Advertisement

ವಾಣಿಜ್ಯ ವಾಹನಗಳ ಚಾಲಕರಿಗೂ ವಿಮೆ

11:43 PM Mar 11, 2020 | Lakshmi GovindaRaj |

ಬೆಂಗಳೂರು: ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ಹೊಸ ಓಟಿಎಸ್‌ ನೀತಿ ಜಾರಿ, ಅಸಂಘಟಿತ ಕಾರ್ಮಿಕರ ವಲಯದಲ್ಲಿ ನೋಂದಾಯಿಸಿ ಕೊಂಡಿರುವ ಖಾಸಗಿ ವಾಣಿಜ್ಯ ವಾಹನಗಳ ಚಾಲಕರಿಗೆ ಅಪಘಾತ ವಿಮೆ ಪರಿಹಾರ ನೀಡುವುದು ಸೇರಿದಂತೆ 40ಕ್ಕೂ ಹೆಚ್ಚು ಮಹತ್ವದ ವಿಷಯಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

Advertisement

ಬೆಂಗಳೂರಿನ ಪಟೇಗಾರ ಪಾಳ್ಯದಲ್ಲಿ 11.50 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಮಂಜೂರಾತಿ ರದ್ದು, 2014-15ರಲ್ಲಿ 100 ತಾಲೂಕುಗಳಲ್ಲಿ ನೀರಿನ ಮಾದರಿ ಪರೀಕ್ಷೆ ನಡೆಸಿದ್ದ ರೇ ಎನ್ವಿರಾನ್‌ ಸಂಸ್ಥೆಯ ಬಾಕಿ ಶುಲ್ಕ ಬಿಡುಗಡೆ ಸಹ ಸಂಪುಟ ತೀರ್ಮಾನಗಳಲ್ಲಿ ಸೇರಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು
-ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ)ವಿಧೇಯಕಕ್ಕೆ ಅನುಮೋದನೆ.

-ಕೆಎಸ್‌ಐಐಡಿಸಿಯಲ್ಲಿ ಹೊಸ ಒನ್‌ ಟೈಮ್‌ ಸೆಟಲ್ಮೆಂಟ್‌ ನೀತಿ ಜಾರಿ.

-ಅಸಂಘಟಿತ ವಲಯದ ವಾಣಿಜ್ಯ ವಾಹನಗಳ ಚಾಲಕರಿಗೂ ಅಪಘಾತ ವಿಮಾ ಪರಿಹಾರ.

Advertisement

-ಹೆಬ್ಬಾಳ ಬಳಿ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ 19 ಕೋಟಿ ರೂ.ವೆಚ್ಚದಲ್ಲಿ 4 ನಿವಾಸಗಳ ನಿರ್ಮಾಣ.

-ಕಾರವಾರದ ಪೋರ್ಟ್‌ ಆಫೀಸರ್‌ ಆಗಿ ನಿವೃತ್ತ ನೌಕಾಧಿಕಾರಿ ಅರುಣ್‌ ಗಾಂವ್ಕರ್‌ ಮುಂದುವರಿಕೆ.

-ಕರ್ನಾಟಕ ಭೂಸ್ವಾಧೀನ ಮತ್ತು ಪುನರ್ವಸತಿ ತಿದ್ದುಪಡಿ ಕಾಯ್ದೆಗೆ ಅನುಮೋದನೆ.

-ದೇವಿಕಾರಾಣಿ ರೋರಿಚ್‌ ಎಸ್ಟೇಟ್‌ನ ಹೆರಿಟೇಜ್‌ ಸೈಟ್‌ ಮತ್ತು ಕಲಾಕೃತಿಗಳ ಸಂರಕ್ಷಣೆಗೆ ಕ್ರಮ.

-ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ನಿಯಮಾವಳಿಗೆ ಅನುಮೋದನೆ.

-ಕೆಎಎಸ್‌ ಅಧಿಕಾರಿ ಎಂ.ಪಿ.ರಂಜಿತಾ ವಿರುದ್ಧ ಇಲಾಖಾ ತನಿಖೆ ನಡೆಸುವ ಉಪಲೋಕಾಯುಕ್ತರ ಶಿಫಾರಸ್ಸು ತಿರಸ್ಕಾರ.

-ಕಬ್ಬನ್‌ ಪಾರ್ಕ್‌ನಲ್ಲಿರುವ ಪ್ರಸ್‌ಕ್ಲಬ್‌ ಕಟ್ಟಡದ ಗುತ್ತಿಗೆ ಅವಧಿ ಮುಂದುವರಿಕೆ.

-ಮಾಗಡಿ ರಸ್ತೆಯಲ್ಲಿ113 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರೋಗ್ಯ ಭವನ ನಿರ್ಮಾಣಕ್ಕೆ ಅನುಮತಿ.

-ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೇಡರ್‌ ಮತ್ತು ನೇಮಕಾತಿ) ನಿಯಮಾವಳಿಗೆ ಅನುಮೋದನೆ.

-ವಜಾಗೊಂಡಿದ್ದ ಸಹಾಯಕ ತೋಟಗಾರಿಕಾ ಅಧಿಕಾರಿ ಎಲ್.ಎಸ್‌.ಕಾಂಳ್ಳೆ ಮರು ನೇಮಕಕ್ಕೆ ಒಪ್ಪಿಗೆ.

-ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆ (ಕೇಡರ್‌ ಮತ್ತು ನೇಮಕಾತಿ)ನಿಯಮಾವಳಿಗೆ ಒಪ್ಪಿಗೆ.

-ಚಿತ್ರದುರ್ಗ ಜಿಲ್ಲೆಯ 346 ಹಾಗೂ ಚಿಕ್ಕಮಗಳೂರು ಜಿಲ್ಲೆಯ 113 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಸಮ್ಮತಿ.

-ಕರ್ನಾಟಕ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ 59.54 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಸಮವಸ್ತ್ರ ಮತ್ತು ಶುಚಿ ಸಂಭ್ರಮ ಕಿಟ್‌, 44.41 ಕೋಟಿ ರೂ.ವೆಚ್ಚದಲ್ಲಿ ನೋಟ್‌ ಬುಕ್‌, ಶೂಸ್‌, ಸಾಕ್ಸ್‌, ಟೈ, ಬೆಲ್ಟ್ ವಿತರಣೆಗೆ ಅನುಮತಿ.

-ಪದವಿಪೂರ್ವ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು 70.19 ಕೋಟಿ ರೂ. ಬಿಡುಗಡೆಗೆ ಸಮ್ಮತಿ.

-ಅಂಗನವಾಡಿಗಳಿಗೆ 32.95 ಕೋಟಿ ರೂ.ವೆಚ್ಚದಲ್ಲಿ ಐಸಿಡಿಎಸ್‌ ಯೋಜನೆಯಡಿ ಶಾಲಾಪೂರ್ವ ಶೈಕ್ಷಣಿಕ ಪರಿಕರ ಕಿಟ್‌ ಖರೀದಿಗೆ ಒಪ್ಪಿಗೆ.

Advertisement

Udayavani is now on Telegram. Click here to join our channel and stay updated with the latest news.

Next