ಕಲಬುರಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PKPS) ಮೂಲಕ ರೈತರಿಗೆ ವಿತರಿಸಲಾದ ಶೂನ್ಯ ಬಡ್ಡಿ ದರದ ಸಾಲದ ಮೇಲಿನ ಸರ್ಕಾರದ ಸಹಾಯಧನವನ್ನು ಜಿಲ್ಲಾ ಸಹಕಾರಿ ಕೇಂದ್ರ (DCC) ಬ್ಯಾಂಕ್ ಗಳಿಗೆ ಬಿಡುಗಡೆ ಮಾಡಲಾಗಿದೆ.
ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಹಾಗೂ ಅಪೆಕ್ಸ್ ಬ್ಯಾಂಕ್ ಮತ್ತು ಹಿರಿಯ ಸಹಕಾರಿ ಅಧಿಕಾರಿಗಳ ಸಭೆಯಲ್ಲಿ ಸಹಾಯ ಧನ ಬಿಡುಗಡೆ ಮಾಡಲಾದ ಮನವಿಗೆ ಸ್ಪಂದಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ರೈತರ ಶೂನ್ಯ ಬಡ್ಡಿ ಸಾಲದ ಮೇಲಿನ ಸಹಾಯ ಧನ ಬಿಡುಗಡೆಯಾಗಿಲ್ಲ. ಅದೇ ತೆರನಾಗಿ ಎಚ್ ಡಿ. ಕುಮಾರಸ್ವಾಮಿ ಅವಧಿಯಲ್ಲಿನ ಕೆಲ ಸಾಲಮನ್ನಾ ಹಣ ಬಿಡುಗಡೆ ಮಾಡುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಸಿಎಂ ಸಿದ್ಧರಾಮ ಅವರಿಗೆ ಮನವಿ ಮಾಡಿದ್ದರು. ಅದರನ್ವಯ ಸಹಾಯ ಧನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದ್ದು,ಡಿ. 2 ಸೋಮವಾರದಂದು ಎಲ್ಲ ಬ್ಯಾಂಕ್ ಗಳಿಗೆ ಬಿಡುಗಡೆಯಾಗಲಿದೆ.
ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (DCC) ಬ್ಯಾಂಕ್ ನ ಅಧ್ಯಕ್ಷ ಸೋಮಶೇಖರ ಗೋನಾಯಕ ಮಾತನಾಡಿ, ಬಡ್ಡಿ ಮನ್ನಾ ಹಾಗೂ ಸಾಲದ ಮೇಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಜತೆಗೆ ನಬಾರ್ಡ ನ ಸಾಲದ ಪ್ರಮಾಣ ಹೆಚ್ಚಿಸಬೇಕೆಂದು ಮನವಿ ಮಾಡಿದ್ದರು. ಬಡ್ಡಿ ಮನ್ನಾ ಹಾಗೂ ಸಾಲದ ಮೇಲಿನ ಸಹಾಯಧನ ಬಿಡುಗಡೆಯಾಗದಿರುವುದು ಬ್ಯಾಂಕ್ ನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಸ್ತಾಪಿಸಿದ್ದರು. ಹೀಗಾಗಿ ಕಲಬುರಗಿ ಡಿಸಿಸಿ ಬ್ಯಾಂಕ್ ಗೆ 15 ಕೋ.ರೂ ಬಿಡುಗಡೆಯಾಗಿದೆ. ಅದೇ ತೆರನಾಗಿ ಇತರ ಬ್ಯಾಂಕ್ ಗಳಿಗೂ ಬಿಡುಗಡೆಯಾಗಿದೆ.
ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಚಿವರಾದ ಶಿವಾನಂದ ಪಾಟೀಲ್, ಸುಧಾಕರ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ ಸೇರಿದಂತೆ ಮುಂತಾದವರಿದ್ದರು.