ವರ್ಷದ ಹನ್ನೆರಡು ತಿಂಗಳ ಪೈಕಿ ಜೂನ್ ಮಾಸ ವಿಶೇಷವಾದದ್ದು. ಏಕೆಂದರೆ ಹೆಚ್ಚಿನವರ ಹುಟ್ಟಿದ ದಿನಾಂಕ ಇದೇ ತಿಂಗಳಾಗಿರುತ್ತದೆ. ಅಂದರೆ ಬರ್ತ್‌ಡೇಗಳ ಪರ್ವದ ತಿಂಗಳಿದು. ಕೆಲವರದು ನಿಜವಾಗಿ ಜೂನ್ ತಿಂಗಳಿದ್ದರು, ಇನ್ನು ಕೆಲವರ ಜನ್ಮದಿನಾಂಕ ಶಾಲಾ ಶಿಕ್ಷಕರ ಕೃಪಾಕಟಾಕ್ಷದಿಂದ ಶಾಲೆಗೆ ಪ್ರವೇಶ ಪಡೆದ ದಿನದಂದೇ ಅನೇಕರ ಹುಟ್ಟಿದ ದಿನಾಂಕವಾಗಿರುತ್ತದೆ. ಹೀಗಾಗಿ ಜೂನ್ ತಿಂಗಳನ್ನು ಸಾರ್ವತ್ರಿಕ ಹುಟ್ಟುಹಬ್ಬ ಆಚರಿಸಿಕೊಳ್ಳುವವರ ತಿಂಗಳಾಗಿ ಆಚರಿಸಲು ತಮಾಷೆಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಒತ್ತಾಯಿಸುವುದು ನಾವು ಕಂಡಿರುತ್ತೇವೆ.
ನನ್ನ ವಿಷಯದಲ್ಲೂ ಕೂಡ ಅದೇ ಆಗಿದ್ದು. ಶಾಲಾ ಪ್ರವೇಶಾತಿ ಪಡೆಯಲು ನನ್ನಜ್ಜನೊಂದಿಗೆ ಹೋಗಿದ್ದೆ. ಆ ಶಿಕ್ಷಕರು ನನ್ನೆಲ್ಲ ಪರಿಚಯ ಬರೆದುಕೊಂಡರು. ಆ ಮೇಷ್ಟ್ರು ನನ್ನ ಅಜ್ಜನಿಗೆ ನಿಮ್ಮ ಮಗುವಿನ ಹುಟ್ಟಿದ ದಿನಾಂಕದ ಬಗ್ಗೆ ಕೇಳಿದಾಗ ತಡವರಿಸುತ್ತಾ ಅದ್ಯಾವುದೋ ಅಮಾಸ್ಯೆಗೊ, ಹುಣ್ಣಿಮೆಗೋ ಹುಟ್ಟಿದಾನೆ ನನಗೂ ಸರಿಯಾಗಿ ಗೊತ್ತಿಲ್ಲ ಎಂದುಬಿಟ್ಟರು.
ಜೂನ್ 8ರಂದು ನಾನು ಅಡ್ಮಿಶನ್‌ಗೆ ಹೋಗಿದ್ದರಿಂದ ಅಂದೇ ನಾನು ಜನ್ಮ ಪಡೆದಿದ್ದೆ. ಬಹುತೇಕರದು ಇದೇ ಕಥೆ. ಆದರೆ ನನ್ನ ಅಮ್ಮ ಜಾಣ್ಮೆ ವಹಿಸಿ ನನ್ನ ಹುಟ್ಟಿದ ದಿನಾಂಕ, ವಾರ, ಸಮಯ ಬರೆದಿಟ್ಟಿದ್ದರಿಂದ ನನ್ನ ಹುಟ್ಟಿದ ಹಬ್ಬವನ್ನು ಎಪ್ರಿಲ್ ತಿಂಗಳಲ್ಲಿ ಆಚರಿಸಿಕೊಳ್ಳುತ್ತಿರುವೆ. ಇಲ್ಲದಿದ್ದರೆ ನನ್ನದೂ ಹುಟ್ಟಿದ ದಿನ ಕೂಡ ಕೃತಕವಾಗಿರುತ್ತಿತ್ತು.
ಮೊದಲಿನ ಅಜ್ಜ-ಅಜ್ಜಿಯರು ತಮ್ಮ ಮಕ್ಕಳು ಜನ್ಮ ಪಡೆದರೆ ದಿನಾಂಕವನ್ನು ಬರೆದಿಡುವ ಗೋಜಿಗೆ ಹೋಗುತ್ತಿರಲಿಲ್ಲ. ಯಾವುದೋ ಹಬ್ಬಕ್ಕೊ, ನಮ್ಮೂರ ಜಾತ್ರೆಗೊ ಜನಿಸಿದ ಎಂಬ ಕುರುಹನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಇದೇ ಆಧಾರದ ಮೇಲೆ ಅವರ ಜನ್ಮದಿನಾಂಕವು ನಿರ್ಧಾರವಾಗುತಿತ್ತು. ಬರಬರುತ್ತಾ ಕಾಲ ಬದಲಾದಂತೆ ಹುಟ್ಟಿದ ದಿನಾಂಕ, ವಾರ, ನಕ್ಷತ್ರ, ಗಂಟೆ ನಿಮಿಷಾದಿಯಾಗಿ ಎಲ್ಲವನ್ನು ದಾಖಲಿಸಲಾಗುತ್ತಿದೆ. ಹಾಗಾಗಿ ಇಂದಿನ ಮಕ್ಕಳ ಜನ್ಮದಿನಾಂಕಗಳು ಸೇಫ್. ಆದರೆ ಈ ಮೊಬೈಲ್ ಯುಗ ಮತ್ತಷ್ಟು ಮುಂದಕ್ಕೆ ಹೋಗಿದೆ. ಒಂಬತ್ತು ತಿಂಗಳು ಗರ್ಭ ಧರಿಸಿದ ತಾಯಂದಿರು ತಮ್ಮ ಮಗು ಯಾವ ದಿನದಂದು ಹುಟ್ಟಬೇಕೆಂದು ಅವರೇ ತೀರ್ಮಾನಿಸುತ್ತಾರೆ.
ತಾವಂದುಕೊಂಡ ವಿಶೇಷ ದಿನದಂದೇ ಡೆಲಿವರಿ ಆಗಬೇಕೆಂದು ವೈದ್ಯರಿಗೆ ದುಂಬಾಲು ಬೀಳುತ್ತಾರೆ. ಇದಕ್ಕೆ ತಂದೆಯರು ಹೊರತಾಗಿಲ್ಲ. ತಾವು ದೇಶಭಕ್ತರಾಗಿದ್ದರೆ ಆಗಸ್ಟ್ 15ರಂದು, ಯಾವುದೋ ಸಿನೆಮಾ ಹೀರೋನ ಅಭಿಮಾನಿಯಾಗಿದ್ದರೆ ಅವನ ಜನ್ಮದಿನದಂದು ತಮ್ಮ ಮಗುವಿನ ಹುಟ್ಟುವನ್ನು ನಿಗದಿಪಡಿಸುತ್ತಾರೆ. ಇಂತಹ ಸೆಲ್ಫಿ ಕಾಲದಲ್ಲಿ ತಮ್ಮ ಶಿಶು ಜನಿಸಿದ ತತ್‌ಕ್ಷಣವೇ ಒಂದು ಸೆಲ್ಫಿಗೆ ಹಲ್ಲು ಗಿಂಜಿದರೆ ಸಾಕು, ಅಲ್ಲಿಯೆ ಎಲ್ಲವು ದಾಖಲಾಗಿಬಿಡುತ್ತದೆ. ಹಾಗಾಗಿ ಬರೆದಿಡುವ ಅನಿವಾರ್ಯತೆ ಇಲ್ಲ. ಆದ್ದರಿಂದ ಇಂದಿನ ಮಕ್ಕಳು ತಮ್ಮ ಹುಟ್ಟಿದ ದಿನದ ಬಗ್ಗೆ ಯಾವ ಅನುಮಾನವಿಲ್ಲದೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳ ಬಹುದಾಗಿದೆ.
ಅಂಬ್ರಿಶ್ ಎಸ್. ಹೈಯ್ನಾಳ್ , ಯುವ ಉದ್ಯಮಿ, ಯಾದಗಿರಿ