ಯಾದಗಿರಿ: ಬೌದ್ಧಿಕ ಬೆಳವಣಿಗೆ ಸಂಗೀತ, ಸಾಹಿತ್ಯ ಅಧ್ಯಯನ ಅಗತ್ಯವಾಗಿದ್ದು, ಪ್ರತಿಯೊಬ್ಬರು ಓದುವ ಸದಾಭಿರುಚಿ ಬೆಳಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೇಕಾರ್ ಹೇಳಿದರು. ನಗರದ ಹೇಮರಡ್ಡಿ ಮಲ್ಲಮ್ಮ ಶಾಲೆ ಆವರಣದಲ್ಲಿ ವಿಶ್ವಗಂಗು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಂಗೀತ ಆಯಾ ಭಾಗದ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಸಾಹಿತ್ಯ ಸಂಸ್ಕೃತಿ ಬೆಳವಣಿಗೆ ಎಲ್ಲಿ ಇರುವುದಿಲ್ಲವೋ ಅಂತಹ ಪ್ರದೇಶಗಳನ್ನು ಕಾಡು ಪ್ರಾಣಿಗಳು ವಾಸಿಸುವ ಸ್ಥಳವೆಂದು ಗುರುತಿಸಲಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಯಾದಗಿರಿ ಜಿಲ್ಲೆಯಾಗಿ 7 ವರ್ಷ ಗತಿಸಿದರೂ ಜಿಲ್ಲಾ ಕೇಂದ್ರದಲ್ಲಿ ಒಂದೇ ಒಂದು ಸಂಗೀತ ಶಾಲೆ ಇಲ್ಲ. ಈ ಕೊರತೆಯನ್ನು ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆ ಹಾಗೂ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಅವರು ಸಂಗೀತ ಶಾಲೆ ಆರಂಭಿಸುವ ಮೂಲಕ ನೀಗಿಸಿದ್ದಾರೆ. ಅವರ ಪ್ರಯತ್ನ ಶ್ಲಾಘನೀಯ ಎಂದರು.
ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಮಾತನಾಡಿ, ಮಕ್ಕಳಲ್ಲಿ ಸಂಗೀತ ಕಲೆಯನ್ನು ಬೆಳೆಸವು ನಿಟ್ಟಿನಲ್ಲಿ ಸಂಗೀತ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಯಾದಗಿರಿಯ ಏಕೈಕ ಸಂಗೀತ ಶಾಲೆ ಈ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವಗಂಗು ಟ್ರಸ್ಟ್ ಅಧ್ಯಕ್ಷ ಆರ್. ವಿಶ್ವನಾಥರೆಡ್ಡಿ ಮಾಲಿ ಪಾಟೀಲ್ ಮಾತನಾಡಿ, ಮುಂಬರುವ ದಿನಗಳಲ್ಲಿ ತಮ್ಮ ಸಂಸ್ಥೆ ವತಿಯಿಂದ ಇನ್ನು ಹಲವು ಸಂಸ್ಕೃತಿ ಕಾರ್ಯಕ್ರಮಗಳು ಅಲ್ಲದೇ ಅಂಗವಿಕಲರ ಕಲ್ಯಾಣಕ್ಕಾಗಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ವಿ. ಮುದ್ನಾಳ, ಬಿಜೆಪಿ ಕಾರ್ಯದರ್ಶಿ ಸುರೇಶ ಆಕಾಳ, ನಿವೃತ್ತ ಶಿಕ್ಷಣಾಧಿಕಾರಿ ಶಂಕರ್ ಸೋನಾರ್, ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ, ನಿತೀಶ ಕುಮಾರ್, ದೇವಿಂದ್ರ ಕುಮಾರ್ ಹುಲಕಲ್, ಸೇರಿದಂತೆ ಸಂಗೀತ ಕಲಾವಿದರು, ಸಂಗೀತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.