Advertisement

ಲೋಕಸಭಾ ಕ್ಷೇತ್ರ ಮರುವಿಂಗಡಣೆ ವೇಳೆ ದಕ್ಷಿಣ ರಾಜ್ಯಗಳ ಹಿತವೂ ಪರಿಗಣನೆ

11:45 PM Jan 03, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ವೇಳೆ ಕರ್ನಾಟಕ ಸಹಿತ ದಕ್ಷಿಣದ ರಾಜ್ಯಗಳ ಕಳವಳಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ಜನಸಂಖ್ಯೆ ಆಧರಿತವಾಗಿ ಕ್ಷೇತ್ರ ಪುನರ್‌ವಿಂಗಡಣೆಯಾದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಕೂಗಿಗೆ ಕೇಂದ್ರ ಸ್ಪಂದಿಸಿದಂತಾಗಿದೆ.

Advertisement

“2024ರ ಲೋಕಸಭೆ ಚುನಾವಣೆ ಬಳಿಕ ಜನಗಣತಿ ನಡೆಸಲಾಗುತ್ತದೆ. ಅದಾದ ಅನಂತರ, ಗಣತಿಯ ಆಧಾರದಲ್ಲೇ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. ಆ ಸಂದರ್ಭದಲ್ಲಿ ದಕ್ಷಿಣದ ರಾಜ್ಯಗಳ ಅಹವಾಲುಗಳು, ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ’ ಎಂದು ಅಧಿಕಾರಿ ತಿಳಿಸಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 4 ಬಾರಿ ಕ್ಷೇತ್ರ ಪುನರ್‌ವಿಂಗಡಣೆ ಆಯೋಗಗಳನ್ನು ರಚಿಸಲಾಗಿತ್ತು. 1952 ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ 489 ಇದ್ದ ಲೋಕಸಭೆ ಕ್ಷೇತ್ರಗಳು, ಅನಂತರ ನಡೆದ ಮರುವಿಂಗಡಣೆ ಪ್ರಕ್ರಿಯೆಯಿಂದ ಈಗ ಒಟ್ಟು ಕ್ಷೇತ್ರಗಳ ಸಂಖ್ಯೆ 543ಕ್ಕೇರಿದೆ.

ದಕ್ಷಿಣದ ರಾಜ್ಯಗಳ ಆಕ್ಷೇಪ ಏಕೆ?

ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣಗಳು ಈಗಾಗಲೇ ವಿವಿಧ ಕುಟುಂಬ ಯೋಜನೆ ಕ್ರಮಗಳ ಮೂಲಕ ಜನಸಂಖ್ಯೆಯ ಏರಿಕೆಗೆ ಕಡಿವಾಣ ಹಾಕಿವೆ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಏರುತ್ತಲೇ ಇವೆ. ಜನಸಂಖ್ಯೆ ಆಧರಿಸಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾದರೆ, ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸೀಟುಗಳು ಲಭ್ಯವಾಗಲಿವೆ. ಲೋಕಸಭಾ ಸೀಟುಗಳ ಲಭ್ಯತೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿವೆ. ಅಲ್ಲದೆ, ಸಂಸತ್‌ನಲ್ಲಿ ದಕ್ಷಿಣದ ಪ್ರಾತಿನಿಧ್ಯವೂ ಕುಗ್ಗಲಿದ್ದು, ರಾಷ್ಟ್ರ ರಾಜಕಾರಣದಲ್ಲಿ ಈ ರಾಜ್ಯಗಳ ದನಿ ಕ್ಷೀಣಿಸಲಿದೆ. ಈ ತಾರತಮ್ಯವು ಕೇವಲ ಸಂಸತ್‌ ಸ್ಥಾನಗಳಿಗೆ ಸೀಮಿತವಾಗಿರದೇ, ಬೇರೆ ಬೇರೆ ರೀತಿಯಲ್ಲಿ ಅಸಮಾನತೆಗೆ ದಾರಿಮಾಡಿ ಕೊಡ ಲಿದೆ ಎನ್ನುವುದು ದಕ್ಷಿಣದ ರಾಜ್ಯಗಳ ಅಳಲು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next