Advertisement

ಮಧ್ಯವರ್ತಿ ವ್ಯವಸ್ಥೆ ತಡೆ: ಕೃಷಿ ಉತ್ಪನ್ನ ರೈತರಿಂದ ನೇರ ಗ್ರಾಹಕರಿಗೆ

02:30 PM Jan 02, 2018 | Team Udayavani |

ಮಹಾನಗರ: ಜಿಲ್ಲೆಯ ರೈತರು ಬೆಳೆದ ಸಾವಯವ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಮಂಗಳೂರಿನಲ್ಲಿ ಮೊದಲ ಬಾರಿಗೆ ಸರಕಾರದಿಂದಲೇ ಸಾವಯವ ಸಂತೆ ನಡೆಸಲು ಚಿಂತಿಸಲಾಗಿದೆ. ಇದಕ್ಕಾಗಿ ಅಳಕೆ ಮಾರುಕಟ್ಟೆಯಲ್ಲಿ ಜಾಗವನ್ನೂ ಗೊತ್ತುಪಡಿಸಲಾಗಿದೆ.

Advertisement

ಸಾವಯವ ಉತ್ಪನ್ನಗಳನ್ನು ಬೆಳೆದ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇತ್ತೀಚೆಗೆ ಮಂಗಳೂರಿನ ಕದ್ರಿಪಾರ್ಕ್‌ನಲ್ಲಿ ಸಾವಯವ ಮೇಳ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿ ಸಚಿವ ಕೃಷ್ಣ ಭೈರೇ ಗೌಡ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಸಾವಯವ ಕೃಷಿಕರಿಗೆ ತಾವು ಬೆಳೆದ ಬೆಳೆಗಳನ್ನು ನೇರ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲು ಸಾವಯವ ಸಂತೆ ತೆರೆಯುವ ನಿಟ್ಟಿನಲ್ಲಿ ಕಾರ್ಯಯೋಜಿಸುವಂತೆ ಶಾಸಕ ಜೆ. ಆರ್‌. ಲೋಬೋ ಅವರಲ್ಲಿ ಮನವಿ ಮಾಡಿದ್ದರು. ಇದೀಗ ಶಾಸಕರು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಸಾವಯವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಾವಯವ ಸಂತೆ ತೆರೆಯಲು ಮುಂದಾಗಿದ್ದಾರೆ.

“ಅಳಕೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುಕಟ್ಟೆಯಲ್ಲೇ ಸಾವಯವ ಸಂತೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ಎಷ್ಟು ರೈತರಿಗೆ ಅವಕಾಶ ನೀಡಲಾಗುವುದು, ಸ್ಥಳಾವಕಾಶ ಹೇಗೆ ಎಂಬುದರ ತೋಟಗಾರಿಕೆ ಇಲಾಖೆಯ ಅಧಿಕಾರಿ ಗಳೊಂದಿಗೆ ಚರ್ಚಿಸಿದ ಬಳಿಕವಷ್ಟೇ ನಿರ್ಧರಿಸಲಾಗುವುದು’ ಎಂದು ಜೆ. ಆರ್‌. ಲೋಬೋ “ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.

ವಾರಕ್ಕೊಮ್ಮೆ ವ್ಯಾಪಾರ
ಸುಮಾರು ಮೂರು ತಿಂಗಳಲ್ಲಿ ಮಾರುಕಟ್ಟೆ ಸಿದ್ಧವಾಗಲಿದ್ದು, ಬಳಿಕ ಸಾವ ಯವ ಕೃಷಿಕರು ಈ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲಿದ್ದಾರೆ. ಆದರೆ ಮಾರು ಕಟ್ಟೆಯಲ್ಲಿ ಪ್ರತಿದಿನ ವ್ಯವಹಾರ ನಡೆದರೆ, ಸಾವಯವ ರೈತರಿಗೆ ಮಾತ್ರ ವಾರಕ್ಕೊಮ್ಮೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಗ್ರಾಹಕರ ಪ್ರತಿ ಕ್ರಿಯೆ ಮತ್ತು ಆಸಕ್ತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಪ್ರತಿದಿನ ಮಾರಾಟಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಧರಿಸಲಾಗುತ್ತಿದೆ.

ನಗರದಲ್ಲಿ  ಈಗಾಗಲೇ ಸಂತೆ ನಡೆಯುತ್ತಿದೆ
ಮಂಗಳೂರಿನಲ್ಲಿ ನಾಲ್ಕು ವರ್ಷಗಳಿಂದ ಸಾವಯವ ಸಂತೆ ನಡೆಯುತ್ತಿದೆ. ಸಾವಯವ ಕೃಷಿಕ ಗ್ರಾಹಕ ಬಳಗವು ಪ್ರತಿವಾರ ಈ ಸಂತೆ ನಡೆಸುತ್ತಿದ್ದು, ಗ್ರಾಹಕರ ಸ್ಪಂದನೆಯೂ ಉತ್ತಮವಾಗಿದೆ. ಹಂಪನಕಟ್ಟೆ ಪಂಜೆ ಮಂಗೇಶರಾವ್‌ ರಸ್ತೆ ಬದಿಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ತನಕ ಸಂತೆ ನಡೆಯುತ್ತಿದೆ. ರೈತರು ತಾವೇ ಬೆಳೆದ ರಾಸಾಯನಿಮುಕ್ತ ತರಕಾರಿಗಳು, ಸೊಪ್ಪು ತರಕಾರಿಗಳು, ಬೇಳೆಕಾಳುಗಳನ್ನು ತಂದು ಮಾರಾಟದಲ್ಲಿ ತೊಡಗುತ್ತಾರೆ. ಇದೂ ಕೂಡ ಸಾವಯವ ಉತ್ಪನ್ನಗಳನ್ನು ರೈತರಿಂದ ನೇರ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಆರಂಭಗೊಂಡ ಕಾರ್ಯವಾಗಿದೆ. ಇಲ್ಲಿ ಮಾರಾಟಕ್ಕೆ ಬರುವ ರೈತರ ಕೃಷಿ ತೋಟಗಳಿಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಬಳಗದ ಸದಸ್ಯರು ತೆರಳಿ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. 

Advertisement

ಕದ್ರಿ ಪಾರ್ಕ್‌ ಬಳಿ ಸಂತೆ
ಇದೀಗ ಆರಂಭಿಕ ಹಂತವಾಗಿ ಅಳಕೆಯಲ್ಲಿ ಹೊಸದಾಗಿ ನಿರ್ಮಾಣವಾಗುವ ಮಾರುಕಟ್ಟೆಯಲ್ಲೇ ಸಾವಯವ ರೈತರಿಗೆ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಗ್ರಾಹಕರ ಸ್ಪಂದನೆ ನೋಡಿಕೊಂಡು ಬಳಿಕ ಅದನ್ನು ಕದ್ರಿ ಪಾರ್ಕ್‌ ಬಳಿಯ ಸ್ಥಳಕ್ಕೆ ಸ್ಥಳಾಂತರಿಸುವ ಚಿಂತನೆಯಿದೆ. ಕದ್ರಿ ಪಾರ್ಕ್‌ ಬಳಿ ಲಭ್ಯ ಸ್ಥಳಾವಕಾಶ ನೋಡಿಕೊಂಡು ಸಾವಯವ ಉತ್ಪನ್ನಗಳ ಮಾರಾಟಕ್ಕಾಗಿಯೇ ಪ್ರತ್ಯೇಕ ಮಾರುಕಟ್ಟೆ ತೆರೆಯುವ ಯೋಜನೆ ಶಾಸಕರ ಮುಂದಿದೆ. ಉಡುಪಿ ತೋಟಗಾರಿಕಾ ಇಲಾಖೆ ಬಳಿ ಇರುವ ದೊಡ್ಡಣಗುಡ್ಡೆಯಲ್ಲಿ ಸರಕಾರದ ವತಿಯಿಂದ ಕಳೆದೊಂದು ತಿಂಗಳಿನಿಂದ ಆರಂಭವಾಗಿರುವ ಸಾವಯವ ಸಂತೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಸಂತೆ ತೆರೆಯಲು ಉತ್ಸುಕತೆ ತೋರಲಾಗುತ್ತಿದೆ.

ಖಾತರಿಗೇನು ಕ್ರಮ?
ನಮ್ಮ ಬಳಗದಿಂದ ನಡೆಯುತ್ತಿರುವ ಸಾವಯವ ಸಂತೆಯಲ್ಲಿ ವರ್ಷಕ್ಕೆ ಕನಿಷ್ಠ ಎರಡು ಸಲವಾದರೂ ರೈತರ ತೋಟಕ್ಕೆ ತೆರಳಿ ಪರೀಕ್ಷಿಸಲಾಗುತ್ತದೆ. ಇದರಿಂದ ಯಾವುದೇ ಮೋಸವಿಲ್ಲದೆ ಗ್ರಾಹಕರಿಗೆ ಸಂಪೂರ್ಣ ರಾಸಾಯನಿಕ ಮುಕ್ತವಾಗಿರುವ ಸಾವಯವ ಉತ್ಪನ್ನಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಆದರೆ ಸರಕಾರದ ವತಿಯಿಂದ ನಡೆಸಲ್ಪಡುವ ಸಾವಯವ ಉತ್ಪನ್ನಗಳ ಮಾರಾಟದಲ್ಲಿ ಇಂತಹ ಗುಣಮಟ್ಟವನ್ನು ನಿರ್ಧರಿಸಲು ಸಾಧ್ಯವೇ ಮತ್ತು ಸಾವಯವ ಹೆಸರಿನಲ್ಲಿ ರಾಸಾಯನಿಕ ಸಿಂಪಡಿಸಿದ ಕೃಷಿ ಉತ್ಪನ್ನಗಳನ್ನೂ ಮಾರಾಟ ಮಾಡುತ್ತಿಲ್ಲವೆಂದು ಖಾತರಿ ಪಡಿಸುವುದಕ್ಕೆ ಏನಾದರೂ ಕ್ರಮಗಳಿವೆ? ಈಗಾಗಲೇ ಬೆಂಗಳೂರಿನಲ್ಲಿ ಸರಕಾರದಿಂದಲೇ ನಡೆಸಲ್ಪಡುವ 240 ಸಾವಯವ ಮಳಿಗೆಗಳಿವೆ. ಆದರೆ ಅಲ್ಲಿ ಸಾವಯವ ಉತ್ಪನ್ನಗಳೇ ಮಾರಾಟವಾಗುತ್ತಿವೆ ಎಂಬುದಕ್ಕೆ ಖಾತರಿ ಇಲ್ಲ. ಖಾತರಿ ಪಡಿಸಲು ಸರಕಾರದ ಬಳಿಯೂ ವ್ಯವಸ್ಥೆ ಇಲ್ಲ.
ಅಡ್ಡೂರು ಕೃಷ್ಣರಾವ್‌, ಅಧ್ಯಕ್ಷ ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು

 ಧನ್ಯಾ ಬಾಳೆಕಜ

Advertisement

Udayavani is now on Telegram. Click here to join our channel and stay updated with the latest news.

Next