಿರೂಪಿಸಿದಲ್ಲಿ ದೂರು ಸಮಿತಿಯು ಹೆಚ್ಚುವರಿ 3 ತಿಂಗಳವರೆಗೂ (ಒಟ್ಟು 6 ತಿಂಗಳು) ದೂರನ್ನು ಸ್ವೀಕರಿಸುತ್ತದೆ. ಒಂದು ವೇಳೆ ಕಿರುಕುಳಕ್ಕೆ ಒಳಗಾದ ಮಹಿಳೆ ದೂರು ನೀಡಲು ಮಾನಸಿಕ ಮತ್ತು ದೈಹಿಕ ಸಮಸ್ಯೆಗೆ ಒಳಗಾಗಿದ್ದರೆ, ಅವರ ಕಾನೂನುಬದ್ಧ ವಾರಸುದಾರರು ದೂರು ನೀಡಲು ಅವಕಾಶವಿದೆ.

ಹೆಸರಿಗಷ್ಟೇ ಸಮಿತಿ
ಕೆಲವು ಬ್ಯಾಂಕ್‌, ಶಾಲೆ, ಕಾಲೇಜು ಮತ್ತು ಜಿಲ್ಲಾಮಟ್ಟದ ಕಚೇರಿಗಳಲ್ಲಿ ಮಾತ್ರ ಆಂತರಿಕ ಸಮಿತಿ ಸಕ್ರಿಯವಾಗಿವೆ. ಉಳಿದಂತೆ ಖಾಸಗಿ ಸಂಸ್ಥೆಗಳಲ್ಲಿ ಸಮಿತಿಗಳಿಲ್ಲ. ಕೆಲವೆಡೆ ನಿಯಮದಂತೆ ದೂರು ಪೆಟ್ಟಿಗೆ ಮತ್ತು ಸಮಿತಿ ಸದಸ್ಯರ ಹೆಸರಿನ ಫ‌ಲಕಗಳನ್ನು ಅಳವಡಿಸಿಲ್ಲ. ಪ್ರತೀ 3 ವರ್ಷಗಳಿಗೊಮ್ಮೆ ಆಂತರಿಕ ದೂರು ಸಮಿತಿಯನ್ನು ಪುನರ್‌ ರಚಿಸಬೇಕೆನ್ನುವ ನಿಯಮವಿದ್ದರೂ ಸಮಿತಿಗಳು ಬದಲಾಗಿಲ್ಲ.

ದೂರು ಸಾಬೀತಾದರೆ/ಸುಳ್ಳು ದೂರಿಗೆ ಶಿಕ್ಷೆ?
-ತಪ್ಪಿತಸ್ಥರಿಗೆ ಎಚ್ಚರಿಕೆ, ದಂಡ ವಿಧಿಸಲಾಗುತ್ತದೆ
– ವರ್ಗಾವಣೆ, ಕೆಲಸದಿಂದ ವಜಾಗೊಳಿಸಲು ಶಿಫಾರಸು
– ಪದೋನ್ನತಿ ಅಥವಾ ಸಂಬಳ ತಡೆಹಿಡಿಯುವುದು
– ದೈಹಿಕ ಮಾನಸಿಕ ಯಾತನೆಗೆ ವೈದ್ಯಕೀಯ ವೆಚ್ಚ ಭರಿಸಬೇಕು.

ಸಮಿತಿ ರಚಿಸಲು ಸೂಚನೆ
ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಸಂಸ್ಥೆಯಲ್ಲಿ 10ಕ್ಕಿಂತ ಅಧಿಕ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಲ್ಲಿ ಆಂತರಿಕ ಸಮಿತಿ ರಚಿಸುವಂತೆ ಈಗಾಲೇ ಸೂಚನೆ ನೀಡಲಾಗಿದೆ. ಸಮಿತಿ ರಚಿಸಿದೇ ಇರುವ ಸಂಸ್ಥೆಗಳಿಗೆ 50 ಸಾವಿರ ರೂ.ಯಿಂದ 1 ಲ.ರೂ. ವರೆಗೆ ದಂಡ ವಿಧಿಸುವುದು ಸೇರಿದಂತೆ, ಪರವಾನಿಗೆ ರದ್ದುಪಡಿಸುವ ಅವಕಾಶ ಕಾನೂನಿನಲ್ಲಿದೆ.
– ಶೇಷಪ್ಪ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಇಲಾಖೆ ಉಡುಪಿ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next