Advertisement

ಕ್ರೀಡಾಕ್ಷೇತ್ರದತ್ತ ಒಲವು ಇಮ್ಮಡಿಗೊಳ್ಳಲಿ: ಸೂಲಿಬೆಲೆ

02:15 AM Jul 15, 2017 | Team Udayavani |

ಮಣ್ಣಗುಡ್ಡೆ: ಚೀನದಲ್ಲಿ ಓದಿಗೆ ನೀಡಿದಷ್ಟೇ ಪ್ರಾಮುಖ್ಯವನ್ನು ಕ್ರೀಡೆಗೂ ನೀಡಲಾಗುತ್ತಿದೆ. ಆದ್ದರಿಂದಲೇ ಅದು ಕ್ರೀಡೆಯಲ್ಲಿ ಮುಂಚೂಣಿಯಲ್ಲಿದೆ. ಭಾರತದಲ್ಲೂ ಕ್ರೀಡಾ ಕ್ಷೇತ್ರದತ್ತ ಒಲವು ಹೆಚ್ಚಾಗಬೇಕು. ಹೆತ್ತವರು ಮಕ್ಕಳ ಶಿಕ್ಷಣದಲ್ಲಿ ಅಂಕಕ್ಕಷ್ಟೇ ಒತ್ತು ನೀಡದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಕ್ರೀಡಾಭಾರತಿ ಮಂಗಳೂರು ವಿಭಾಗ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಇಲ್ಲಿನ ಸಂಘನಿಕೇತನದಲ್ಲಿ ಆಯೋಜಿಸಿದ್ದ ಕ್ರೀಡಾ ಪ್ರತಿಭಾ ಪುರಸ್ಕಾರ ಹಾಗೂ ಜೀಜಾಬಾಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ಕ್ರೀಡೆಯಲ್ಲಿ ಹಿಂದುಳಿಯಲು ಉನ್ನತ ತಂತ್ರಜ್ಞಾನ ಅಳವಡಿಸಿಕೊಳ್ಳದಿರುವುದೂ ಒಂದು ಕಾರಣ. ಕ್ರೀಡೆ ವ್ಯಕ್ತಿಯನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಲಾಡ್ಯನನ್ನಾಗಿಸುತ್ತದೆ. ರಾಷ್ಟ್ರ ಕಾರ್ಯಕ್ಕೆ ವೈದ್ಯರು, ಎಂಜಿನಿಯರ್‌ ಮಾತ್ರವಲ್ಲ ಕ್ರೀಡಾಪಟುಗಳ ಅಗತ್ಯವೂ ಇದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಕ್ರೀಡೆಯು ದೇಶದ ಸಂಪತ್ತು. ಇದಕ್ಕೆ ಸರಿಯಾದ ಪ್ರೋತ್ಸಾಹ ಬೇಕಿದೆ. ಕೇರಳ ಸರಕಾರ ಕ್ರೀಡೆಗೆ ಅತಿ ಹೆಚ್ಚಿನ ಅನುದಾನ ಮೀಸಲಿಡುತ್ತಿದ್ದು, ರಾಜ್ಯದಲ್ಲೂ ಈ ರೀತಿಯ ಬೆಳವಣಿಗೆಯಾಗಬೇಕು. ಸಾಧನೆ ತೋರಿದ ಕ್ರೀಡಾಪಟುಗಳನ್ನು ಸರಕಾರ ಗೌರವಿಸಬೇಕು. ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ಒಟ್ಟು ಸೇರಿ ಸಾಧಕರಿಗೆ ದೊಡ್ಡ ಮೊತ್ತವನ್ನು ನೀಡಿ ಅಭಿನಂದಿಸುವ ಕೆಲಸ ಜಿಲ್ಲೆಯಲ್ಲಿ ಆಗಬೇಕು ಎಂದರು. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕು. ಕ್ರೀಡಾಪಟುಗಳಿಗೆ ಸರಕಾರ ಸರಿಯಾದ ಪ್ರೋತ್ಸಾಹ ನೀಡದೇ ಇರುವುದು ದುಃಖದ ವಿಚಾರ. ಕೆಲವು ಹೆತ್ತವರಿಂದಲೂ ಕ್ರೀಡೆಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದವರು ಹೇಳಿದರು.

ಉದ್ಘಾಟಿಸಿದ ಮೇಯರ್‌ ಕವಿತಾ ಸನಿಲ್‌  ಮಾತನಾಡಿ, ಕ್ರೀಡಾಭಾರತಿ ಮೂಲಕ ಕ್ರೀಡೆಗೆ ವಿಶೇಷ ಪ್ರೋತ್ಸಾಹ ದೊರೆಯುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವಂತೆ ಹೆತ್ತವರು ಮಾರ್ಗದರ್ಶನ ಮಾಡಬೇಕು ಎಂದರು.

ಸಾಧಕರಿಗೆ ಅಭಿನಂದನೆ
ರಾಷ್ಟ್ರ, ಅಂತಾರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಪದಕ ವಿಜೇತರನ್ನು ಗೌರವಿಸಲಾಯಿತು. ಕ್ರೀಡಾಭಾರತಿಯ ಸಂಯೋಜಕ ಭೋಜರಾಜ್‌ ಕಲ್ಲಡ್ಕ ಅವರನ್ನು ಸಮ್ಮಾನಿಸಲಾಯಿತು. ಶಾಸಕ ಜೆ.ಆರ್‌. ಲೋಬೋ, ಆರೆಸ್ಸೆಸ್‌ ಸಹಪ್ರಾಂತ ಸಂಘಚಾಲಕ್‌ ಡಾ| ಪಿ. ವಾಮನ ಶೆಣೈ, ಕ್ರೀಡಾಭಾರತಿ ದಕ್ಷಿಣ ಮಧ್ಯಕ್ಷೇತ್ರೀಯ ಸಂಯೋಜಕ ಚಂದ್ರಶೇಖರ ಜಹಾಗೀದಾರ್‌, ಶ್ರೀದೇವಿ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ವಿಧಾನಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ, ರೆಡ್‌ಕ್ರಾಸ್‌  ಜಿಲ್ಲಾಧ್ಯಕ್ಷ ಸಿ.ಎ. ಶಾಂತಾರಾಮ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಆರೆಸ್ಸೆಸ್‌ ಮಂಗಳೂರು ಮಹಾನಗರ ಸಂಘಚಾಲಕರಾದ ಸುನಿಲ್‌ ಆಚಾರ್‌, ಡಾ| ಸತೀಶ್‌ ರಾವ್‌, ಬ್ರಿಗೇಡಿಯರ್‌ ಐ.ಎನ್‌. ರೈ, ಡಿಡಿಪಿಐ ವಾಲ್ಡರ್‌ ಡಿ’ ಮೆಲ್ಲೊ, ಮಂಗಳೂರು ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಆಶಾ ನಾಯಕ್‌, ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಲೋಶಿಯಸ್‌ ಡಿ’ ಸೋಜಾ,   ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ರಘುನಾಥ್‌, ಅಧ್ಯಕ್ಷ ಕೆ.ಎಚ್‌. ನಾಯಕ್‌, ಸಲಹೆಗಾರ ಗಂಗಾಧರ ರೈ ಮಾಣಿ, ಕ್ರೀಡಾಭಾರತಿ ಪ್ರಧಾನ ಕಾರ್ಯದರ್ಶಿ ಪ್ರಮೋದ್‌ ಅರಿಗ ಮುಂತಾದವರು ಉಪಸ್ಥಿತರಿದ್ದರು. ಕ್ರೀಡಾಭಾರತಿ ಗೌರವಾಧ್ಯಕ್ಷ ಬಿ. ನಾಗರಾಜ ಶೆಟ್ಟಿ ಪ್ರಸ್ತಾವಿಸಿದರು. ಅಧ್ಯಕ್ಷ ಕಾರ್ಯಪ್ಪ ರೈ ಸ್ವಾಗತಿಸಿದರು. ಅಜಿತ್‌ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

Advertisement

ಜೀಜಾಬಾಯಿ ಪ್ರಶಸ್ತಿ ಪ್ರದಾನ
ಕ್ರೀಡಾಪಟುಗಳಾದ ಉಷಾ ಬಿ.ಎನ್‌., ಮರಿನಾ ದೇವಿ, ಜೋಸ್ನಾ ಸಿಮಾಂನ್‌, ಜೋಯ್ಲಿನ್‌ ಎಂ. ಲೋಬೋ ಅವರ ಹೆತ್ತವರಿಗೆ ಜೀಜಾಬಾಯಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next