Advertisement

ಮಧ್ಯಸ್ಥಿಕೆ ಸಂಸ್ಕೃತಿ ಅವಿಭಾಜ್ಯ ಅಂಗ: ನ್ಯಾ|ನರೇಂದ್ರ

12:22 PM Jul 15, 2017 | Team Udayavani |

ಕಲಬುರಗಿ: ಮಧ್ಯಸ್ಥಿಕೆ ವ್ಯವಸ್ಥೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಹಿಂದಿನ ಕಾಲದಲ್ಲಿ ವಿವಿಧ ವ್ಯಾಜ್ಯಗಳ ಪರಿಹಾರಕ್ಕಾಗಿ ಈ ಮಧ್ಯಸ್ಥಿಕೆ (ಪಂಚಾಯಿತಿ ಕಟ್ಟೆ) ವ್ಯವಸ್ಥೆಯನ್ನೇ ಬಳಸಲಾಗುತ್ತಿತ್ತು. ಈ ವ್ಯವಸ್ಥೆ ಮೂಲಕ ನ್ಯಾಯವಾದಿಗಳು ಉತ್ತಮ ಕೌಶಲ್ಯ, ಕಲೆ ಮೂಲಕ ಕಕ್ಷಿದಾರರ ವ್ಯಾಜ್ಯಗಳನ್ನು ಪರಿಹರಿಸಲು ಶ್ರಮಿಸಬೇಕೆಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಜಿ. ನರೇಂದ್ರ ತಿಳಿಸಿದರು.

Advertisement

ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಎ.ಡಿ.ಆರ್‌. ಸಭಾಭವನದಲ್ಲಿ ಬೆಂಗಳೂರು ಮತ್ತು ಕಲಬುರಗಿ ಮಧ್ಯಸ್ಥಿಕೆ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಿದ ಮಧ್ಯಸ್ಥಿಕೆದಾರರ ಪುನಶ್ಚೇತನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ಎ. ಪಾಟೀಲ ಮಾತನಾಡಿ, ಮಧ್ಯಸ್ಥಿಕೆ, ಲೋಕ ಅದಾಲತ್‌ ಮತ್ತು ಕೌನ್ಸಿಲೇಶನ್‌ ಮೂಲಕ ನ್ಯಾಯಾಲಯಗಳಲ್ಲಿನ ವಿವಿಧ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಮೂಲಕ ಕ್ರಮ ಅನುಸರಿಸುತ್ತಿದೆ ಎಂದು ಹೇಳಿದರು.

ಕಕ್ಷಿದಾರರೇ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳುವಲ್ಲಿ ಮಧ್ಯಸ್ಥಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಮಧ್ಯಸ್ಥಿಕೆದಾರರು ಹೊಸ ಕಾನೂನು, ಆಲೋಚನೆ ಹಾಗೂ ಸಾಮಾನ್ಯ ತಿಳಿವಳಿಕೆ ಮುಂತಾದವುಗಳ ಮೂಲಕ ಕಕ್ಷಿದಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.
ಮಧ್ಯಸ್ಥಿಕೆದಾರರು ಓರ್ವ ವೈದ್ಯ ಚಿಕಿತ್ಸಕರಂತೆ ಕಾರ್ಯನಿರ್ವಹಿಸಬೇಕು ಅಲ್ಲದೇ ಕಕ್ಷಿದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಶಿಸ್ತು, ತಾಳ್ಮೆಯೊಂದಿಗೆ ಸಂಪೂರ್ಣ ಕಾನೂನು ಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ವಿ. ಪಾಟೀಲ ಮಾತನಾಡಿ, ಪರ್ಯಾಯ ವ್ಯಾಜ್ಯಗಳ ಇತ್ಯರ್ಥ ವ್ಯವಸ್ಥೆಯಲ್ಲಿ ಮಧ್ಯಸ್ಥಿಕೆ ಒಂದು ಉತ್ಕೃಷ್ಟ ವ್ಯವಸ್ಥೆಯಾಗಿದೆ. ಮಧ್ಯಸ್ಥಿಕೆದಾರರು ಕಾಲ ಕಾಲಕ್ಕೆ ಬದಲಾಗುವ ಕಾನೂನುಗಳ ತಿಳಿವಳಿಕೆ ಹಾಗೂ ಸಮರ್ಥ ಕೌಶಲ್ಯ ಪಡೆದು ಮಧ್ಯಸ್ಥಿಕೆಯಲ್ಲಿ ನಡೆಸುವ ಸಮಾಲೋಚನೆಯಲ್ಲಿ ಸಕ್ರಿಯ ಸಹಕಾರ 
ಕಲ್ಪಿಸುವುದರೊಂದಿಗೆ ಕಕ್ಷಿದಾರರೇ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳುವ ವಾತಾವರಣ ಸೃಷ್ಟಿಸಬೇಕು ಎಂದರು. ಮಧ್ಯಸ್ಥಿಕೆದಾರರು ಮಧ್ಯಸ್ಥಿಕೆಯನ್ನು ಸಮರ್ಪಣಾ ಮನೋಭಾವದಿಂದ, ಪರಿಪೂರ್ಣತೆ, ಸಕಾರಾತ್ಮಕ ಭಾವನೆ ಮತ್ತು ರಚನಾತ್ಮಕ ಚಿಂತನೆಯಿಂದ ನಿರಂತರ ಪರಿಶ್ರಮಪಟ್ಟರೆ ಮಧ್ಯಸ್ಥಿಕೆಯಲ್ಲಿ ಶೇ. 100ರಷ್ಟು ಯಶಸ್ಸು ಸಾ ಧಿಸಬಹುದು ಎಂದರು.

ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಆರ್‌. ಕೆ. ಹಿರೇಮಠ, ಹೈಕೋರ್ಟ್‌ ಪೀಠದ ಹೆಚ್ಚುವರಿ ರಜಿಸ್ಟ್ರಾರ್‌ ಜನರಲ್‌ ಕೆ.ಬಿ. ಅಸುದೆ, ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಮಂಜುಳಾ ತೇಜಸ್ವಿ , ವೃಂದಾ ನಂದಕುಮಾರ, ಕರ್ನಾಟಕ ವಕೀಲರ ಪರಿಷತ್‌ನ ಸದಸ್ಯ ಕಾಶೀನಾಥ ಮೋತಕಪಲ್ಲಿ ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ ಸ್ವಾಗತಿಸಿದರು. ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ನವೀನ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next