ಬೆಂಗಳೂರು: ರಸ್ತೆ ಅಗಲೀಕರಣ ಕಾಮಗಾರಿಗೆ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ಜಾಮಿಯಾ ಮಸೀದಿ ಕಟ್ಟಡ ತೆರವುಗೊಳಿಸದಂತೆ ಮೈಸೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಈ ಕುರಿತು ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಡಾ. ಪ್ರಸಾದ್ ಸ್ಮಾರಕ ಆರೋಗ್ಯ ಕೇಂದ್ರ ಹಾಗೂ ಜಾಮೀಯಾ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಕಟ್ಟಡಗಳನ್ನು ತೆರವುಗೊಳಿಸಿದಂತೆ 8 ವಾರಗಳ ಕಾಲ ಮಧ್ಯಂತರ ತಡೆಯಾಜ್ಞೆ ನೀಡಿ, ಮೈಸೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿಗೊಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಇರ್ವಿನ್ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನಿರ್ಮಿಸಲ್ಪಟ್ಟಿದ್ದು, ನಗರದ ಪಾರಂಪರಿಕ ಕಟ್ಟಡಗಳಲ್ಲೊಂದಾಗಿದೆ. ಅಂತೆಯೇ ಡಾ. ಪ್ರಸಾದ್ ಸ್ಮಾರಕ ಆರೋಗ್ಯ ಕೇಂದ್ರದಲ್ಲಿ ಕಡಿಮೆ ವೆಚ್ಚದಲ್ಲಿ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಅಲ್ಲಿರುವ ಕಟ್ಟಡಗಳ ತೆರವಿಗೆ ಪಾಲಿಕೆ ಮುಂದಾಗಿದೆ ಎಂದು ವಿವರಿಸಿದರು.
ಅರ್ಜಿದಾರರಿಗೆ ಸೇರಿದ ಸ್ವತ್ತನ್ನು ಮಾರಾಟ ಕ್ರಯ ಪತ್ರ ಮಾಡಿಕೊಡುವಂತೆ ಮೈಸೂರು ಮಹಾನಗರ ಪಾಲಿಕೆ ನೋಟಿಸ್ ನೀಡಿತ್ತು. ಆದರೆ, ಅರ್ಜಿದಾರರು ಸ್ವತ್ತು ಬಿಟ್ಟುಕೊಡಲು ಸಿದ್ಧರಿಲ್ಲ. ಇದೀಗ ಆ ಭಾಗದಲ್ಲಿರುವ ಕೆಲ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಅರ್ಜಿದಾರರ ಕಟ್ಟಡಗಳನ್ನೂ ತೆರವುಗೊಳಿಸುವ ಸಾಧ್ಯತೆ ಇದೆ. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಕಟ್ಟಡಗಳನ್ನು ತೆರವುಗೊಳಿಸದಂತೆ ಪಾಲಿಕೆಗೆ ನಿರ್ದೇಶಿಸಬೇಕೆಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ ಕಾನೂನು ಪ್ರಕಾರ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಅರ್ಜಿದಾರರ ಕಟ್ಟಡಗಳನ್ನು ತೆರವುಗೊಳಿಸದಂತೆ ನಿರ್ದೇಶಿಸಿ, ಕಟ್ಟಡ ತೆರವು ಕಾರ್ಯಾಚರಣೆಗೆ 8 ವಾರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು.