Advertisement

14 ವರ್ಷದ ಬಳಿಕ ವಿಮಾ ನ್ಯಾಯ!

06:45 AM Dec 15, 2018 | Team Udayavani |

ಗದಗ: ಮಳೆ, ಬೆಳೆ ಕೈ ಕೊಟ್ಟು ಕಂಗಾಲಾದ ರೈತನಿಗೆ ವಿಮಾ ಕಂಪನಿಗಳು ಮೋಸ ಮಾಡುವುದು ಹೊಸದೇನಲ್ಲ. ಆದರೆ, 14 ವರ್ಷಗಳಿಂದ ಪರಿಹಾರ ನೀಡದೆ ಅನ್ಯಾಯ ಮಾಡಿದ್ದ ವಿಮಾ ಕಂಪನಿಯನ್ನು ಕಟಕಟೆಯಲ್ಲಿ ನಿಲ್ಲಿಸಿದ ರೈತರು ತಮಗೆ ಬರಬೇಕಿದ್ದ 30 ಲಕ್ಷ ರೂ.ಗಳಷ್ಟು ಪರಿಹಾರವನ್ನು ಗ್ರಾಹಕರ ನ್ಯಾಯಾಲಯದ ಮೂಲಕ ವಸೂಲಿ ಮಾಡಿದ್ದಾರೆ!

Advertisement

ಜಿಲ್ಲೆಯ ರೋಣ ತಾಲೂಕಿನ ಮಾರನ ಬಸರಿ, ಹುಲ್ಲೂರು, ಸೋಮನಕಟ್ಟಿ, ಮುದೇನಗುಡಿ, ಹೊಳೆಹಡಗಲಿ ಸೇರಿ ವಿವಿಧ ಗ್ರಾಮಗಳ 185 ರೈತರು 2003ರಲ್ಲಿ ಭಾರತೀಯ ಕೃಷಿ ವಿಮಾ ಕಂಪನಿಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಈರುಳ್ಳಿ, ಮೆಕ್ಕೆಜೋಳ ಮತ್ತು ಸೂರ್ಯಕಾಂತಿ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ಆದರೆ, ಆ ವರ್ಷ ಜಿಲ್ಲೆಯಲ್ಲಿ ಬರ ಆವರಿಸಿದ್ದರಿಂದ ಬೆಳೆಗಳು ಕೈಗೆ ಬಾರದ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಬೆಳೆ ವಿಮಾ ಕಂಪನಿಗೆ ಮನವಿ ಮಾಡಿದ್ದರು. ಆದರೆ, ರೈತರ ಅರ್ಜಿಯನ್ನು ತಿರಸ್ಕರಿಸಿದ್ದ ವಿಮಾ ಕಂಪನಿ, ಬೆಳೆ ಸಂಪೂರ್ಣವಾಗಿ ಬಂದಿದೆ. ನಿಮಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿತ್ತು. ಆದಾಗಲೇ ಬೆಳೆ ನಷ್ಟದಿಂದ ನೊಂದಿದ್ದ ರೈತರು, ವಿಮಾ ಕಂಪನಿಯ ಬೇಜವಾಬ್ದಾರಿ ಹೇಳಿಕೆಯಿಂದ ಕಂಗಾಲಾಗಿ 2005ರಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕುರಿತು ಪರ-ವಿರೋಧ  ವಾದ ಆಲಿಸಿದ್ದ ಗ್ರಾಹಕರ ವೇದಿಕೆ 2006ರಲ್ಲಿ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು.

ವಾರೆಂಟ್‌ ಹೊರಡಿಸಿತ್ತು: ರೈತರಿಗೆ ಪರಿಹಾರ ನೀಡದೇ ವರ್ಷಗಳ ಕಾಲ ಅಲೆದಾಡಿಸುತ್ತಿದ್ದ ಭಾರತೀಯ ವಿಮಾ ಕಂಪನಿ ವಿರುದ್ಧ 2012ರಲ್ಲಿ ಜಿಲ್ಲಾ ಗ್ರಾಹಕರ ವೇದಿಕೆ ವಾರಂಟ್‌ ಜಾರಿಗೊಳಿಸಿತ್ತು. ಇದರಿಂದ ಆತಂಕಗೊಂಡ ವಿಮಾ ಕಂಪನಿ ವಾರಂಟ್‌
ತೆರವುಗೊಳಿಸುವಂತೆ ಕೋರಿ ರಾಜ್ಯ ಗ್ರಾಹಕರ ವೇದಿಕೆ ಮೆಟ್ಟಿಲೇರಿತ್ತು. ಅಲ್ಲಿಂದ ಆರಂಭವಾದ ವಿಚಾರಣೆ 2018ರಲ್ಲಿ ಪೂರ್ಣಗೊಂಡಿದೆ. ಅಲ್ಲದೇ, ಜಿಲ್ಲಾ ಗ್ರಾಹಕರ ವೇದಿಕೆ ನೀಡಿದ್ದ ತೀರ್ಪು ಎತ್ತಿ ಹಿಡಿದ ರಾಜ್ಯ ಗ್ರಾಹಕರ ವೇದಿಕೆ, ಕೆಳ ವೇದಿಕೆಯಲ್ಲೇ ವಾರಂಟ್‌ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿತ್ತು. ವೇದಿಕೆಯ ಎಲ್ಲ ಷರತ್ತುಗಳಿಗೆ ಒಪ್ಪಿದ ವಿಮಾ ಕಂಪನಿ ಕಳೆದ ಅ.12ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ 30 ಲಕ್ಷ ರೂ. ಹಣ ಜಮೆ ಮಾಡಿದೆ. ಇತ್ತೀಚೆಗೆ 10 ಜನ ಹಾಗೂ ಶುಕ್ರವಾರ ರೋಣ ತಾಲೂಕಿನ 18 ಜನ ರೈತರಿಗೆ ಪರಿಹಾರ ಚೆಕ್‌ ವಿತರಿಸಲಾಯಿತು. ಇನ್ನುಳಿದವರಿಗೆ ಹಂತ ಹಂತವಾಗಿ
ಹಣವನ್ನು ಚೆಕ್‌ ಮೂಲಕ ನೀಡಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಸಿ.ಎಚ್‌. ಸಮಿವುನ್ನೀಸಾ ಹಾಗೂ ವೇದಿಕೆ ಸದಸ್ಯ ಬಸವರಾಜ ಕೆರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next