Advertisement
ಈ ನಿಟ್ಟಿನಲ್ಲಿ ನಾವು ಅನುಸರಿಸುವ ಕ್ರಮಗಳು, ಕ್ರಮಿಸುವ ದಾರಿಗಳು ಹಲವು. ಎಲ್ಲವೂ ನಂಬಿಕೆಗೆ ಸಂಬಂಧಪಟ್ಟವುಗಳೇ. ಆಯ್ಕೆ ನಮ್ಮದಾಗಿರುತ್ತದೆ. ಆಯ್ಕೆಯ ಸುಖ- ದುಃಖವೂ ನಮ್ಮದೇ ಆಗಿರುತ್ತದೆ. ಈ ಪ್ರಕ್ರಿಯೆಯ ಜಂಜಡದಲ್ಲಿ ನಾವು ಏನನ್ನು ಕಳೆದುಕೊಂಡಿರುತ್ತೇವೆ ಎನ್ನುವುದು ನಮಗೆ ತಿಳಿದಿರುವುದಿಲ್ಲ. ತಿಳಿಯುವ ಗೋಜಿಗೂ ನಾವು ಹೋಗುವುದಿಲ್ಲ. ನಮ್ಮ ಆದ್ಯತೆಗಳೇ ಬೇರೆಯ¨ªಾಗಿರುತ್ತವೆ. ಹಾಗಾಗಿ ಕಳೆದುಕೊಂಡಿರುವುದರ ಬಗ್ಗೆ ತಿಳಿಯುವ ಆಸಕ್ತಿ ನಮಗಿರುವುದಿಲ್ಲ. ಕ್ಷಣಿಕ ಸುಖ ಸಂಪಾದನೆ ಎಂಬ ಮಾಯಾಮೃಗದ ಹಿಂದೆ ಬೀಳುವ ನಾವು ಕಳೆದುಕೊಂಡಿರುವುದರ ಹಿಂದೆ ಬೀಳುತ್ತೇವೆಯೇ? ಆದರೆ ಮುಂದೊಂದು ದಿನ ಇಳಿಸಂಜೆಯ ಬಿಸಿಲಿಗೆ ಮುಖವೊಡ್ಡಿ ಕುಳಿತಾಗ ಅವುಗಳೆಲ್ಲವೂ ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆ ಹೊತ್ತಲ್ಲಿ ನಾವು ಹಿಂದಿರುಗಲಾಗದಷ್ಟು ದೂರ ಬಂದಿರುತ್ತೇವೆ. ಆಗ ಮೈ ಬೆವರಿ, ನಾಲಗೆ ಒಣಗುವ ಸಮಯ ನಮ್ಮದಾಗಿರುತ್ತದೆ. ಆದರೆ ಏನು ಮಾಡೋಣ? ನಾವು ಕ್ರಮಿಸಿ ಬಂದ ಹಾದಿ ಬಹಳ ಉದ್ದವಾಗಿರುತ್ತದೆ. ಹಾಗಾಗಿ ಬೆವರಿಸಿಕೊಳ್ಳುವುದು ಮತ್ತು ಒಣಗಿಸಿಕೊಳ್ಳುವುದು ಒಂದೇ ಉಳಿದ ಹಾದಿಯಾಗಿರುತ್ತದೆ. ಅದರಾಚೆಗಿನ ಗಮ್ಯವನ್ನು ನಾವು ತಲುಪಬೇಕಿದ್ದರೆ ನಮ್ಮ ಹಮ್ಮು-ಬಿಮ್ಮುಗಳನ್ನು ತುಸು ಬದಿಗೆ ಸರಿಸಿ, ಮೊಗದಲೊಂದಿಷ್ಟು ಮಂದಹಾಸವನ್ನು ಬೀರಬೇಕಾಗುತ್ತದೆ. ಕೇಳಲು ಹಿತವೆನಿಸುವ ಈ ಮಾತು ಅನುಸರಿಸಲು ಬಹಳಷ್ಟು ಮಂದಿಗೆ ಸುಲಭವಲ್ಲ. ಒಳಗಿರುವ ದೆವ್ವಗಳು ಸುಮ್ಮನಿರಬೇಕಲ್ಲ. ಹೋದರೆ ಹೋಗಲಿ, ಯಾರಿಂದ ಯಾರಿಗೂ ಎನೂ ಆಗಬೇಕಿಲ್ಲವೆಂದು ತನ್ನೊಳಗೆ ತಾನು ತರ್ಕಿಸಿಕೊಂಡು ದೊಡ್ಡ ದುರಂತವೊಂದಕ್ಕೆ ಮುನ್ನುಡಿಯಾಗಿಬಿಡುತ್ತೇವೆ. ದ್ವಂದ್ವಗಳು ಹೊರಳಾಡುತ್ತಲೆ ಇರುತ್ತವೆ. ನಂಬಿಕೆಯ ಸೌಧ ಕುಸಿಯುವುದು ಇದೇ ಸಮಯದಲ್ಲಿ. ಮತ್ತೆ ಆ ಸೌಧವನ್ನು ಕಟ್ಟಲು ಒದ್ದಾಡುತ್ತೇವೆ. ಕಳೆದುಕೊಂಡಿದ್ದ ಕೊಂಡಿಯನ್ನು ಮತ್ತೆ ಜೋಡಿಸಲು ಪುನಃ ಹೊರಳಾಡುತ್ತಲೇ ಇರುತ್ತೇವೆ. ಆ ಘಟ್ಟದಲ್ಲಿ ನಮಗೆ ಆಡಲು ನಾಲಗೆ ತೊದಲುವುದು ಸಹಜ. ಕಣ್ಣಿಗೆ ಕಣ್ಣು ತಾಕಿಸುವುದು ಇನ್ನೂ ಕಷ್ಟ. ಆದರೂ ಬಂಧದ ಹಸಿರು ಹುಲ್ಲುಗಾವಲಿನಲ್ಲಿ ಮೇಯಲು ಹಾತೊರೆಯುತ್ತಿರುತ್ತದೆ ಮನಸ್ಸು. ಹಸಿರಾದರೆ ಆಗಲಿ ಎಂಬ ನಿರೀಕ್ಷೆಯಲ್ಲಿ ಮತ್ತೆ ಬಂಧದ ಎದುರು ಶಿರ ಬಾಗುತ್ತೇವೆ. ಸ್ವತಃ ತನ್ನ ಹಮ್ಮಿನಿಂದಲೇ ನಮ್ಮಿಂದ ದೂರವಾದ ಬಂಧವನ್ನು ನಾವೇ ಹುಡುಕಿಕೊಂಡು ಹೋಗುತ್ತೇವೆ, ಇರುವ ಒಂದೇ ಒಂದು ಬದುಕನ್ನು ಚಂದಗಾಣಿಸಲು. ಅದರರ್ಥ ಅದು ಅವರಿಗೆ ಹೆದರಿಯೋ, ಬೆದರಿಯೋ ಅಲ್ಲ. ಬದಲಾಗಿ ಬಂಧಗಳು ಉಸಿರುಗಟ್ಟಿ ಸಾಯದಿರಲಿ ಎಂಬ ವಾಂಛೆಯಿಂದ. ಕ್ಷಮೆ ಕೇಳಿದಾಕ್ಷಣ ನಮ್ಮದೇ ತಪ್ಪಿತ್ತು ಅಂತಲ್ಲ; ಅಹಂಕಾರಕ್ಕಿಂತ ಸಂಬಂಧಗಳಿಗೆ ಹೆಚ್ಚು ಮಹತ್ವ ಎಂಬುದನ್ನು ಅರಿತು ವರ್ತಿಸುವ ರೀತಿಯದು. ಆ ವಿವೇಚನೆಯ ಅರಿವು ನಮ್ಮಲ್ಲಿ ಮೂಡಬೇಕು. ಅಹಂ ಬದಿಸರಿಸಿ: ಅಷ್ಟಕ್ಕೂ ಯಾರು ಯಾರನ್ನು ಹೆದರಿಸಲು ಸಾಧ್ಯ ಹೇಳಿ? ನಮ್ಮನ್ನು ಹೆದರಿಸುವುದೇ ಇದ್ದರೆ ಅದು ನಾವು ಆಡಿದ ಮಾತುಗಳಿಗೆ, ಮಾಡಿದ ಕ್ರಿಯೆಗಳಿಗೆ, ನೀಡಿದ ನೋವುಗಳಿಗೆ ಮಾತ್ರ ಸಾಧ್ಯ. ನಮ್ಮನ್ನು ಕಾಡಲು, ಕೊರೆಯಲು, ತಿವಿಯಲು ಮತ್ತು ಚುಚ್ಚಲು ನಮ್ಮ ಆತ್ಮಸಾಕ್ಷಿಗೆ ಮಾತ್ರ ಸಾಧ್ಯ. ಅಂತಹ ಆತ್ಮಸಾಕ್ಷಿ ನಮ್ಮೆಲ್ಲರದಾಗಲಿ ಎನ್ನುವ ಎಲ್ಲರ ಹಾರೈಕೆ ಎಲ್ಲರ ಮೇಲೂ ಇರಲಿ. ಚಕ್ರ ನಿಲ್ಲುವುದಿಲ್ಲ. ಇತರರಿಗೆ ಇಂದು ನಾವು ಮಾಡಿದ್ದು, ನಾಳೆ ನಮಗೆ ಸಿಗಲಿರುವ ಕಟ್ಟಿಟ್ಟ ಬುತ್ತಿ. ಒಳ್ಳೆಯ ಮತ್ತು ಕೆಟ್ಟ ಕರ್ಮವೀರರು ಬೇತಾಳರಂತೆ ನಮ್ಮ ಬೆನ್ನ ಹಿಂದೆಯೇ ಬಿದ್ದಿರುತ್ತಾರೆ ಎನ್ನುವ ಅರಿವು ನಮ್ಮಲ್ಲಿರಬೇಕು. ಆದ್ದರಿಂದ ಹೇಳಿಕೊಳ್ಳಲು ಕಷ್ಟವಾದರೆ ಪ್ರೀತಿಪಾತ್ರರನ್ನು ಒಮ್ಮೆ ತಬ್ಬಿಕೊಂಡುಬಿಡಿ. ಸ್ಪರ್ಶಕ್ಕೆ ಎÇÉಾ ನೋವುಗಳನ್ನೂ ವಾಸಿ ಮಾಡುವ ಅದ್ಭುತ ಮಾಯಾವಿ ಶಕ್ತಿಯಿದೆ. ಯಾವತ್ತೂ ನಾವಿರಬೇಕು ಇನ್ನೊಬ್ಬರ ಭಾವ ಮತ್ತು ಪರಿಸರದಲ್ಲಿ. ದರ್ಪ, ದುರಭಿಮಾನ, ಅಹಂ ಇವುಗಳೇ ಸಮಸ್ಯೆಯ ಮೂಲ ನಿವಾಸಿಗಳು. ಅವುಗಳನ್ನು ತುಸು ಬದಿಗೆ ಸರಿಸಿದರೂ ಸಾಕು ಸುಖದ ತಂಗಾಳಿ ತಪ್ಪದೆ ಬೀಸುತ್ತದೆ. ಹಾಗೆ ಪ್ರೀತಿ ಪಾತ್ರರ ಮೇಲೆ ಬೀಸೋಣ ತಂಗಾಳಿಯನ್ನು. ಅಚ್ಚರಿ ಬೇಡ. ತಿರುಗಿ ಆ ಪ್ರೀತಿಯ ತಂಗಾಳಿ ನಮ್ಮತ್ತಲೇ ಬೀಸಲಿದೆ. ಅದು ಪ್ರಕೃತಿ ನಿಯಮ.
Related Articles
Advertisement