ಗಂಗಾವತಿ: ಸರಕಾರಿ ಭೂಮಿಯನ್ನು ದಶಕಗಳಿಂದ ಸಾಗುವಳಿ ಮಾಡುವ ಬಡ ಮತ್ತು ಮಧ್ಯಮ ವರ್ಗದ ರೈತರು, ಕೃಷಿ ಕೂಲಿಕಾರರಿಗೆ ಸಮಿಶ್ರ ಸರಕಾರ ಸಾಗುವಳಿ ಚೀಟಿ ನೀಡಲು ಅರ್ಜಿ ಸ್ವೀಕಾರ ಮಾಡುವ ಆದೇಶ ಹೊರಡಿಸಿದೆ. ಈಗಾಗಲೇ ಸರಕಾರದ ಮುಖ್ಯಕಾರ್ಯದರ್ಶಿಗಳು ಆಯಾ ಜಿಲ್ಲಾಧಿಕಾರಿಗೆ ಸುತ್ತೋಲೆ ಹೊರಡಿಸಿ ಸತತವಾಗಿ ಸರಕಾರಿ ಭೂಮಿ ಸಾಗುವಳಿ ಮಾಡುವ ಭೂ ರಹಿತ ಕೃಷಿಕೂಲಿಕಾರರಿಗೆ, ಕೃಷಿಕರಿಗೆ 5 ಎಕರೆ ಒಳಗೆ ಭೂಮಿ ಪಟ್ಟಾ ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
ಅರ್ಜಿ ಸ್ವೀಕಾರ ಕ್ರಮ ಕುರಿತು ಕೆಲ ಸಲಹೆಗಳನ್ನು ನೀಡಿದ್ದು ನೇರವಾಗಿ ಸಾಗುವಳಿ ಚೀಟಿ ಪಡೆಯಲು ತಹಶೀಲ್ದಾರ್ ಕಚೇರಿಯಿಂದ ಹಣ ಪಾವತಿಸಿ ಅರ್ಜಿ ಪಡೆದು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಪುನಃ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಲು ಕ್ರಮ ವಹಿಸುವಂತೆ ಸಲಹೆ ನೀಡಲಾಗಿದೆ. ಆದರೆ ಫಾರಂ 57 ಅರ್ಜಿ ಸಲ್ಲಿಸಲು ಕೆಲ ಮಧ್ಯವರ್ತಿಗಳು ಖಾಸಗಿ ಟೈಪಿಂಗ್ ಸೆಂಟರ್ ಮತ್ತು ಅರ್ಜಿ ಮಾರಾಟ ಮಾಡುವ ಅಂಗಡಿಗಳಲ್ಲಿ ಫಾರಂ 57 ಪಡೆದು, ಭರ್ತಿ ಮಾಡಿ ಅಫಿಡವಿಟ್ ಸೇರಿ ಅಗತ್ಯ ದಾಖಲಾತಿಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಲು 5-10 ಸಾವಿರ ರೂ. ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಸೂಕ್ತ ಮಾರ್ಗದರ್ಶನ ಮಾಡಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇನ್ನೂ ಕೆಲವೆಡೆ ಸಾಗುವಳಿ ಚೀಟಿ ಪಡೆಯಲು ಅರ್ಜಿ ಸಲ್ಲಿಸುವ ಮಾಹಿತಿಯೇ ಇಲ್ಲ. ಪ್ರತಿ ಗ್ರಾಮದಲ್ಲಿ ಸ್ಥಳೀಯ ಗ್ರಾಮಲೆಕ್ಕಾಧಿಕಾರಿ ಕಂದಾಯ ನಿರೀಕ್ಷಕರು ವ್ಯಾಪಕ ಪ್ರಚಾರ ನಡೆಸಬೇಕೆಂಬ ನಿಯಮವಿದ್ದರೂ ಇದುವರೆಗೂ ಎಲ್ಲಿಯೂ ಅರ್ಜಿ ಸಲ್ಲಿಸುವಂತೆ ಪ್ರಚಾರ ನಡೆಸಿಲ್ಲ ಎನ್ನಲಾಗುತ್ತಿದೆ.
ಭೂಮಿ ರಹಿತ ಕೃಷಿಕೂಲಿಕಾರರು ಸರಕಾರದ ಭೂಮಿಯನ್ನು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೆ ಅದನ್ನು ಬಗರ್ ಹುಕುಂ ಸಾಗುವಳಿ ಎಂದು ಪರಿಗಣಿಸಲಾಗುತ್ತದೆ. ತಹಶೀಲ್ದಾರ್ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಸರಕಾರ ಸೂಚನೆ ನೀಡಿದೆ. ಮಧ್ಯವರ್ತಿಗಳ ಹಾವಳಿಯಿಂದ ಸಾಗುವಳಿದಾರರು ಸಾವಿರಾರು ರೂ. ಕಳೆದುಕೊಳ್ಳುವ ಭೀತಿ ಇದ್ದು ಆಯಾ ತಹಶೀಲ್ದಾರ್‌ರು ಮುನ್ನೆಚ್ಚರಿಕೆಯಿಂದ ಅರ್ಜಿ ವಿತರಣೆ-ಸ್ವೀಕರಿಸುವ ವ್ಯವಸ್ಥೆ ಮಾಡಬೇಕಿದೆ.
ಬಗರ್‌ಹುಕುಂ ಸಾಗುವಳಿದಾರರು ಸಾಗುವಳಿ ಚೀಟಿ (ಪಟ್ಟಾ) ಪಡೆಯಲು ತಹಶೀಲ್ದಾರ್ ಕಚೇರಿಗೆ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸಾಗುವಳಿದಾರರು ಅರ್ಜಿ ಸಲ್ಲಿಸಬೇಕು. ಮಧ್ಯವರ್ತಿಗಳ ಹಾವಳಿಯನ್ನು ತಪಿಸಲು ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಣವಸೂಲಿ ಮಾಡುವ ಆರೋಪಗಳಿದ್ದು ಸಾಗುವಳಿದಾರರು ನಿಗದಿತ ಶುಲ್ಕ ಮಾತ್ರ ಪಾವತಿಬೇಕು. ತಹಶೀಲ್ದಾರ್ ಕಚೇರಿಯಲ್ಲಿ ಪಡೆದ ಫಾರಂ 57ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಪ್ರತಿ ತಹಶೀಲ್ದಾರ್ ಕಚೇರಿಯಲ್ಲಿ ಬಗರ್‌ಹುಕುಂ ಸಾಗುವಳಿ ಚೀಟಿ ಪಡೆಯಲು ಅರ್ಜಿ ಸಲ್ಲಿಸುವ ಪ್ರತೇಕ ಕೌಂಟರ್ ಆರಂಭಿಸಿ ಏಕಗವಾಕ್ಷ ಪದ್ಧತಿಯಂತೆ ಅರ್ಜಿ ಸ್ವೀಕರಿಸಬೇಕು.
-ಕುಮಾರ ಸಮತಳ,
ಸದಸ್ಯರು ಭೂಮಿ ವಸತಿ ಮೇಲ್ವಿಚಾರಣಾ
ಉನ್ನತ ಮಟ್ಟದ ಸಮಿತಿ.
ಕೆ. ನಿಂಗಜ್ಜ