ಸ್ವತಂತ್ರ ಭಾರತದ ಏಕತೆಗೆ ಧಕ್ಕೆಯುಂಟುಮಾಡುವ ಇನ್ನೊಂದು ಅಂಶವೆಂದರೆ ಸೈದ್ಧಾಂತಿಕ ಸಂಘರ್ಷ. ಇಲ್ಲಿ ಎಡ ಪಂಥೀಯರಿಗೆ ಬಲಪಂಥೀಯರು ಅಸ್ಪೃಶ್ಯರಾದರೆ ಬಲ ಪಂಥೀಯರಿಗೆ ಎಡಪಂಥೀಯರು ಅಸ್ಪೃಶ್ಯರು. ಹೀಗಾಗಿ ಕ್ಷುಲ್ಲಕ ಕಾರಣಗಳಿಗಾಗಿ ಸಂಘರ್ಷ ನಡೆಯುತ್ತಿರುತ್ತದೆ.
ನಾವು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಸಂಭ್ರಮಿಸಿದ್ದಾಯಿತು. ಈ ಏಳು ದಶಕಗಳಲ್ಲಿ ತಕ್ಕಮಟ್ಟಿಗೆ ಬಡತನ ನೀಗಿಸಿದ್ದೇವೆ, ಸಾಕ್ಷರತೆ ಸಾಧಿಸಿದ್ದೇವೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಂತೂ ಅದ್ಭುತ ಸಾಧನೆ ಸಾಧಿಸಿ ಇಡೀ ಜಗತ್ತೇ ನಮ್ಮತ್ತ ಬಿಡುಗಣ್ಣಿಂದ ನೋಡುವಂತೆ ಮಾಡಿದ್ದೇವೆ. ಹೀಗಿದ್ದೂ ಕವಿ ಸಿದ್ದಲಿಂಗಯ್ಯನವರು “ಯಾರಿಗೆ ಬಂತು ಎಲ್ಲಿಗೆ ಬಂತು ನಲುವತ್ತೇಳರ ಸ್ವಾತಂತ್ರ್ಯ’ ಎಂದು ಪ್ರಶ್ನಿಸಿದ್ದಾರೆ. ಹಾಗೆಂದು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣಗೊಂಡಿದ್ದಲ್ಲಿ ಅದಕ್ಕೆ ಸ್ವತಂತ್ರ ಭಾರತಕ್ಕೆ ಕಪ್ಪು ಚುಕ್ಕೆಗಳಂತಿರುವ ಕೆಲವೊಂದು ಅನಿಷ್ಠಗಳೇ ಕಾರಣ. ಅತ್ತ ಒಂದಿಷ್ಟು ಚಿತ್ತ ಹರಿಸಬೇಕಿದೆ.
ಪರದಾಸ್ಯ ಶೃಂಖಲೆಯಿಂದ ಬಿಡುಗಡೆಗೊಂಡು 70 ಸಂವತ್ಸರಗಳು ಸಂದರೂ ನಾವು ನೆರೆಯ ಪರದೇಶಿಗರ ಭಯದಿಂದ ಮುಕ್ತರಾಗಿಲ್ಲ. ಅದರಲ್ಲೂ ನಮ್ಮ ಪಾರಂಪರಿಕ ಶತ್ರುರಾಷ್ಟ್ರವೆಂದೇ ಪರಿಗಣಿತವಾಗಿರುವ ಪಾಕ್ ಪ್ರಾಯೋಜಿತ ಭಯೋತ್ಪಾದನೆಯಂತೂ ಸ್ವತಂತ್ರ ಭಾರತಕ್ಕೊಂದು ಸವಾಲಾಗಿಯೇ ಉಳಿದುಕೊಂಡಿದೆ. 1993ರ ಮುಂಬೈ ಸರಣಿ ಬಾಂಬು ಸ್ಫೋಟವಿರಲಿ, 2001ರ ಸಂಸತ್ ಭವನದ ಮೇಲಿನ ಬಾಂಬ್ ದಾಳಿಯಿರಲಿ, ಮರೆಯುವಂಥದ್ದಲ್ಲ. ಈ ನಡುವೆ ಹೊಸ ಹೊಸ ಉಗ್ರ ಸಂಘಟನೆಗಳು ಹುಟ್ಟಿಕೊಂಡಿವೆ. ಭಾರತದ ಸರ್ವನಾಶವನ್ನೇ ಗುರಿಯಾಗಿಸಿಕೊಂಡಿವೆ. ಬಾಂಬ್ ದಾಳಿ ನಡೆಸಿ ಅಪಾರ ಸಾವು ನೋವಿಗೆಡೆಮಾಡಿ ಕೊನೆಗೆ ಆ ದುಷ್ಕೃತ್ಯದ ಹೊಣೆಹೊತ್ತು ಬೀಗುವ ಉಗ್ರರ ಕೃತ್ಯ ವಿಕೃತ ಮನಸ್ಸಿಗೆ ಕನ್ನಡಿ ಹಿಡಿಯುವಂತಿದೆ. ಅತಿಹೆಚ್ಚು ಭಯೋತ್ಪಾದಕ ದಾಳಿ ಪೀಡಿತ ದೇಶಗಳಲ್ಲಿ ಭಾರತ ಮೂರನೆಯದು! ದೇಶದ ಭದ್ರತೆ ಹಾಗೂ ಸುರಕ್ಷತೆಗೆ ಸವಾಲೆನಿಸಿರುವ ಭಯೋತ್ಪಾದನೆ ದೇಶದ ಪ್ರಗತಿ ಪಥಕ್ಕೊಂದು ಮುಳ್ಳಾಗಿ ಪರಿಣಮಿಸಿದೆ. ಎಲ್ಲಿಯ ತನಕವೆಂದರೆ ರಾಷ್ಟ್ರದ ಪ್ರಥಮ ಪ್ರಜೆಗಾದರೂ ಕೆಂಪುಕೋಟೆಯೇರಿ ನಿಟ್ನೇತಿಯಿಂದ ಬಾವುಟ ಹಾರಿಸಲು ಸಾಧ್ಯವಾಗುತ್ತಿಲ್ಲ!
ಭಯೋತ್ಪಾದನೆಯ ಬೆನ್ನಲ್ಲೆ ಸ್ವತಂತ್ರ ಭಾರತವನ್ನು ಬೆಂಬಿಡದೆ ಕಾಡುವ ಮತ್ತೂಂದು ಪೀಡೆಯೆಂದರೆ ಭ್ರಷ್ಟಾಚಾರ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದು ಕಪ್ಪುಹಣ. ಕಪ್ಪುಹಣಕ್ಕೆ ಕಡಿವಾಣ ಹಾಕಲು ದಿಟ್ಟಕ್ರಮ ಕೈಗೊಳ್ಳಲಾಗಿದೆ. ಪರಿಣಾಮವಾಗಿ ಸ್ವಿಸ್ ಬ್ಯಾಂಕಿನಲ್ಲಿ ಇಡಲಾಗುತ್ತಿದ್ದ ಕಪ್ಪುಹಣ ಪ್ರಮಾಣವೂ ಗಣನೀಯವಾಗಿ ತಗ್ಗಿದೆ ಎನ್ನಲಾಗುತ್ತಿದೆ. ಆದರೆ ನಮ್ಮ ರಾಜ್ಯ ಮಾತ್ರ ಭ್ರಷ್ಟಾಚಾರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ವರದಿ ಹೇಳುತ್ತಿದೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇತ್ತೀಚಿಗೆ ಬೆಳಕಿಗೆ ಬಂದ ಕರ್ಮಕಾಂಡ ಪ್ರಾಯಶಃ ಇದಕ್ಕೆ ನಿದರ್ಶನವೆಂಬಂತಿದೆ. ಅಲ್ಲಿ ಸೆರೆವಾಸ ಅನುಭವಿಸುತ್ತಿರುವ ಜಯಲಲಿತಾ ಪರಮಾಪೆ¤ ಶಶಿಕಲಾಗೆ ರಾಜೋಪಚಾರ ಸಲ್ಲುತ್ತಿರುವ ವಿಚಾರ ಬಹಿರಂಗಗೊಂಡಿದೆ. ಶಿಸ್ತಿಗೆ ಹೆಸರಾದ ಪೊಲೀಸು ಇಲಾಖೆಯಲ್ಲಿ ಅಶಿಸ್ತು ತಲೆದೋರಲು ಬಿಡುವುದಿಲ್ಲ ಎಂದು ಮೊನ್ನೆ ಮೊನ್ನೆ ಮಾನ್ಯ ಮುಖ್ಯಮಂತ್ರಿಗಳು ಖಡಾಖಂಡಿತವಾಗಿ ಹೇಳಿದ್ದಾರೆ. ಆದರೆ ಅದೇ ವೇಳೆ ಶಿಸ್ತಿಗೆ ಹೆಸರಾದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಶಿಸ್ತಿಗೆ ಹೆಸರಾದ ಇಲಾಖೆ ಆಡಳಿತಾರೂಢರ ಮುಷ್ಟಿಯೊಳಗೆ ಸಿಲುಕಿ ಹಲ್ಲುಕಿತ್ತ ಹಾವಾದಂತಿದೆ. ಈ ಕಾರಣಕ್ಕಾಗಿಯೇ ಜನತೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಭರವಸೆ ಕಳೆದುಕೊಂಡಂತಿದೆ. ಡಿಜಿಟಲೀಕರಣವು ಭ್ರಷ್ಟಾಚಾರಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಬಹುದೆಂಬ ನಿರೀಕ್ಷೆಯಿತ್ತು. ಆದರೆ ಇಂಟೆರ್ನೆಟ್ ಬಳಕೆ ಹೆಚ್ಚಾಗುತ್ತಿದ್ದಂತೆ ಸೈಬರ್ ಅಪರಾಧವೂ ಹೆಚ್ಚತೊಡಗಿದೆ. ಭಾರತದಲ್ಲಿ ಪ್ರತಿನಿಮಿಷಕ್ಕೊಂದು ಸೈಬರ್ ಅಪರಾಧ ಬೆಳಕಿಗೆ ಬರುತ್ತಿದೆ! ಭ್ರಷ್ಟಾಚಾರದಿಂದ ಕಂಗೆಟ್ಟವರಿಗೆ ಇದು ಕುರುವಿನ ಮೇಲೆ ಬೊಕ್ಕೆಯಿದ್ದಂತಾದರೆ ಅಚ್ಚರಿಯಿಲ್ಲ. ಆದಾಯ ತೆರಿಗೆ ಅಧಿಕಾರಿ ದಾಳಿ ಕೈಗೊಂಡಾಗ ಮೊದಲೆಲ್ಲ ಭ್ರಷ್ಟಾಚಾರಿಗಳಿಗೆ ತಕ್ಕ ಶಾಸ್ತಿಯಾಗುವುದೆಂದು ಆಶಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಅದು ಪ್ರಚಾರ ಗಿಟ್ಟಿಸಿಕೊಂಡಷ್ಟು ಫಲ ನೀಡದೆ ಬೆಟ್ಟ ಅಗೆದು ಇಲಿ ಹಿಡಿದಂತೆ ಪರಿಣಮಿಸುವುದೇ ಹೆಚ್ಚು. ಮೊನ್ನೆ ಮೊನ್ನೆ ನಡೆದ ಡಿಕೆಶಿ ದಾಳಿ ಪ್ರಕರಣ ಹೀಗೆಯೇ ಆಯಿತಷ್ಟೆ!
ಇನ್ನು ಸ್ವತಂತ್ರ ಭಾರತಕ್ಕೆ ಗಡಿ ತಂಟೆ ತಪ್ಪಿದ್ದಲ್ಲ. ಗಡಿತಂಟೆಯಿಂದಾಗಿ ಯುದ್ಧಭೀತಿಯೂ ತಪ್ಪಿದ್ದಲ್ಲ. ಒಂದೆಡೆ ಕಾಶ್ಮೀರ ವಿಚಾರವಾಗಿ ಪಾಕಿಸ್ಥಾನವು ಕಾಲುಕೆದರಿ ನಿಂತರೆ ಇನ್ನೊಂದೆಡೆ ಚೀನವೂ ಗಡಿವಿವಾದ ಮುಂದಿಟ್ಟು ತೊಡೆ ತಟ್ಟುತ್ತಿದೆ. ಸದ್ಯ ಸಿಕ್ಕಿಂನ ಡೋಕ್ಲಾಮ್ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಚೀನ ತಾನು ಹೇಳಿದ್ದನ್ನು ಒಪ್ಪದಿದ್ದಲ್ಲಿ ಭಾರತಕ್ಕೆ ಮಿಲಿಟರಿ ಮಾರ್ಗದ ಮೂಲಕ ಉತ್ತರಿಸುವ ಎಚ್ಚರಿಕೆ ನೀಡಿದೆ. ಯುದ್ಧ ಹೊಸದಲ್ಲ. ಈ ಹಿಂದೆ 1962ರಲ್ಲಿ ಚೀನಾದ ವಿರುದ್ಧ ಯುದ್ಧ ಮಾಡಿದ್ದೇವೆ ಹಾಗೂ 1999ರಲ್ಲಿ ಕಾರ್ಗಿಲ್ ಮೂಲಕ ಮೂಗುತೂರಿದ ಪಾಕಿಸ್ಥಾನಕ್ಕೆ ನಮ್ಮ ಸೇನೆ ತಕ್ಕ ಉತ್ತರ ನೀಡಿದ್ದೇವೆ. ನಮಗೆ ಯುದ್ಧ ಬೇಕಿಲ್ಲ. ನಾವು ಯುದ್ಧಪ್ರಿಯರಲ್ಲ ಶಾಂತಿಪ್ರಿಯರೆಂಬುದೇನೋ ನಿಜ. ಆದರೆ ಶತ್ರುಗಳು ತೊಡೆತಟ್ಟಿ ನಿಂತಾಗ ಬಾಲ ಮುದುಡಿ ಕೂರುವ ಜಾಯಮಾನ ನಮ್ಮದಲ್ಲವಷ್ಟೆ. ಹಾಗಾಗಿ ಗಡಿಪ್ರಶ್ನೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳದ ಹೊರತು ಸ್ವತಂತ್ರ ಭಾರತಕ್ಕೆ ಯುದ್ಧಭೀತಿ ತಪ್ಪಿದ್ದಲ್ಲ.
ಸ್ವತಂತ್ರ ಭಾರತದ ಏಕತೆಗೆ ಧಕ್ಕೆಯುಂಟುಮಾಡುವ ಇನ್ನೊಂದು ಅಂಶವೆಂದರೆ ಸೈದ್ಧಾಂತಿಕ ಸಂಘರ್ಷ. ಇಲ್ಲಿ ಎಡ ಪಂಥೀಯರಿಗೆ ಬಲಪಂಥೀಯರು ಅಸ್ಪೃಶ್ಯರಾದರೆ ಬಲ ಪಂಥೀಯರಿಗೆ ಎಡಪಂಥೀಯರು ಅಸ್ಪೃಶ್ಯರು. ಹೀಗಾಗಿ ಕ್ಷುಲ್ಲಕ ಕಾರಣಗಳಿಗಾಗಿ ಸಂಘರ್ಷ ನಡೆಯುತ್ತಿರುತ್ತದೆ. ಕೇರಳ ಇಂತಹ ಸೈದ್ಧಾಂತಿಕ ಸಂಘರ್ಷಕ್ಕೆ ಹೆಸರಾಗಿದ್ದು ಹೋದ ತಿಂಗಳ ಅಂತ್ಯದಲ್ಲಿ ಅಲ್ಲಿ ಸಂಘರ್ಷಕ್ಕೆ ಹಿಂದೂ ಕಾರ್ಯಕರ್ತನ ಬಲಿಯಾಗಿದೆ. ಇದೀಗ ಕರ್ನಾಟಕದ ಕರಾವಳಿ ಜಿಲ್ಲೆಗೂ ಅದು ಹರಡಿದೆ. ಇಲ್ಲೂ ಒಂದೆರಡು ಬಲಿಯಾಗಿದೆ. ವಿಶೇಷವೆಂದರೆ ಇಲ್ಲಿ ರಾಜಕೀಯ ಪಕ್ಷಗಳು ಒಂದೊಂದು ಕೋಮನ್ನೋ ಧರ್ಮವನ್ನೋ ದತ್ತು ತೆಗೆದುಕೊಂಡಂತಿದೆ. ಆ ಪಕ್ಷ ಅದರ ಬೆಂಗಾವಲಿಗೆ ನಿಂತುಬಿಡುತ್ತದೆ. ಪಕ್ಷಗಳು ಒಂದೊಂದು ಕೋಮಿನ ಪರ ನಿಂತಾಗ ಯಾರು ಯಾರನ್ನು ಆಕ್ಷೇಪಿಸುವುದಕ್ಕಿದೆ? ಈ ಬಗೆಯ ವರ್ಗ ಓಲೈಕೆ ಕೋಮು ಗಲಭೆಯನ್ನು ಹುಟ್ಟು ಹಾಕಿಬಿಡುತ್ತದೆ. ಅಹಿತಕರ ಘಟನೆಗಳಿಗೆ ಕಾರಣವಾಗುತ್ತದೆ.
ಸಮಾಜದ ಶಾಂತಿ ಕದಡಲು ಕ್ಷುಲ್ಲಕ ರಾಜಕೀಯವೂ ಕಾರಣವಾಗುತ್ತದೆ. ಸಣ್ಣ ವಿಷಯವೂ ಇಲ್ಲಿ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತದೆ. ರಾಜಕೀಯ ಮಾಡಲು ಸಾವಿನ ಪ್ರಕರಣವೂ ಆಗುತ್ತದೆ. ರಸ್ತೆ ನಾಮಕರಣ ವಿಚಾರವೂ ಆಗುತ್ತದೆ. ಯಾವ ಪಕ್ಷವೂ ಇದಕೆ ಅಪವಾದವಲ್ಲ. ಸ್ವಾರ್ಥ ರಾಜಕೀಯದ ಪರಿಣಾಮವಾಗಿ ಇಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡರೂ ಅದು ಸೇಡಿನ ರಾಜಕೀಯ ಅನಿಸಿಬಿಡುತ್ತದೆ. ಮೊನ್ನೆ ಮೊನ್ನೆ ಐಟಿ ದಾಳಿ ನಡೆದಾಗಂತೂ ಅಕ್ರಮ ಆಸ್ತಿಗಳಿಕೆ ತಪ್ಪಲ್ಲ; ಐಟಿ ದಾಳಿ ನಡೆಸಿದ್ದೇ ತಪ್ಪು ಎಂಬಂತೆ ಬೆಂಗಳೂರಿನಲ್ಲಿ ದಾಳಿ ನಡೆದುದಕ್ಕೆ ಮಂಗಳೂರಿನಲ್ಲಿ ಐಟಿ ಕಚೇರಿ ಮೇಲೆ ಕಲ್ಲು ಬಿತ್ತು! ಎಲ್ಲದರ ಹಿಂದೆ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಇರುತ್ತದೆ. ಯಾವುದೋ ಒಂದು ವರ್ಗದ ತುಷ್ಟೀಕರಣದ ಉದ್ದೇಶವಿರುತ್ತದೆ. ಇಲ್ಲವೇ ಮುಂಬರುವ ಚುನಾವಣೆ ಗಮನದಲ್ಲಿರುತ್ತದೆ. “ಎ ಪೊಲಿಟಿಶಿಯನ್ ಈಸ್ ಎ ಮ್ಯಾನ್ ಹೂ ಥಿಂಕ್ಸ್ ಆಫ್ ದಿ ನೆಕ್ಸ್ಟ್ ಎಲೆಕ್ಷನ್’ ಎಂದಿದ್ದಾನೆ ಅಮೆರಿಕನ್ ಬರಹಗಾರ ಜೇಮ್ಸ್ ಫ್ರೀಮನ್ ಕ್ಲಾರ್ಕ್. ಇಂದು ತಂತ್ರಜ್ಞಾನದ ಮುನ್ನಡೆಯಿಂದಾಗಿ ಇಲ್ಲಿ ಏನೇ ಆದರೂ ಅದು ಕ್ಷಣಾರ್ಧದಲ್ಲಿ ಜಗಜ್ಜಾಹೀರಾಗಿಬಿಡುತ್ತದೆ. ಹೊರಗಿನವರು ಅದನ್ನು ಗಮನಿಸುತ್ತಲೇ ಇರುತ್ತಾರೆ. ನಮ್ಮ ಹುಳುಕನ್ನಷ್ಟೇ ಹುಡುಕುವವರಿಗೆ ನಮ್ಮ ಸಾಧನೆ ಕಣ್ಣಿಗೆ ಬೀಳುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರಗಳು ಹರಿದಾಡುತ್ತವೆ. ದೇಶದ ಮಾನ ಹರಾಜಾಗುತ್ತದೆ. ಸ್ವಾಭಿಮಾನಿ ದೇಶದ ವರ್ಚಸ್ಸಿಗೆ ಕುಂದುಂಟಾಗುತ್ತದೆ,
ಮೇಲೆ ಉಲ್ಲೇಖೀಸಲಾದ ಅಂಶಗಳೆಲ್ಲವೂ ಸ್ವತಂತ್ರ ಭಾರತಕ್ಕೆ ಕಪ್ಪು ಚುಕ್ಕೆಗಳು. ಅವೆಲ್ಲವೂ ವಿಜೃಂಭಿಸಿದಾಗ ದೇಶದ ಸಾಧನೆ ಎಷ್ಟೇ ಇದ್ದರೂ ಮಂಕಾಗಿಬಿಡುತ್ತದೆ. ಹೊರಗಣ ಶತ್ರುಗಳಿಗಿಂತ ಆಂತರಿಕ ಶತ್ರುಗಳೆ ಹೆಚ್ಚು ಅಪಾಯಕಾರಿ. ಗಡಿ ಸಂಘರ್ಷಕ್ಕಿಂತ ಸೈದ್ಧಾಂತಿಕ ಸಂಘರ್ಷ ಅಪಾಯಕಾರಿ. ಒಕ್ಕೂಟ ವ್ಯವಸ್ಥೆಯಲ್ಲಿ ಒಗ್ಗಟ್ಟು ಅಗತ್ಯ. ಸ್ವತಂತ್ರ ಭಾರತ ಮೇಲೆ ಹೇಳಲಾದ ಕಪ್ಪು ಚುಕ್ಕೆಗಳಿಂದ ಮುಕ್ತವಾಗಬೇಕಿದೆ. ಪಕ್ಷಹಿತಕ್ಕಿಂತ ಪ್ರಜಾಹಿತ ಮಿಗಿಲೆಂದು ತಿಳಿದು ಪಕ್ಷಭೇದ ತೊರೆದು ಕೈಜೋಡಿದರಷ್ಟೇ ಅದು ಸಾಧ್ಯ. ಹೊಸ ಜಾತಿಯನ್ನೋ ಹೊಸ ಧರ್ಮವನ್ನೋ ಹುಟ್ಟುಹಾಕುವಲ್ಲಿ ತೋರುವ ರಾಜಕೀಯ ಇಚ್ಛಾಶಕ್ತಿಯನ್ನು ದೇಶ ಬಲಗೊಳಿಸುವಲ್ಲಿ ತೋರಬೇಕಿದೆ. ಬಿಜೆಪಿ ಮುಕ್ತ ಜಿಲ್ಲೆ, ಕಾಂಗ್ರೆಸ್ ಮುಕ್ತ ರಾಜ್ಯ ಎಂದೆಲ್ಲ ಪಣತೊಡುವ ರಾಜಕೀಯ ಪಕ್ಷಗಳು ಪಕ್ಷ ಭೇದ ಮರೆತು ಭಯೋತ್ಪಾದನೆ-ಭ್ರಷ್ಟಾಚಾರ ಮುಕ್ತ ದೇಶಕ್ಕಾಗಿ ಪಣತೊಡಬೇಕಿದೆ. ಅಲ್ಲವೆ?
ರಾಂ ಎಲ್ಲಂಗಳ