Advertisement

ಕಂಟಕವಾದ ಬೇಸಿಗೆ ರಜೆ; ಅಪ್ರಾಪ್ತರಿಗೆ ವಿವಾಹದ ಸಜೆ!

10:18 PM Apr 29, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳ ವಾರ್ಷಿಕ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭಗೊಂಡಿವೆ. ಈಗಾಗಲೇ ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟಗೊಂಡಿದ್ದು, ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರಕಟಣೆಗೆ ದಿನಗಣನೆ ಶುರುವಾಗಿದೆ. ಆದರೆ, ಜಿಲ್ಲೆಯ ಮಕ್ಕಳ ಪಾಲಿಗೆ ಮಾತ್ರ ಬೇಸಿಗೆ ರಜೆಗಳೇ ಈಗ ಸಜೆಯಾಗಿ ಪರಿಣಮಿಸಿವೆ.

Advertisement

ಏಕೆಂದರೆ, ಬೇಸಿಗೆ ರಜೆಗಳಲ್ಲಿ ದೂರದ ಅಜ್ಜಿ, ತಾತ, ನೆಂಟರು, ಸಂಬಂಧಿಕರ ಮನೆಗಳಲ್ಲಿ ಸುತ್ತಾಡಿ ವಿವಿಧ ಆಟೋಟಗಳಲ್ಲಿ ಖುಷಿಯಿಂದ ತೊಡಗಿದ್ದ ಮಕ್ಕಳಿಗೆ ಈಗ ಪೋಷಕರೇ ತಮ್ಮ ಮೇಲಿನ ಭಾರ ಇಳಿಸಿಕೊಳ್ಳಲು ಮಾಡುತ್ತಿರುವ ಅಪ್ರಾಪ್ತ ಮದುವೆ ಈಗ, ಅವರ ಬದುಕಿಗೆ ಭಾರವಾಗಿ ಪರಿಣಮಿಸಿದೆ.

ಬಾಲ್ಯ ವಿವಾಹಕ್ಕೆ ಕುಖ್ಯಾತಿ ಪಡೆದಿರುವ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಬೇಸಿಗೆ ರಜೆಯನ್ನೇ ಬಂಡವಾಳ ಮಾಡಿಕೊಂಡ ಪೋಷಕರು, ಅಪ್ರಾಪ್ತೆಗೆ ಮದುವೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ತಾಲೂಕಿನ ಯಗವಬಂಡ್ಲಕರೆಯಲ್ಲಿ ಕಳೆದ ಭಾನುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ಫ‌ಲಿತಾಂಶಕ್ಕೆ ಎದುರು ನೋಡುತ್ತಿದ್ದ 16 ವರ್ಷದ ಅಪ್ರಾಪ್ತೆಗೆ ಪೋಷಕರು ಬಲವಂತವಾಗಿ ಬಾಲ್ಯ ವಿವಾಹ ಮಾಡಿ ಕೈ ತೊಳೆದುಕೊಂಡಿದ್ದಾರೆ.

ಬಾಗೇಪಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕಿಯನ್ನು ಪರೀಕ್ಷೆ ಮುಗಿದ ಕೂಡಲೇ ಬಲವಂತವಾಗಿ ಒಪ್ಪಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೂದಿಗೆರೆ ಗ್ರಾಮದ 32 ವರ್ಷದ ವ್ಯಕ್ತಿಗೆ ಕೊಟ್ಟು ಪೋಷಕರು ವಿವಾಹ ಮಾಡಿಸಿದ್ದಾರೆ. ಅದು ಎಲ್ಲಾರಿಗೂ ಗೊತ್ತಾಗುವಂತೆ ಮದುವೆಯನ್ನು ಆಹ್ವಾನ ಪತ್ರಿಕೆ ಮುದ್ರಿಸಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮಾಡಿದರೂ ಬಾಲ್ಯ ವಿವಾಹ ತಡೆಯುವಲ್ಲಿ ಯಾರು ಮುಂದಾಗದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅನುಮಾನಕ್ಕೀಡಾದ ಅಧಿಕಾರಿಗಳ ನಡೆ: ಬಾಗೇಪಲ್ಲಿ ತಾಲೂಕಿನಲ್ಲಿ ಭಾನುವಾರ ನಡೆದಿರುವ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ತಡೆದಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ವಿವಾಹದ ಬಳಿಕ, ಎಚ್ಚೆತ್ತುಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಬಾಲಕಿ ಸಿಕ್ಕಿಲ್ಲ ಎಂದು ಬಾಗೇಪಲ್ಲಿ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಬಾಗೇಪಲ್ಲಿ ಆಂಧ್ರದ ಗಡಿಯಲ್ಲಿದ್ದು ಪ್ರತಿ ವರ್ಷ ಬಾಲ್ಯ ವಿವಾಹ ನಡೆಯುವ ಸಂಖ್ಯೆಯಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದೆ. ಈಗ ಮಕ್ಕಳಿಗೆ ಬೇಸಿಗೆ ರಜೆಗಳನ್ನು ನೀಡಿರುವುದರಿಂದ ಪೋಷಕರು ಅಪ್ರಾಪ್ತರಿಗೆ ವಿವಾಹ ಮಾಡಿ ಕಾನೂನು ಮೀರುತ್ತಿರುವುದು ಎದ್ದು ಕಾಣುತ್ತಿದೆ.

Advertisement

ಮದುವೆಗೆ ದೊಡ್ಡಮ್ಮನ ಕುಮ್ಮಕ್ಕು: ಅಪ್ರಾಪ್ತೆಗೆ ವಿವಾಹ ಮಾಡಲು ಬಳ್ಳಾರಿಯಲ್ಲಿರುವ ಬಾಲಕಿ ದೊಡ್ಡಮ್ಮ ಕಾರಣ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಾಲಕಿ ತಾಯಿ ಸರಸ್ವತಮ್ಮ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ. ಮದುವೆಗೆ ನಮ್ಮ ಪಾತ್ರ ಇಲ್ಲ. ಅವರ ದೊಡ್ಡಮ್ಮ ಸಂಬಂಧ ನೋಡಿ ಮದುವೆ ಮಾಡಿದ್ದಾರೆಂದು ಹೇಳಿದ್ದಾರೆ. ಸದ್ಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಪ್ರಾಪ್ತೆ ವಧು ಹಾಗೂ 32 ವರ್ಷದ ವರ ನಾಪತ್ತೆಯಾಗಿದ್ದಾರೆ. ಯಗವಬಂಡ್ಲಕೆರೆಗೆ ಹಾಗೂ ಬೂದಿಗೆರೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರೂ ಯಾರೂ ಮನೆಯಲ್ಲಿ ಇರಲಿಲ್ಲ. ಬಾಲಕಿ ರಕ್ಷಣೆಗೆ ಜಿಲ್ಲಾ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ವಿಶೇಷ ತಂಡ ರಚಿಸಿದ್ದು ಹುಡುಕಾಟದಲ್ಲಿ ತೊಡಗಿದೆ.

6 ಮಂದಿ ಮೇಲೆ ಎಫ್ಐಆರ್‌: ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಾಗೇಪಲ್ಲಿ ಪುರ ಠಾಣೆಯಲ್ಲಿ ಒಟ್ಟು 6 ಮಂದಿ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ದೂರು ದಾಖಲಿಸಿದೆ. ಈ ಸಂಬಂಧ ಅಪ್ರಾಪ್ತೆಯನ್ನು ಮದುವೆ ಮಾಡಿಕೊಂಡಿರುವ ವರ, ಇಬ್ಬರು ತಂದೆ, ತಾಯಂದಿರು ಸೇರಿ ಒಟ್ಟು 6 ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಉಗವಬಂಡ್ಲಕರೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 16 ವರ್ಷದ ಬಾಲಕಿಗೆ ಬಾಲ್ಯ ವಿವಾಹ ನಡೆದಿದೆ. ಈ ಸಂಬಂಧ 6 ಮಂದಿ ವಿರುದ್ಧ ಬಾಗೇಪಲ್ಲಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಾಲಕಿಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.
ಲಕ್ಷ್ಮೀದೇವಮ್ಮ, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next