Advertisement

ಮಧ್ಯಂತರ ಪರಿಹಾರ ಸಾಧ್ಯವೇ ಇಲ್ಲ: ಹೈಕೋರ್ಟ್‌

11:40 PM Aug 30, 2019 | Team Udayavani |

ಬೆಂಗಳೂರು: ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿದ್ದ ಹಿನ್ನೆಲೆಯಲ್ಲಿ “ಬಂಧಿಸದಂತೆ ಮಧ್ಯಂತರ ರಕ್ಷಣೆ’ ಕೋರಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಈಗಾಗಲೇ ಪ್ರಕರಣದ ತೀರ್ಪು ಪ್ರಕಟಿಸಲಾಗಿದ್ದು, ಏನಾದರೂ ತಾಂತ್ರಿಕ ಅಂಶಗಳಿದ್ದರೆ ಪರಿಗಣಿಸಬಹುದು. ಆದರೆ, ಅದೇ ತೀರ್ಪು ಮಾರ್ಪಾಡು ಮಾಡುವುದು ಅಥವಾ ಯಾವುದೇ ರೀತಿಯ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಹೈಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ್‌ ಕುಮಾರ್‌ ಅವರು, ಈಗಾಗಲೇ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸಂವಿಧಾನದ ಪರಿಚ್ಛೇದ 226 ಹಾಗೂ ಸಿಆರ್‌ಪಿಸಿ ಸೆಕ್ಷನ್‌ 482ಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ತೀರ್ಪು ನೀಡಲಾಗಿದೆ. ವಿಚಾರಣೆ ವೇಳೆ ಎಲ್ಲ ಆಯಾಮಗಳನ್ನು ಸಮರ್ಪಕವಾಗಿ ಪರಾಮರ್ಶಿಸಲಾಗಿದೆ.

ಪ್ರಕರಣದ ವಿಚಾರಣೆ ಹಂತದಲ್ಲಿ ಹಲವು ಬಾರಿ ಅರ್ಜಿದಾರರಿಗೆ ಮಧ್ಯಂತರ ಪರಿಹಾರ ಕೊಡಲಾಗಿದೆ. ಹಾಗಾಗಿ, ಈ ಹಂತದಲ್ಲಿ ಆದೇಶ ಮಾರ್ಪಾಡು ಮಾಡುವುದು ಅಥವಾ ಮಧ್ಯಂತರ ಪರಿಹಾರ ನೀಡುವುದು ನನ್ನ ಪರಿಧಿಗೆ ಬರುವುದಿಲ್ಲ ಎಂದು ಹೇಳಿ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದರು. ವಿಚಾರಣೆ ವೇಳೆ ಡಿ.ಕೆ. ಶಿವಕುಮಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ, ಸಮನ್ಸ್‌ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸಂಜೆ ರದ್ದುಗೊಳಿಸಿ ನ್ಯಾಯಾಲಯ ಆದೇಶಿಸಿದೆ.

ಅದರ ಬೆನ್ನಲ್ಲೇ ರಾತ್ರಿ 10 ಗಂಟೆಗೆ ಸಮನ್ಸ್‌ ನೀಡಿ, ಮರು ದಿನ (ಶಕ್ರವಾರ) ಮಧ್ಯಾಹ್ನ 1 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ತರಾತುರಿಯಲ್ಲಿ ಸಮನ್ಸ್‌ ನೀಡಿದ್ದಾರೆ. ಹಾಗಾಗಿ, ಮಧ್ಯಂತರ ರಕ್ಷಣೆ ನೀಡಬೇಕು ಎಂದು ಕೋರಿದರು. ಅಲ್ಲದೇ, ಸಮನ್ಸ್‌ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿರುವ ಏಕಸದಸ್ಯ ನ್ಯಾಯಪೀಠದ ತೀರ್ಪು ಮೇಲ್ಮನವಿ ಸಲ್ಲಿಸಬೇಕಾದ ತೀರ್ಪು ಆಗಿದೆ.

Advertisement

ಹಾಗಾಗಿ, ಮೇಲ್ಮನವಿ ಸಲ್ಲಿಸಲು ನಮಗೆ ಕಾಲಾವಕಾಶಬೇಕು ಎಂದು ವಕೀಲರು ಮನವಿ ಮಾಡಿದರು. ತೀರ್ಪಿನ ಪ್ರತಿ ವೆಬ್‌ಸೈಟ್‌ನಲ್ಲಿ ಪ್ರಕಟಿಲಾಗಿದೆ. ಇಂದೇ (ಶುಕ್ರವಾರ) ಮೇಲ್ಮನವಿ ಸಲ್ಲಿಸಬಹುದಲ್ವಾ? ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು. ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಬೇಕು ಎಂದು ಕೇಳಿದ್ದಕ್ಕೆ ಶನಿವಾರ ಹಾಜರಾಗುತ್ತೀರಾ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.

ಅದಕ್ಕೆ, ಬಂಧಿಸುವುದಿಲ್ಲ ಎಂಬ ಮಧ್ಯಂತರ ರಕ್ಷಣೆ ಸಿಗದಿದ್ದರೆ ಹಾಜರಾಗುವುದು ಹೇಗೆ? ಅದಕ್ಕಾಗಿ ಮಧ್ಯಂತರ ರಕ್ಷಣೆ ನೀಡಬೇಕು ಎಂದು ವಕೀಲರು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲ ಎಂ.ಬಿ. ನರಗುಂದ, ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ಸೇರಿ ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ನೀಡಿದ್ದು,

ಅರ್ಜಿಯ ವಿಚಾರಣೆಗೆ ಮುಗಿಯುವವರೆಗೆ. ಈಗ ವಿಚಾರಣೆ ಮುಗಿದು ನ್ಯಾಯಪೀಠ ಅಂತಿಮ ತೀರ್ಪು ಕೊಟ್ಟಿದೆ. ಮಧ್ಯಂತರ ರಕ್ಷಣೆ ಈಗ ಅನ್ವಯವಾಗುವುದಿಲ್ಲ. ಹಾಗಾಗಿ, ಅರ್ಜಿ ವಜಾಗೊಳಿಸಬೇಕು ಮತ್ತು ಯಾವುದೇ ಮಧ್ಯಂತರ ರಕ್ಷಣೆ ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next