Advertisement

ಮಧ್ಯಂತರ ಚುನಾವಣೆ ಅಸಾಧ್ಯ: ಡಿಸಿಎಂ ಕಾರಜೋಳ

06:47 PM Jun 09, 2021 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಮಧ್ಯಂತರ ಚುನಾವಣೆಗಾಗಿ ಕಾಂಗ್ರೆಸ್‌ ಕಾಯುತ್ತಿದೆ. ಅದಕ್ಕಾಗಿ 224 ಕ್ಷೇತ್ರಗಳಲ್ಲೂ ಈಗಾಗಲೇ ಅಭ್ಯರ್ಥಿಗಳನ್ನು ನಿಗದಿ ಮಾಡಿ, ಕೆಲಸವನ್ನೂ ಹಚ್ಚಿದ್ದಾರೆ. ಆದರೆ, ಕಾಂಗ್ರೆಸ್‌ ಆಸೆ ಈಡೇರುವುದಿಲ್ಲ. ಐದು ವರ್ಷ ಪೂರ್ಣಗೊಂಡ ಬಳಿಕವೇ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಪದೇ ಪದೇ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೇ ಅದಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಹೈಕಮಾಂಡ್‌ ಸೂಚಿಸಿದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದು, ಹೈಕಮಾಂಡ್‌ ಅಥವಾ ರಾಜ್ಯದಲ್ಲಾಗಲಿ ಸಿಎಂ ಬದಲಾವಣೆ ವಿಷಯವೇ ಇಲ್ಲ.

ಮಾಧ್ಯಮಗಳಲ್ಲಿ ಬರುತ್ತಿರುವ ಕಾರಣ, ರೆಕ್ಕೆಪುಕ್ಕ ಹಚ್ಚುವ ಕೆಲಸ ನಡೆಯುತ್ತಿದೆ. ನಮ್ಮ ಪಕ್ಷದ ಎದುರು ಸಿಎಂ ಬದಲಾವಣೆ ಅಜೆಂಡಾ ಇಲ್ಲ. ಅವಧಿ ಪೂರ್ಣಗೊಳ್ಳುವವರೆಗೂ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಇಂತಹ ಸುದ್ದಿಗಳಿಗೆ ಹೆಚ್ಚಿನ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಪ್ರತಿಪಕ್ಷ ಕಾಂಗ್ರೆಸ್ಸಿಗರು ಟೀಕೆ ಮಾಡುತ್ತಾರೆ. ಅವರಿಗೆ ಬಹಳ ಅವಸರವಾಗಿ ಚುನಾವಣೆ ಬರಬೇಕಿದೆ.

ಈಗಾಗಲೇ ಅಭ್ಯರ್ಥಿಗಳಿಗೆ ಕೆಲಸವೂ ಹಚ್ಚಿದ್ದಾರೆಂದು ಕೇಳಿದ್ದೇನೆ. ಅವರ ಆಸೆ ಈಡೇರುವುದಿಲ್ಲ. ಮಧ್ಯಂತರ ಚುನಾವಣೆ ಸಾಧ್ಯವಿಲ್ಲ. ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರಬೇಕೆಂದು ಹಗಲುಗನಸು ಕಾಣುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next