ಸುಳ್ಯ: ದೇಶ, ಯಾವುದೇ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ ಅಭಿವೃದ್ಧಿ ಕೆಲಸ ಮಾಡಲು ಆಸಕ್ತಿ ಮುಖ್ಯವಾಗಿರುತ್ತದೆ. ನಮ್ಮಲ್ಲಿರುವ ಆಸಕ್ತಿ ಕಾರ್ಯರೂಪಕ್ಕೆ ಬಂದಾಗ ಅಭಿವೃದ್ಧಿ ನಡೆಯಲು ಸಾಧ್ಯವಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಲೋಕೋಪಯೋಗಿ ಇಲಾಖೆಯ ಅನುದಾನ 1.50 ಕೋಟಿ ರೂ. ವೆಚ್ಚದಲ್ಲಿ ಪಂಜ ಗ್ರಾಮದ ಕುದ್ವ-ಪಂಚಲಿಂಗೇಶ್ವರ ದೇವಸ್ಥಾನ- ನಾಗತೀರ್ಥ-ಸಂಪ-ಡಬ್ಬಲ್ ಕಟ್ಟೆ- ಮಂಚಿಕಟ್ಟೆ ಸಂಪರ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಪಂಜ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಪೂರ್ವಾಧ್ಯಕ್ಷ ಡಾ| ರಾಮಯ್ಯ ಭಟ್, ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸಣ್ಣೇಗೌಡ, ಪ್ರಮುಖರಾದ ಡಾ| ಲೀಲಾವತಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ, ಕಾರ್ಯಪ್ಪ ಗೌಡ ಚಿದ್ಗಲ್ಲು, ನೇತ್ರಾವತಿ ಕಲ್ಲಾಜೆ ಮತ್ತಿತರರು ಉಪಸ್ಥಿತರಿದ್ದರು. ಡಾ| ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಶಂಕರ್ ಕುಮಾರ್ ವಂದಿಸಿದರು. ಜಯರಾಮ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು.
ರಾಜಕೀಯ ಹೆಚ್ಚಳ
ಇಂದು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತಪಡಿಸುವುದು, ಮನವಿಗಳನ್ನು ಕೊಡುವುದು ನಡೆಯುತ್ತಿದೆ. ಈಗ ಒಂದಷ್ಟು ರಾಜಕೀಯವೇ ಹೆಚ್ಚಳವಾಗುತ್ತಿದೆ. ರಾಜಕೀಯ ಯಾಕೆ ಹೆಚ್ಚಳವಾಗುತ್ತಿದೆ ಎಂದರೆ ಯಾರು ಆಡಳಿತದಲ್ಲಿ ಇದ್ದ ಸಂದರ್ಭದಲ್ಲಿ ಅಭಿವೃದ್ಧಿ ಮಾಡಬೇಕಿತ್ತೋ ಅವರು ಅಭಿವೃದ್ಧಿ ನಡೆಸದೆ ಇಂದು ಅಭಿವೃದ್ಧಿ ಕೆಲಸ ಮಾಡುವ ಸಂದರ್ಭದಲ್ಲಿ ಪ್ರಶ್ನಿಸುವ, ದೂರುವ ಕೆಲಸಗಳು ಮಾಡುತ್ತಿದ್ದಾರೆ ಎಂದು ಎಸ್.ಅಂಗಾರ ಹೇಳಿದರು.