ನಿರೀಕ್ಷೆಯಂತೆ ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲ್ಪಟ್ಟ 2019-20ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ಅನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಮಧ್ಯಮ ವರ್ಗದ ನೌಕರರು, ಕಾರ್ಮಿಕ ವಲಯ, ಅಂಗನವಾಡಿ ಕಾರ್ಯಕರ್ತೆಯರು, ಮೀನುಗಾರರನ್ನು ದೃಷ್ಟಿಯಲ್ಲಿರಿಸಿಕೊಂಡು ಜನಾಕರ್ಷಣಾ ಬಜೆಟ್ ಅನ್ನು ಮಂಡಿಸಿದ್ದಾರೆ. ಅಲ್ಲದೇ ಉರಿ ಸಿನಿಮಾ ಹೆಸರನ್ನು ಉಲ್ಲೇಖಿಸಿ ಮಾತನಾಡಿದ ಗೋಯಲ್ ಗೋ ರಕ್ಷಣೆಗಾಗಿ ಕಾಮಧೇನು ಆಯೋಗ, ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ ಭರವಸೆ ನೀಡಿದೆ. ಮಧ್ಯವರ್ಗದ ನೌಕರರಿಗೆ ಬಂಪರ್ ಕೊಡುಗೆ ಎಂಬಂತೆ ಈ ಹಿಂದಿನ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಜತೆಗೆ ಒಂದೂವರೆ ಲಕ್ಷದ ರೂ.ಗಳ ಹೂಡಿಕೆ ಸೇರಿ ಒಟ್ಟು ಆರೂವರೆ ಲಕ್ಷದವರೆಗೆ ತೆರಿಗೆ ಪಾವತಿಸಬೇಕಾಗಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿದ ರೈತರಿಗೆ ವಾರ್ಷಿಕ 6 ಸಾವಿರ ರೂ. ನಗದು ಹಣ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ 12 ಕೋಟಿ ಸಣ್ಣ ರೈತರಿಗೆ ಅನುಕೂಲ. ಈ ಬಾರಿ ರೈಲು ಪ್ರಯಾಣ ದರದಲ್ಲಿ ಹೆಚ್ಚಳವಿಲ್ಲ. ಕರ್ನಾಟಕಕ್ಕೆ ಒಟ್ಟು ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಬಜೆಟ್ ನಲ್ಲಿ ನೀಡಲಾಗಿದೆ. ಎಸ್ ಸಿ, ಎಸ್ ಟಿ ಅನುದಾನ ಪ್ರಮಾಣದಲ್ಲೂ ಹೆಚ್ಚಳ, ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗಾಗಿ 93 ಸಾವಿರ ಕೋಟಿ ರೂ. ಅನುದಾನ, ಗೋಕುಲ ಮಿಷನ್ ಗೆ 750 ಕೋಟಿ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂಪಾಯಿ, ಎರಡೂ ಮನೆ ಇದ್ದರೂ ತೆರಿಗೆ ವಿನಾಯಿತಿ, ಸ್ಟ್ಯಾಂಡರ್ಡ್ ಡಿಡಕ್ಷನ್ 40 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ, ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ 24 ಗಂಟೆಗಳ ಒಳಗೆ ಪೂರ್ಣ, ತಕ್ಷಣವೇ ಮರುಪಾವತಿಗೂ ಕ್ರಮ..ಹೀಗೆ ಹಲವಾರು ಜನಾಕರ್ಷಣ ಯೋಜನೆಗಳನ್ನು ಘೋಷಿಸಿದೆ. ಕೇಂದ್ರ ಬಜೆಟ್ ಅನ್ನು ವಿಪಕ್ಷಗಳು ಟೀಕಿಸಿದ್ದರೆ, ಪ್ರಧಾನಿ ಮೋದಿ ಇದೊಂದು ಬಡವರ ಹಾಗೂ ಮಧ್ಯಮ ವರ್ಗದವರ ಬಜೆಟ್ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಾಲಮನ್ನಾ ಅಸ್ತ್ರ ಹೂಡಿರುವ ತಂತ್ರಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಮ ವರ್ಗದ ನೌಕರರನ್ನು ಗುರಿಯಾಗಿರಿಸಿ ತೆರಿಗೆ ವಿನಾಯಿತಿ ಹಾಗೂ ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ಮೂಲಕ ಬ್ರಹ್ಮಾಸ್ತ್ರ ಬಿಟ್ಟಿರುವುದಾಗಿ ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.