ಹೊಸದಿಲ್ಲಿ : EPFO (ನೌಕರರ ಭವಿಷ್ಯ ನಿಧಿ ಸಂಸ್ಥೆ) ಇಂದು ಗುರುವಾರ 2018-19ರ ಸಾಲಿಗೆ ಪಿಎಫ್ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.8.65ಕ್ಕೆ ಏರಿಸಿದೆ. ಕಳೆದ ವರ್ಷ ಇದು ಶೇ.8.55 ಇತ್ತು.
ಹಾಲಿ ಹಣಕಾಸು ವರ್ಷದಲ್ಲಿ ಪಿಎಫ್ ಠೇವಣಿ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ನಿರ್ಧಾರವನ್ನು ಇಪಿಎಫ್ಓ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) ನ ಎಲ್ಲ ಸದಸ್ಯರು ಅನುಮೋದಿಸಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗವಾರ್ ತಿಳಿಸಿದರು. ಇಪಿಎಫ್ಓ ಗೆ ಆರು ಕೋಟಿ ನೋಂದಣಿದಾರರು ಇದ್ದಾರೆ.
ಹೊಸದಿಲ್ಲಿಯಲ್ಲಿಂದು ಸಿಬಿಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗಂಗವಾರ್ ಅವರು, ಪಿಎಫ್ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಿಸುವ ಪ್ರಸ್ತಾವ ಈಗಿನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಹೋಗಲಿದೆ ಎಂದು ತಿಳಿಸಿದರು.
ಗಮನಿಸಬೇಕಾದ ಸಂಗತಿ ಎಂದರೆ 2017-18ರಲ್ಲಿದ್ದ ಶೇ.8.55ರ ಬಡ್ಡಿ ದರವು ಕಳೆದ ಐದು ವರ್ಷಗಳಲ್ಲೇ ಕಡಿಮೆಯದ್ದಾಗಿದೆ. 2016-17ರಲ್ಲಿ ಇದನ್ನು ಶೇ.8.65ರಲ್ಲಿ ಉಳಿಸಿಕೊಳ್ಳಲಾಗಿತ್ತು. 2015-16ರಲ್ಲಿ ಇದು ಶೇ.8.88 ಇತ್ತು