Advertisement

ಸೋಜಿಗದ ಜಗತ್ತಿನೊಳಗೊಂದು ಸುತ್ತು…

05:59 PM Apr 03, 2019 | Hari Prasad |

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

Advertisement

ಹಾರುತಿರುವ ಮೊಲಗಳೇ…
ಮನುಷ್ಯರ ಕ್ರೀಡಾಸ್ಫೂರ್ತಿಯನ್ನು ಮನಗಾಣಲು ಒಲಿಂಪಿಕ್ಸ್‌ ಕ್ರೀಡಾಕೂಟ ನೋಡಿದರೆ ಸಾಕು. ಭೂಮಂಡಲದ ದೇಶಗಳು ಮೆಡಲ್‌ ಪಡೆಯಲು ದಶಕಗಳ ಕಾಲ ಕಸರತ್ತು ನಡೆಸುತ್ತವೆ. ಮನುಷ್ಯನಿಗೆ ಕ್ರೀಡೆ ಎಷ್ಟೊಂದು ರಂಜನೀಯವೆಂದರೆ ತಾನು ಆಟವಾಡುವುದಲ್ಲದೆ, ಪ್ರಾಣಿಗಳನ್ನೂ ಕ್ರೀಡೆಗೆ ಬಳಸಿ ಅದರಲ್ಲಿ ಸಂತಸ ಹೊಂದುತ್ತಾನೆ. ಕುದುರೆ, ಒಂಟೆ, ಕೋಳಿ ಇವೆಲ್ಲವೂ ಮನುಷ್ಯನ ಕ್ರೀಡೆಯ ಚಪಲಕ್ಕೆ ಬಲಿಯಾಗಿವೆ. ಸ್ವೀಡನ್‌ ಒಂದು ಹೆಜ್ಜೆ ಮುಂದೆ ಹೋಗಿ ಮೊಲಗಳ ಎತ್ತರ ಜಿಗಿತ ಸ್ಪರ್ಧೆಯನ್ನು ನಡೆಸಿದೆ. ಅಲ್ಲಿ ಮೊಲಗಳ ಜಿಗಿತದ ರಾಷ್ಟ್ರೀಯ ಕ್ರೀಡಾಕೂಟವೇ ನಡೆಯುತ್ತದೆ. ಇದರಿಂದ ಪ್ರೇರಣೆ ಪಡೆದು ಅನೇಕ ಐರೋಪ್ಯ ದೇಶಗಳಲ್ಲದೆ, ಅಮೆರಿಕದಲ್ಲಿ ಕೂಡಾ ಈ ಜಿಗಿತ ಪಂದ್ಯಾವಳಿ ಏರ್ಪಡುತ್ತಿದೆ. ಅದನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಮೊಲಗಳ ಜಿಗಿತದ ಸ್ಪರ್ಧೆಯನ್ನು “ಕ್ಯಾನಿನ್‌ಹಾಪ್‌’ ಎಂದು ಕರೆಯಲಾಗುತ್ತದೆ. ದಶಕಗಳ ಹಿಂದೆ ಕುದುರೆ ಜಿಗಿತದ ಕ್ರೀಡೆಯ ನಿಯಮಗಳನ್ನೇ ಇದಕ್ಕೂ ಬಳಸಲಾಗುತ್ತಿತ್ತು. ಈಗ ಮೊಲಗಳಿಗೆ ಪ್ರತ್ಯೇಕ ನಿಯಮಾವಳಿಯೇ ರೂಪಿತವಾಗಿದೆ. ಇಲ್ಲಿಯತನಕ ಅತಿ ಎತ್ತರವನ್ನು (39.4 ಇಂಚು) ಹಾರಿದ ಗಿನ್ನೆಸ್‌ ದಾಖಲೆ ಸ್ವೀಡನ್‌ನ ಐಸೆಲ್‌ ಎಂಬ ಮೊಲದ ಹೆಸರಲ್ಲಿದೆ.

ಆಮೆ ಇಲ್ಲಿಂದಲೂ ಉಸಿರಾಡುತ್ತೆ!


ನೀರಿನೊಳಗೆ ಅತಿ ಹೆಚ್ಚು ಸಮಯ ಉಸಿರು ಬಿಗಿಹಿಡಿಯುವ ಪಂದ್ಯವನ್ನು ಯಾವತ್ತಿಗೂ ಆಮೆಯ ಜೊತೆ ಮಾಡದಿರುವುದೇ ಒಳಿತು. ಆಮೆ ಮತ್ತು ಮನುಷ್ಯರು ಉಸಿರಾಡುವುದು ಮೂಗಿನಲ್ಲೇ. ಅದರಲ್ಲೇನೂ ವ್ಯತ್ಯಾಸವಿಲ್ಲ. ಒಂದು ವೇಳೆ ಹಾಗೇನಾದರೂ ಆಮೆಗೂ ಮನುಷ್ಯರಿಗೂ ನಡುವೆ ಸ್ಪರ್ಧೆ ಏರ್ಪಟ್ಟರೆ ಆಮೆ ಜಯಶಾಲಿಯಾಗುವುದು ಖಚಿತ. ಅದು ಹೇಗೆಂದರೆ ನಾವು ಉಸಿರಾಡದಂತೆ ಮೂಗನ್ನು ಮುಚ್ಚಿ ಹಿಡಿಯಬಹುದು, ಆಮೆಯ ಮೂಗನ್ನೂ ಬಿಗಿಯಾಗಿ ಹಿಡಿಯಬಹುದು. ಆದರೆ ಮನುಷ್ಯರಂತೆ ಆಮೆಗಳು ಕೇವಲ ಒಂದೇ ಕಡೆಯಿಂದ ಉಸಿರಾಡುವುದಿಲ್ಲ. ಅವುಗಳು ದೇಹದ ಇನ್ನೊಂದು ಭಾಗದಿಂದಲೂ ಉಸಿರಾಟ ನಡೆಸಬಲ್ಲವು. ಅದು ಯಾವ ಭಾಗವೆಂದು ತಿಳಿದರೆ ಅಚ್ಚರಿ ಖಂಡಿತ. ಆ ಭಾಗ ಕುಂಡೆ! ಆಸ್ಟ್ರೇಲಿಯನ್‌ ಮತ್ತು ಸಾಗರದ ಕೆಲ ಆಮೆಗಳಲ್ಲಿ ಈ ಪ್ರವೃತ್ತಿಯನ್ನು ಕಾಣಬಹುದಾಗಿದೆ.

ಆಮೆಗಳು ಯಾವಾಗಲೂ ಅಲ್ಲಿಂದಲೇ ಉಸಿರಾಡುವುದಿಲ್ಲ, ಶೇ. 20 ಬಾರಿ ಮಾತ್ರವೇ ಕುಂಡೆಯಿಂದ ಉಸಿರಾಡುವುದು. ಅದಕ್ಕೂ ಕಾರಣವಿದೆ. ಆಮೆ ತಿಂಗಳಾನುಗಟ್ಟಲೆ ಕಾಲ ನೀರಿನಡಿ ನಿದ್ದೆ ಹೋಗುವುದುಂಟು. ಆಗ ಉಸಿರಾಟ ಮತ್ತು ದೇಹದ ಜೀವಿಕ ಕ್ರಿಯೆಗಳು ತಟಸ್ಥಗೊಂಡು, ನಿಧಾನಗತಿಯಲ್ಲಿ ಸಾಗುತ್ತವೆ. ಇದು ಏಕೆಂದರೆ ಆಹಾರ ತೆಗೆದುಕೊಳ್ಳದೇ ಇರುವುದರಿಂದ ದೇಹದಲ್ಲಿ ಲಭ್ಯ ಇರುವ ಶಕ್ತಿಯಲ್ಲೇ ಅಷ್ಟೂ ದಿನಗಳನ್ನು ದೂಡಬೇಕಾಗುತ್ತದೆ. ಹೀಗಾಗಿ ಹೆಚ್ಚು ಶ್ರಮವನ್ನು ಬೇಡುವ ಯಾವ ಚಟುವಟಿಕೆಯನ್ನೂ ಮಾಡುವುದಿಲ್ಲ. ಮೂಗಿನಿಂದ ಉಸಿರಾಡುವ ಪ್ರಕ್ರಿಯೆಯಲ್ಲಿ ಶ್ವಾಸಕೋಶ ಸೇರಿದಂತೆ ದೇಹದ ಹಲವು ಭಾಗಗಳು ಒಳ್ಳಗೊಳ್ಳುತ್ತವೆ. ಅದು ಹೆಚ್ಚಿನ ಶಕ್ತಿ ಬೇಡುತ್ತದೆ. ಅದೇ ಕುಂಡೆಯಿಂದ ನಡೆಯುವ ಉಸಿರಾಟದ ಪ್ರಕ್ರಿಯೆಗೆ ಹೆಚ್ಚು ಶಕ್ತಿ ಬೇಕಿಲ್ಲ.

— ಹರ್ಷವರ್ಧನ್‌ ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next