Advertisement
ಟ್ರಿಪ್ ಹೋಗುವುದೆಂದರೆ ಎಲ್ಲರಿಗೂ ಇಷ್ಟವೇ? ಕಾರು ಇಲ್ಲವೇ ಬೈಕ್‌ನಲ್ಲಿ ಸಂಚರಿಸುತ್ತಾ ನಮಗೆ ಇಷ್ಟವೆನಿಸಿದ ಕಡೆ ನಿಲ್ಲಿಸಿಕೊಂಡು ಅಲ್ಲಿನ ಸಂಪ್ರದಾಯ, ಸಂಸ್ಕೃತಿ ತಿಳಿದುಕೊಳ್ಳಬಹುದು. ಇಲ್ಲವೇ ಸಾರ್ವಜನಿಕ ಸಾರಿಗೆಗಳಲ್ಲೂ ಪ್ರವಾಸ ಹೋಗುವವರಿಗೇನೂ ಕಡಿಮೆಯಿಲ್ಲ. ತಾವು ಹೋಗುತ್ತಿರುವ ಟ್ರಿಪ್‌ಗೂ ವಿಮೆ ಮಾಡಿಸಬಹುದು ಎನ್ನುವ ಸಂಗತಿ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಮಾರ್ಗಮಧ್ಯೆ ಜರುಗುವ ಅಡೆತಡೆ ಹಾಗೂ ಆಕಸ್ಮಿಕ ಅವಘಡಗಳು, ವಸ್ತುಗಳನ್ನೇನಾದರೂ ಕಳೆದುಕೊಂಡಲ್ಲಿ ಈ ವಿಮೆ ರಕ್ಷಣೆ ಒದಗಿಸುತ್ತದೆ. ಇದರಿಂದ, ಪ್ರವಾಸದ ಸಂದರ್ಭದಲ್ಲಿ ಜರುಗುವ ಸಂಭವನೀಯ ಆರ್ಥಿಕ ನಷ್ಟದಿಂದ ಪಾರಾಗಬಹುದು.
Related Articles
Advertisement
ಸಾಹಸ ಕ್ರೀಡೆ: ಚಾರಣ ಮತ್ತಿತರ ಸಾಹಸ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಜರುಗುವ ಅವಘಡಗಳಿಗೂ ರೋಡ್ ಟ್ರಿಪ್ ವಿಮೆ ಪರಿಹಾರ ಒದಗಿಸಲಿದೆ. ಆದರೆ, ವಿಮೆ ಇಂತಿಷ್ಟು ವ್ಯಾಪ್ತಿಯ ಪ್ರದೇಶದಲ್ಲಿ ಮಾತ್ರ ಕಾರ್ಯಾಚರಿಸುವಂತಿದ್ದರೆ ಅದನ್ನು ಗ್ರಾಹಕ ಗಮನಿಸಬೇಕಾಗುತ್ತದೆ. ಟ್ರಿಪ್‌ಗೆ ತೆರಳುವ ಮುನ್ನ ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು, ತುರ್ತು ಪರಿಹಾರ ಕಿಟ್, ವಿಮೆ ಕಂಪನಿಯೊಂದಿಗೆ ಸಂಪರ್ಕವಿಟ್ಟುಕೊಳ್ಳುವುದನ್ನು ಮರೆಯಬೇಡಿ. ಹ್ಯಾಪಿ ಜರ್ನಿ….
ಮಾರ್ಗ ಮಧ್ಯ ಸಹಾಯಕರು: ಜಾಲಿರೈಡ್‌ನಲ್ಲಿ ನಿಮ್ಮ ವಾಹನ ಕೆಟ್ಟು ನಿಂತರೆ ಭಯಪಡಬೇಕಿಲ್ಲ. ದೇಶಾದ್ಯಂತ 7000 ಸ್ಥಳಗಳಲ್ಲಿ 27×7 ನಂತೆ ಕಾರ್ಯ ನಿರ್ವಹಿಸಲು ರಸ್ತೆ ಮಾರ್ಗ ಸಹಾಯಕರು ಲಭ್ಯವಿರುತ್ತಾರೆ. ಬಜಾಜ್ ಫಿನ್‌ಸರ್ವ್, ಭಾರತಿ ಐಎಕ್ಸ್‌ಎ, ಇಪ್ಕೊ ಟೋಕಿಯೊ ಎಚ್‌ಡಿಎಫ್ಸಿ ಎರ್ಗೊ ಟ್ರಾವೆಲ್ ಇನ್ಷೊರನ್ಸ್‌ಗಳಲ್ಲಿ ಕೆಲವು.
50 ಪೈಸೆಯ ರೈಲ್ವೇ ಇನ್ಷೊರೆನ್ಸ್: ಇಂದಿನ ಕಾಲದಲ್ಲಿ ಪೈಸೆಗೆ ಏನೂ ಸಿಕ್ಕುವುದಿಲ್ಲ. ಅದು ತನ್ನ ಬೆಲೆ ಕಳೆದುಕೊಂಡಿದೆ ಎಂಬ ಮಾತನ್ನು ನೀವು ಕೇಳಿರಬಹುದು. ಒಂದು ವೇಳೆ ಯಾರಾದರೂ “50 ಪೈಸೆಗೆ ಏನು ಬರುತ್ತೆ?’ ಎಂದು ಕೇಳಿದರೆ “ರೈಲ್ವೇಸ್‌ನ 10 ಲಕ್ಷ ಮೌಲ್ಯದ ವಿಮೆ ಬರುತ್ತೆ’ ಎನ್ನಬಹುದು. ಭಾರತೀಯ ರೈಲ್ವೇಸ್ ತನ್ನ ಪ್ರಯಾಣಿಕರಿಗೆ 10 ಲಕ್ಷ ರೂ. ಮೊತ್ತದ ವಿಮಾ ಸುರಕ್ಷೆಯನ್ನು ದಯಪಾಲಿಸುತ್ತಿದೆ. ಪ್ರಯಾಣಿಕ ಕೊಡಬೇಕಾಗಿರುವುದು 50 ಪೈಸೆ ಮಾತ್ರ!
ಐಆರ್‌ಸಿಟಿಸಿ ಜಾಲತಾಣ ಅಥವಾ ಮೊಬೈಲ್ ಆ್ಯಪ್‌ಗ್ಳ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಈ ವಿಮಾ ಸೌಲಭ್ಯವಿದೆ. ಈ ಪಾಲಿಸಿ, ರೈಲು ಅಪಘಾತದಿಂದ ಉಂಟಾದ ಶಾಶ್ವತ ಅಂಗವೈಕಲ್ಯ(10 ಲಕ್ಷ), ಭಾಗಶಃ ಅಂಗವೈಕಲ್ಯ(7.5 ಲಕ್ಷ), ಆಸ್ಪತ್ರೆ ಖರ್ಚು(2 ಲಕ್ಷ), ಮೃತ್ಯು (10 ಲಕ್ಷ) ಇವಿಷ್ಟಕ್ಕೂ ಪರಿಹಾರ ಒದಗಿಸಲಿದೆ. ರೈಲ್ವೇ ಟಿಕೆಟ್ ಬುಕ್ ಮಾಡುವಾಗ “ಇನ್ಷೊರೆನ್ಸ್’ ಆಯ್ಕೆಯನ್ನು ಪ್ರಯಾಣಿಕ ಟಿಕ್ ಮಾಡಲು ಮರೆಯಬಾರದು.
ಕೆಎಸ್ಸಾರ್ಟಿಸಿ 1 ರೂ. ವಿಮೆ: ರಾಜ್ಯ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಕ ಕೊಳ್ಳುವ ಟಿಕೆಟ್, 1 ರೂ. ವಿಮೆಯ ಮೊತ್ತವನ್ನೂ ಒಳಗೊಂಡಿರುತ್ತದೆ. ಅಪಘಾತ ಮತ್ತಿತರ ಅವಘಡ ಜರುಗಿದ ಸಂದರ್ಭದಲ್ಲಿ ಪ್ರಯಾಣಿಕರಿಗೆ ವಿಮಾ ಸುರಕ್ಷೆಯನ್ನು ಒದಗಿಸಲಾಗುತ್ತದೆ. ಮೃತ್ಯು ಸಂಭವಿಸಿದರೆ ನ್ಯಾಯಾಲಯ ಘೋಷಿಸುವ ಪರಿಹಾರ ಮಾತ್ರವಲ್ಲದೆ, ಹೆಚ್ಚುವರಿಯಾಗಿ 3 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಗಾಯಾಳುಗಳಿಗೆ ಅಸ್ಪತ್ರೆ ಖರ್ಚು ಮತ್ತು ನ್ಯಾಯಾಲಯ ವಿಧಿಸುವ ಪರಿಹಾರವನ್ನು ಸಂಸ್ಥೆ ಭರಿಸಲಿದೆ.
* ನಿರಂಜನ್