ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್ ವತಿಯಿಂದ ಇಂಟರ್ ಜಿಎಸ್‌ಬಿ ಕ್ರಿಕೆಟ್ ಪಂದ್ಯಾಟವು ಎ. 21 ರಿಂದ ಎ. 22 ರವರೆಗೆ ಎರಡು ದಿನಗಳ ಕಾಲ ದಾದರ್ ಪೂರ್ವದ ಡಾ| ಎನ್. ಎ. ಪುರಂದರ ಸ್ಟೇಡಿಯಂನಲ್ಲಿ ಪೂರ್ವಾಹ್ನ 10 ರಿಂದ ಸಂಜೆ 5ರ ವರೆಗೆ ಜರಗಿತು.
ಪಂದ್ಯಾವಳಿಯಲ್ಲಿ ಮುಂಬಯಿಯ ಜಿಎಸ್‌ಬಿ ಸಮಾಜದ ಸುಮಾರು 17 ತಂಡಗಳು ಪಾಲ್ಗೊಂಡಿರುವುದಲ್ಲದೆ, ವಿಶೇಷವಾಗಿ ಮಹಿಳೆಯರ 6 ತಂಡಗಳು ಭಾಗವಹಿಸಿದ್ದವು. ಸಮಾಜದ ಅಪಾರ ಕ್ರಿಕೆಟ್ ಅಭಿಮಾನಿಗಳು ಪಂದ್ಯಾಟದಲ್ಲಿ ಪಾಲ್ಗೊಂಡು ಆಟಗಾರರನ್ನು ಪ್ರೋತ್ಸಾಹಿಸಿದರು. ಎ. 22 ರಂದು ನಡೆದ ಫೈನಲ್ ಪಂದ್ಯದಲ್ಲಿ ಜಿಎಸ್‌ಬಿ ಮಂಡಲ ಡೊಂಬಿವಲಿ ತಂಡವು ಜಿಎಸ್‌ಬಿ ಅಂಧೇರಿ ತಂಡವನ್ನು ಎದುರಿಸಿತು.
ಜಿಎಸ್‌ಬಿ ಮಂಡಲ ಡೊಂಬಿವಲಿ ತಂಡವು ಆರು ಓವರ್‌ಗಳಲ್ಲಿ 44 ರನ್‌ಗಳಿಸಿದರೆ, ಅಂಧೇರಿ ತಂಡವು 38 ರನ್‌ಗಳಿಸಲು ಶಕ್ತವಾಗಿದ್ದು, ಅಂತಿಮ ವಾಗಿ ಡೊಂಬಿವಲಿ ತಂಡವು ವಿನ್ನರ್ ಪ್ರಶಸ್ತಿಗೆ ಭಾಜನವಾಯಿತು. ಡೊಂಬಿವಲಿ ತಂಡದ ಲೋಕೇಶ್ ಪೈ ಇವರು 17 ರನ್ ಹೊಡೆದು ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಜಿಎಸ್‌ಬಿ ಸೇವಾ ಮಂಡಳದ ವಾರಿಯರ್ ತಂಡವು ಜಿಎಸ್‌ಬಿ ದಹಿಸರ್-ಬೊರಿವಲಿಯ ಶಕ್ತಿ ತಂಡವನ್ನು ಎದುರಿಸಿತ್ತು. ಜಿಎಸ್‌ಬಿ ಸೇವಾ ಮಂಡಳದ ವಾರಿಯರ್ ತಂಡವು ಐದು ಓವರ್‌ಗಳಲ್ಲಿ 55 ರನ್‌ಗಳನ್ನು ಹೊಡೆದರೆ, ಜಿಎಸ್‌ಬಿ ದಹಿಸರ್-ಬೊರಿವಲಿ ಶಕ್ತಿ ತಂಡವು 25 ರನ್‌ಗಳನ್ನು ಹೊಡೆದು ಸೋಲನ್ನು ಒಪ್ಪಿಕೊಂಡಿತು. ಅಂತಿಮವಾಗಿ ಜಿಎಸ್‌ಬಿ ಸೇವಾ ಮಂಡಲ ವಾರಿಯರ್ ತಂಡವು ವಿನ್ನರ್ ಪ್ರಶಸ್ತಿಗೆ ಭಾಜನವಾಯಿತು.
ಸಮಾರೋಪ ಸಮಾರಂಭದಲ್ಲಿ ರಣಜಿ ಟ್ರೋಫಿ ಮಾಜಿ ಆಟಗಾರ ಅಮಿತ್ ದಾನಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಜಿಎಸ್‌ಬಿ ಸೇವಾ ಮಂಡಳದ ಅಧ್ಯಕ್ಷ ರಮೇಶ್ ಭಂಡಾರ್ಕರ್ ಇವರು ಅತಿಥಿಗಳನ್ನು ಗೌರವಿಸಿದರು. ವಿಜೇತ ತಂಡಗಳನ್ನು ಅತಿಥಿ-ಗಣ್ಯರು ಟ್ರೋಫಿ, ಗಣಪತಿ ಭಾವಚಿತ್ರ ಹಾಗೂ ಮೆಡಲ್‌ಗಳನ್ನಿತ್ತು ಗೌರವಿಸಿದರು. ಜಿಎಸ್‌ಬಿ ಸೇವಾ ಮಂಡಳದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯಕರ್ತರು, ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಎರಡು ದಿನಗಳ ಕಾಲ ಫಲಾಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.