Advertisement

ಕಾಲಕ್ಕೆ ತಕ್ಕಂತೆ ಸಾಹಿತಿಗಳ ಆಸಕ್ತಿಯೂ ಬದಲು

10:03 AM Mar 28, 2022 | Team Udayavani |

ಧಾರವಾಡ: ಈಗಿನ ಕಾಲಮಾನಕ್ಕೆ ತಕ್ಕಂತೆ ಸಾಹಿತಿಗಳ ಆಸಕ್ತಿಯೂ ಬದಲಾಗುತ್ತಾ ಸಾಗಿದ್ದು, 21ನೇ ಶತಮಾನದ ಸಾಹಿತಿಗಳಲ್ಲಿ ಬದ್ಧತೆಯ ಕೊರತೆ ಕಾಣುವಂತಾಗಿದೆ ಎಂದು ಸಮ್ಮೇಳನಾಧ್ಯಕ್ಷ ಡಾ| ರಮಾಕಾಂತ ಜೋಶಿ ಹೇಳಿದರು.

Advertisement

ಕಸಾಪ ಸಾಹಿತ್ಯ ಭವನದ ಆವರಣದಲ್ಲಿ ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಸಾಹಿತಿಗಳಲ್ಲಿ ಇದ್ದ ಆಸಕ್ತಿ ಈಗಿಲ್ಲ. ಆಗ ಹಣಕ್ಕಾಗಿ ಎಂದಿಗೂ ಸಾಹಿತ್ಯ ಬರೆಯಲಿಲ್ಲ. ಆದರೆ ಈಗ ದುಡ್ಡಿಗಾಗಿಯೇ ಸಾಹಿತ್ಯ ಬರೆಯುವ ಸ್ಥಿತಿಯಿದ್ದು, ಹಣಕ್ಕಾಗಿ ಸಾಹಿತ್ಯ ಬರೆಯುವಂತಾಗಿದೆ. ಬರೆದ ಸಾಹಿತ್ಯಕ್ಕೆ ಎಷ್ಟು ಹಣ ಕೊಡುತೀರಾ? ಎಂಬ ಪ್ರಶ್ನೆಯೇ ಎದುರಾಗಿದ್ದು, ಹೀಗಾಗಿ ಬದ್ಧತೆಯ ಕೊರತೆ ಎದ್ದು ಕಾಣುವಂತಾಗಿದೆ. ಸರ್ವರ ಹಿತ ಕಾಪಾಡುವವನೇ ಸಾಹಿತಿ ಹೊರತು ಸ್ವಹಿತ ಕಾಪಾಡುವವನಲ್ಲ ಎಂದರು.

ಈಗಿನ ಯುವ ಪೀಳಿಗೆಗೆ ಸಂದೇಶ ಕೊಡುವಷ್ಟು ದೊಡ್ಡವ ನಾನಲ್ಲ. ಒಂದು ವೇಳೆ ಸಂದೇಶ ನೀಡಿದರೂ ಆ ಸಂದೇಶ ಕೇಳುವ ಮನಸ್ಥಿತಿಯಲ್ಲಿ ಯುವ ಪೀಳಿಗೆಯಿಲ್ಲ. ಹೀಗಿರುವಾಗ ಅನುಕರಣೆ, ಸಂದೇಶಗಳ ಆಲಿಸುವತ್ತ ಯುವ ಪೀಳಿಗೆ ಮುಂದಾಗುವ ಬದಲು ತಾವೇ ಆತ್ಮ ಸಾಕ್ಷಾತ್ಕಾರ ಮಾಡುವುದು ಒಳಿತು. ಈ ಆತ್ಮ ಸಾಕ್ಷಾತ್ಕಾರದಿಂದ ಯುವ ಪೀಳಿಗೆ ಏಳ್ಗೆ ಕಾಣಲು ಸಾಧ್ಯವಿದೆ ಎಂದು ಹೇಳಿದರು.

ಬರೀ ಪ್ರಕಾಶನದಿಂದ ಹೊಟ್ಟೆ ತುಂಬುವುದಿಲ್ಲ, ಲಗ್ನವೂ ಆಗಲ್ಲ ಎಂಬ ಹಿರಿಯರ ಮಾತಿಗಾಗಿ ನಾನೂ ಪದವಿ ಪಡೆದೆ. ಆ ಬಳಿಕ ತಂದೆ ಜಿ.ಬಿ. ಜೋಶಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿಗೂ ಈ ಪ್ರಕಾಶನ ಕಾಯಕ ಮುಂದುವರಿಸಿದ್ದೇನೆ. ಈ ಪ್ರಕಾಶನ ಹವ್ಯಾಸವಲ್ಲ. ಬದಲಾಗಿ ವ್ಯವಸಾಯ ಎಂದು ನಂಬಿದ್ದೇನೆ. ನನಗೀಗ 86 ವರ್ಷ, ಆದರೆ ಮನೋಹರ ಗ್ರಂಥಮಾಲೆಗೆ 90 ವರ್ಷವಾಗಿದ್ದು, ಶತಮಾನ ಕಾಣಲಿದೆ. ಮಗ ಸಮೀರ ಕೂಡ ನನಗಿಂತ ಸಮರ್ಥವಾಗಿ ಮುಂದುವರಿಸಿಕೊಂಡು ಹೊರಟಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

ಪ್ರಕಾಶನ ನಿಲ್ಲಿಸುವ ಬಗ್ಗೆ ಅಥವಾ ಪ್ರಕಾಶನದಿಂದ ಮನೆಯಲ್ಲಿ ಕಿರಿಕಿರಿಯಿಂದ ಉಂಟಾದ ಅನುಭವ ಇದೆಯೇ? ಎಂಬ ಹ.ವೆಂ. ಕಾಖಂಡಕಿ ಪ್ರಶ್ನೆಗೆ ಉತ್ತರಿಸಿದ ಸಮ್ಮೇಳನಾಧ್ಯಕ್ಷರು, ಅಪ್ಪ ಜಿ.ಬಿ. ಜೋಶಿ ಮತ್ತು ನನ್ನ ಮಧ್ಯೆ ಸಣ್ಣಪುಟ್ಟ ಜಗಳ ಇತ್ತೇ ವಿನಃ ಪ್ರಕಾಶನ ನಿಲ್ಲಿಸುವ ವಿಚಾರ ಎಂದಿಗೂ ತಲೆಯಲ್ಲಿ ಸುಳಿಯಲೇ ಇಲ್ಲ ಎಂದರು.

ಸಂವಾದದಲ್ಲಿ ಡಾ| ವಿ.ಟಿ. ನಾಯಕ, ಡಾ| ಶಶಿಧರ ನರೇಂದ್ರ, ಡಾ| ಪ್ರಕಾಶ ಗರುಡ, ಡಾ| ಶಂಭು ಹೆಗಡಾಳ, ಡಾ| ಕೃಷ್ಣ ಕಟ್ಟಿ, ರಾಜಶೇಖರ ಮಾಳವಾಡ, ಡಾ| ಪ್ರಭು ಸಂಕನಗೌಡಸಾನೆ, ಬಸವರಾಜ ಕರಿಮಲ್ಲಣ್ಣವರ, ಮಂಜುನಾಥ ತಿರ್ಲಾಪುರ ಸೇರಿದಂತೆ ಹಲವರು ಇದ್ದರು.

ಪುರುಷರ ಕವಿಗೋಷ್ಠಿ: ಇದೇ ಮೊದಲ ಬಾರಿಗೆ ಸಮ್ಮೇಳನದಲ್ಲಿ ಹೊಸದಾಗಿ ಪರಿಚಯಿಸಿದ್ದ ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆಯ ಪುರುಷರ ಕವಿಗೋಷ್ಠಿಯಲ್ಲಿ ಯುವ-ಹಿರಿಯ ಕವಿಗಳು ತಮ್ಮ ಕವಿತೆ ವಾಚಿಸಿದರು. ಶ್ರೀಧರ ಪಿಸೆ, ಬಿ.ಕೆ. ಹೊಂಗಲ್‌, ಶೇಖರ ಹಾದಿಮನಿ, ಎಚ್‌.ಬಿ. ಪೂಜಾರ ಸೇರಿದಂತೆ ಹಲವರು ತಮ್ಮ ಕವಿತೆ ವಾಚಿಸಿದರು. ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ| ಬಸು ಬೇವಿನಗಿಡದ ಆಶಯ ನುಡಿಗಳನ್ನಾಡಿದರು

ಧಾರವಾಡ ಮಣ್ಣಿನಲ್ಲಿ ಶ್ರೇಷ್ಠತೆ, ವಿಶಿಷ್ಟತೆ ಇದೆ. ಈ ಕಾರಣದಿಂದಲೇ ಸಾಹಿತಿಗಳು-ಸಾಹಿತ್ಯಾಸಕ್ತರನ್ನು ಈ ಮಣ್ಣು ಸದಾ ಸಳೆಯುತ್ತಲೇ ಬಂದಿದೆ. ಅದಕ್ಕಾಗಿ ಎಲ್ಲೋ ಇದ್ದವರು ಇಲ್ಲಿ ಬಂದು ನೆಲೆಸಿದ್ದು, ಈ ಮಣ್ಣಿನ ಶಕ್ತಿಯಿಂದ ಸಾಧನೆ ಮಾಡಿದವರು ಸಾಕಷ್ಟು. ಈ ಮಣ್ಣಿನ ಈ ಅದ್ಬುತ ಶಕ್ತಿ ಮಹಿಮೆಯಿಂದಲೇ ಸಾಹಿತ್ಯ, ಸಂಗೀತ, ಕಲೆಗಳಿಂದ ಧಾರವಾಡ ವಿಶ್ವದಲ್ಲೇ ಗಮನ ಸೆಳೆದಿದೆ. ಅದರಲ್ಲೂ ಧಾರವಾಡಿಗರು ರಸಿಕ ಹಾಗೂ ವಿಮರ್ಶಕ ಮನಸ್ಸುವುಳ್ಳವರು. ಹೀಗಾಗಿ ಧಾರವಾಡ ಜನರ ಮನಸ್ಸು ಗೆದ್ದವರು ದೇಶ, ವಿಶ್ವವನ್ನೇ ಗೆದ್ದಂತೆ ಎಂಬ ಹಿರಿಯರ ಮಾತು ಎಂದಿಗೂ ಸುಳ್ಳಲ್ಲ.

ಡಾ| ರಮಾಕಾಂತ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next