Advertisement

ಬಡ್ಡಿ ಹಣ 14.36 ಕೋಟಿ ರೂ. ಹಂಚಿಕೆ

08:51 PM Feb 16, 2020 | Lakshmi GovindaRaj |

ಕೋಲಾರ: ಬ್ಯಾಂಕ್‌ ನೀಡಿರುವ ಕೆಸಿಸಿ ಮತ್ತು ಎಸ್‌ಎಚ್‌ಜಿ ಯೋಜನೆಯಡಿ ಸರ್ಕಾರದಿಂದ ಬಂದಿರುವ 14.36 ಕೋಟಿ ರೂ. ಬಡ್ಡಿಯನ್ನು ಎರಡೂ ಜಿಲ್ಲೆಗಳ ಸೊಸೈಟಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

Advertisement

ನಗರದ ಸಹಕಾರಿ ಯೂನಿಯನ್‌ ಸಭಾಂಗಣದಲ್ಲಿ ಭಾನುವಾರ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಎಸ್‌ಎಫ್‌ಸಿಎಸ್‌,ಫ್ಯಾಕ್ಸ್‌ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿ, ಹಿಂದೆ ಕೇವಲ ಪಡಿತರ ವಿತರಣೆ ಸೊಸೈಟಿಗಳಾಗಿದ್ದ ಸಂಘಗಳಲ್ಲಿ ಇದೀಗ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದ್ದು, ಮುಂದೆ ಪ್ರತಿಯೊಂದು ಸೊಸೈಟಿಯೂ ಒಂದು ಬ್ಯಾಂಕ್‌ ಮಾದರಿಯಲ್ಲಿ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕಿನಲ್ಲೇ ಎಂಪಿಸಿಎಸ್‌ಗಳ ಖಾತೆ: ಅವಳಿ ಜಿಲ್ಲೆಯ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಉಳಿತಾಯ ಖಾತೆಯನ್ನು ಸಹಕಾರ ಸಂಸ್ಥೆಯಲ್ಲಿ ತೆರೆಸುವ ಮೂಲಕ ಠೇವಣಿಯನ್ನೂ ಸಹಾ ಮಾಡಿಸಲು ಮುಂದಾಗಬೇಕು. ಮಾಸಾಂತ್ಯದೊಳಗೆ ಗುರಿ ಸಾಧನೆ ಮಾಡುವ ಮೂಲಕ ಮಾ.1ರಂದು ನಡೆಯುವ ಸಭೆಗೆ ದಾಖಲೆಗಳ ಸಮೇತ ಬರಬೇಕು ಎಂದು ಸಲಹೆ ನೀಡಿದರು.

ಉತ್ಪಾದನೆ ಕುಸಿತ, ಹೈನುಗಾರಿಕೆಗೆ ಒತ್ತು: ಅವಳಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿಯುತ್ತಿರುವುದು ಅಪಾಯಕಾರಿ ಬೆಳವಣಿಗೆ ಆಗಿದ್ದು, ಈ ನಿಟ್ಟಿನಲ್ಲಿ ತಾಲೂಕಿಗೆ ಕನಿಷ್ಠ 500 ರೈತರಿಗೆ ಹೈನುಗಾರಿಕೆಗೆ ಸಾಲ ನೀಡಲು ನಿರ್ಧರಿಸಲಾಗಿದೆ. ತಕ್ಷಣ ಸೊಸೈಟಿ ಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಹಸುವನ್ನು ಆಂಧ್ರ ಇಲ್ಲವೇ ತಮಿಳುನಾಡಿನಿಂದ ಖರೀದಿ ಮಾಡಿ ಎಂದು ಸಲಹೆ ನೀಡಿದರು.

ಠೇವಣಿ ಆಂದೋಲನ ಸೊಸೈಟಿಗಳಿಗೆ ಕರೆ: ಮಹಿಳಾ ಸಂಘಗಳ 3 ಲಕ್ಷ ಮಹಿಳೆಯರಿಗೆ ಬ್ಯಾಂಕ್‌ ಸಾಲ ನೀಡಿದ್ದು ಅವರೆಲ್ಲರನ್ನೂ ಮನವೊಲಿಸಿ ಠೇವಣಿ ಇಡಿಸುವ ಕೆಲಸವನ್ನು ಕಾರ್ಯದರ್ಶಿಗಳು ಮಾಡಬೇಕಿದ್ದು, ಇದು ದೊಡ್ಡ ಆಂದೋಲನವಾಗಿ ಬೆಳೆಯುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಅಂಚೆ ಕಚೇರಿಯಲ್ಲಿರುವ ಮಹಿಳೆಯರ ಸಣ್ಣ ಮೊತ್ತವನ್ನೇ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದರೆ ಕೋಟ್ಯಂತರ ರೂ. ಸಂಗ್ರಹ ಆಗುತ್ತದೆ ಎಂದರು.

Advertisement

ಇಚ್ಛಾಶಕ್ತಿ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಠೇವಣಿ ಸಂಗ್ರಹ ಆಗುತ್ತಿಲ್ಲವಾದರೂ ಕೆಲವು ಮಹಿಳೆಯರು ಸ್ವಯಂ ಪ್ರೇರಿತರಾಗಿ ಡಿಸಿಸಿ ಬ್ಯಾಂಕಿಗೆ ಠೇವಣಿ ನೀಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಹಿಳಾ ಸಂಘದ ಸದಸ್ಯರಿಗೆ ಈ ನಿಟ್ಟಿನಲ್ಲಿ ಜಾಗƒತಿ ಮೂಡಿಸುವ ಕೆಲಸ ಆಗಬೇಕಿದ್ದು ಇದಕ್ಕಾಗಿ 2 ಲಕ್ಷ ಕರಪತ್ರಗಳನ್ನು ಮುದ್ರಿಸಿ ಪ್ರತಿ ಸೊಸೈಟಿಗೂ ಕಳುಹಿಸುವ ವ್ಯವಸ್ಥೆ ಒಂದು ವಾರದಲ್ಲಿ ಆಗುತ್ತದೆ ಎಂದು ತಿಳಿಸಿದರು.

ಬದ್ದತೆಯಿಂದ ಕೆಲಸ ಎನ್‌ಪಿಎ ಇಳಿಸಿ: ಡಿಸಿಸಿ ಬ್ಯಾಂಕ್‌ ಏನೆಲ್ಲಾ ಸಾಧನೆ ಮಾಡಿದ್ದರೂ ಠೇವಣಿ ಸಂಗ್ರಹದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಇದೆ ಎಂಬುದನ್ನು ಅರ್ಥ ಮಾಡಿಕೊಂಡು ಸೊಸೈಟಿ ಕಾರ್ಯದರ್ಶಿಗಳು ಅಧ್ಯಕ್ಷರನ್ನು ಒಗ್ಗೂಡಿಸಿಕೊಂಡು ಹಗಲು ರಾತ್ರಿ ದುಡಿಯುವ ಮೂಲಕ ಸಹಕಾರಿ ಸಂಸ್ಥೆಯನ್ನು ಬೆಳೆಸಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ಯಾವುದೇ ಸಾಲ ಸುಸ್ತಿ ಆಗದಂತೆ ಕ್ರಮ ಕೈಗೊಳ್ಳುವ ಮೂಲಕ ಎನ್‌ಪಿಎ ಇಳಿಸಬೇಕು ಎಂದು ಸೂಚಿಸಿದರು.

ಆರೋಗ್ಯ ವಿಮೆ: ಸೊಸೈಟಿ ಸಿಬ್ಬಂದಿಗೆ ತಲಾ 3 ಲಕ್ಷ ರೂ. ಹೆಲ್ತ್‌ ಇನ್ಸುರೆನ್ಸ್‌ ಮಾಡಿಸಲು ಡಿಸಿಸಿ ಬ್ಯಾಂಕ್‌ ಬದ್ಧವಾಗಿದ್ದರೂ ನೌಕರರು ಅಗತ್ಯ ದಾಖಲೆ ಒದಗಿಸುತ್ತಿಲ್ಲ. ಮಾ.1 ರಂದು ನಡೆಯುವ ಸಭೆಗೆ ಪ್ರತಿಯೊಬ್ಬರೂ ದಾಖಲೆ ಕಡ್ಡಾಯವಾಗಿ ಒದಗಿಸಬೇಕು. ಏ.1ರಿಂದ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ನುಡಿದರು.

ಸಿಬ್ಬಂದಿಗೆ ತರಬೇತಿ:
ಮಾರ್ಚ್‌ 31ರೊಳಗೆ ಅವಳಿ ಜಿಲ್ಲೆಯ ಬಹುತೇಕ ಸೊಸೈಟಿಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರಲಾಗುತ್ತಿದ್ದು, ಈ ನಿಟ್ಟಿನಲ್ಲಿ ಫೆ.19 ಮತ್ತು 20 ರಂದು ಯೂನಿಯನ್‌ ಸಭಾಂಗಣದಲ್ಲಿ ನಡೆಯುವ ಕಂಪ್ಯೂಟರ್‌ ತರಬೇತಿಗೆ ಕಾರ್ಯದರ್ಶಿಗಳು ತಪ್ಪದೇ ಹಾಜರಾಗಬೇಕೆಂದು ಸೂಚಿಸಿದರು.

ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ: ಸಹಕಾರಿ ಸಂಸ್ಥೆಗಳ ಮುಖ್ಯಸ್ಥರೇ ವಾಣಿಜ್ಯ ಬ್ಯಾಂಕ್‌ನಲ್ಲಿ ಲಕ್ಷಾಂತರ ರೂ. ಇಡಿಗಂಟು ಇಟ್ಟಿರುವ ಮಾಹಿತಿ ಸಭೆಯಲ್ಲಿ ಬಹಿರಂಗವಾದಾಗ ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡ ಗೋವಿಂದಗೌಡ, ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿ, ಬೈರನಹಳ್ಳಿ, ಲಕ್ಕೂರು ಮುಂತಾದ ಸೊಸೈಟಿ ಹಾಗೂ ಹಾಲು ಡೇರಿ ಮುಖ್ಯಸ್ಥರು ಒಬ್ಬರೇ ಆಗಿದ್ದು, ಹಣ ಮಾತ್ರ ಕಮರ್ಷಿಯಲ್‌ ಬ್ಯಾಂಕ್‌ನಲ್ಲಿದೆ ಎಂಬ ವಿಷಯ ಗೌರವ ತರುವಂತದ್ದಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ, ಹನುಮಂತರೆಡ್ಡಿ, ಎಸ್‌.ಸೋಮಶೇಖರ್‌, ಕೆ.ವಿ.ದಯಾನಂದ್‌, ಎಂ.ಎಲ್‌.ಅನಿಲ್‌ಕುಮಾರ್‌, ಎಚ್‌.ನರಸಿಂಹರೆಡ್ಡಿ, ಕೆ.ಎಚ್‌.ಚನ್ನರಾಯಪ್ಪ, ಬಿ.ವಿ.ವೆಂಕಟರೆಡ್ಡಿ, ಎಚ್‌.ಎಸ್‌.ಮೋಹನ್‌ರೆಡ್ಡಿ, ಎಂಡಿ ಎಂ.ರವಿ, ಎಜಿಎಂ ಎಂ.ಆರ್‌.ಶಿವಕುಮಾರ್‌ ಇದ್ದರು.

ಇಂದಲ್ಲಾ ನಾಳೆ ಪ್ರತ್ಯೇಕ ಬ್ಯಾಂಕ್‌: ಚಿಕ್ಕಬಳ್ಳಾಪುರ ಜಿಲ್ಲೆಗೆ ಇಂದಲ್ಲ ನಾಳೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಮಾಡಲೇಬೇಕಾಗಿರುವುದರಿಂದಾಗಿ ಈಗಿನಿಂದಲೇ ಬ್ಯಾಂಕಿಂಗ್‌ ಕ್ಷೇತ್ರವನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ. ಈ ದೆಸೆಯಲ್ಲಿ ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕಿನ ಸೊಸೈಟಿಗಳು ಮತ್ತಷ್ಟು ಬಲಗೊಳ್ಳಬೇಕಾಗುತ್ತದೆ. ಹೊಸ ಬ್ಯಾಂಕ್‌ ಅಡಿಪಾಯವೇ ಠೇವಣಿ ಮತ್ತು ಷೇರು ಸಂಗ್ರಹ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next