Advertisement

ಪತ್ರಕರ್ತರಿಗೂ ವಿಮಾ ರಕ್ಷಣೆ: ಸಿಎಂ ಭರವಸೆ

05:53 AM Jul 04, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಕೋವಿಡ್‌ 19 ವಾರಿಯರ್ಸ್‌ ಎಂದು ಪರಿಗಣಿಸಿ ಪತ್ರಕರ್ತರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ  ಸಂಘ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.

Advertisement

ಕೋವಿಡ್‌ 19 ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ರಾಷ್ಟ್ರವ ದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುವ ವೇಳೆ ವೈದ್ಯರು, ದಾದಿಯರು, ಸೈನಿಕರು,  ಪೊಲೀಸರ ಜೊತೆಗೆ ಪತ್ರಕರ್ತರೂ ಕೋವಿಡ್‌ 19 ವಾರಿಯರ್ಸ್‌ ಎಂಬ ಹೆಚ್ಚುಗಾರಿಕೆ ಮಾತನಾಡಿ ಮೆಚ್ಚುಗೆ ಸೂಚಿಸಿದ್ದರು. ಪ್ರಧಾನಿ ಮಾತಿನಂತೆಯೇ ಈ ಎಲ್ಲ ವರ್ಗ ವಾರಿಯರ್ಸ್‌ಗಳು ಕಳೆದ ನಾಲ್ಕು ತಿಂಗಳಿಂದ ಹಗಲಿರುಳೆನ್ನದೆ  ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಜೀವದ ಹಂಗು ತೊರೆದು ಸುದ್ದಿ ಸೇವೆಯಲ್ಲಿ ನಿರತ ಪತ್ರಕರ್ತರು ಕರ್ತವ್ಯ ದಲ್ಲಿರುವಾಗಲೇ ಪ್ರಾಣ ಕಳೆದುಕೊಂಡರೆ ಅವರ ನೆರವಿಗೆ ಕೆಲವೇ ಕೆಲವು ಸರಕಾರಗಳು ಮುಂದೆ ಬಂದಿರುವುದು  ವಿಪರ್ಯಾಸ.

50 ಲಕ್ಷ ರೂ ವಿಮೆ: ಕೋವಿಡ್‌ 19 ಸಂದರ್ಭದಲ್ಲಿ ಮರಣ ಹೊಂದಿದ ಕರ್ತವ್ಯ ನಿರತ ಪತ್ರಕರ್ತರಿಗೆ ಅಸ್ಸಾಂ ಸರಕಾರ 50 ಲಕ್ಷ ರೂ., ಹರಿಯಾಣ ಸರಕಾರ 25 ಲಕ್ಷ ರೂ.ಗಳ ಪರಿಹಾರ ಯೊಜನೆ ಪ್ರಕಟಿಸಿದೆ. ಜತೆಗೆ ದೆಹಲಿ, ಕೇರಳ ತೆಲಂಗಾಣ ಸರಕಾರಗಳೂ ಕೂಡ ಯೋಜನೆ ರೂಪಿಸಿರುವುದು ವಿಶೇಷ.

ಕರ್ನಾಟಕ ಸರಕಾರಕ್ಕೆ ಮನವಿ: ಅಸ್ಸಾಂ,ಹರಿಯಾಣ ಹಾಗೂ ಇತರ ರಾಜ್ಯಗಳ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾರ್ಯನಿರತ ಪತ್ರಕರ್ತರಿಗೆ ವಿಮೆ, ಇತರ  ಸೌಕರ್ಯ ಒದಗಿಸುವಂತೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಮೇ 16ರಂದು ಮಾಡಿದ ಮನವಿಗೆ ಸ್ಪಂದಿಸಿ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ವಿಳಂಬ ಧೋರಣೆ ಅನುಸರಿಸಿದ್ದಾರೆ. ನಿಯೋಗದಲ್ಲಿ ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು,ಎಡಿಟರ್ ಗಿಲ್ಡ ಪರವಾಗಿ ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ ಕೋಣೆಮನೆ, ವಿಜಯ  ಕರ್ನಾಟಕ ಪತ್ರಿಕೆ ಬೆಂಗಳೂರು ರೆಸಿಡೆಂಟ್‌ ಎಡಿಟರ್‌ ಸುದರ್ಶನ್‌ ಚನ್ನಂಗಿಹಳ್ಳಿ ನಿಯೋಗದಲ್ಲಿದ್ದರು.

Advertisement

ವಿಮೆಗೆ ಸುಧಾಕರ್‌ ಆಗ್ರಹ: ಪತ್ರಕರ್ತರಿಗೆ ವಿಮಾ ಸೌಲಭ್ಯ ಕಲ್ಪಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಇಬ್ಬರು ಪತ್ರಕರ್ತರಿಗೆ ಪರಿಹಾರ: ಕೋವಿಡ್‌ 19 ಸಂದರ್ಭದಲ್ಲಿ ಮೃತಪಟ್ಟ ಹಿರಿಯ ಪತ್ರಕರ್ತ ಜಿ.ಪಿ.ಚಂದ್ರಶೇಖರ ಹಾಗೂ ಆಕಸ್ಮಿಕವಾಗಿ ಮೃತರಾದ ಪತ್ರಕರ್ತ ಜಿಎಂ ರವೀಶ ಅವರಿಗೆ ಪರಿಹಾರ ನೀಡುವ ಸಂಬಂಧ ಶುಕ್ರವಾರ ರಾಜ್ಯ  ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಎಡಿಟರ್ ಗಿಲ್ಡ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.ಮನವಿಗೆ ಸ್ಪಂದಿಸಿದ ಯಡಿಯೂರಪ್ಪ ಇಬ್ಬರಿಗೂ ತಲಾ 5 ಲಕ್ಷ ರೂ.ಪರಿಹಾರಕ್ಕೆ ಸೂಚಿಸಿ ಕೋವಿಡ್‌ 19 ವಿಮೆ ಯೋಜನೆ ರೂಪಿಸುವ ಸಂಬಂಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next