Advertisement

ಕ್ರೀಡಾ ಸಮವಸ್ತ್ರ ನೀಡದೆ ಅವಮಾನ: ತೀವ್ರ ಚರ್ಚೆ

04:04 PM Oct 13, 2017 | Team Udayavani |

ಸುಳ್ಯ : ಇತ್ತೀಚೆಗೆ ಬಂಟ್ವಾಳದಲ್ಲಿ ಜರಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ತಾಲೂಕಿನ ವಿದ್ಯಾರ್ಥಿಗಳು,
ಶಿಕ್ಷಕರು ಮತ್ತು ಹೆತ್ತವರಿಗೆ ಅವಮಾನವಾದ ಬಗ್ಗೆ ಗುರುವಾರ ನಡೆದ ತಾ.ಪಂ. ಸಭೆಯಲ್ಲಿ ಪ್ರಸ್ತಾಪಗೊಂಡು ತೀವ್ರ ಚರ್ಚೆ ನಡೆಯಿತು.

Advertisement

ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜರಗಿದ ಸಭೆಯಲ್ಲಿ, ಬಂಟ್ವಾಳದಲ್ಲಿ ಜರಗಿದ 14, 17ರ ವಯೋಮಿತಿ ಬಾಲಕ- ಬಾಲಕಿಯರ ಕ್ರೀಡಾಕೂಟಕ್ಕೆ ತೆರಳಿದ್ದ ತಾಲೂಕಿನ ವಿದ್ಯಾರ್ಥಿಗಳಿಗೆ ತಾ.ಪಂ.ನಿಂದ ಕ್ರೀಡಾ ಸಮವಸ್ತ್ರ ನೀಡಿಲ್ಲ. ಈ ಬಗ್ಗೆ ‘ಉದಯವಾಣಿ’ಯಲ್ಲಿ ವರದಿ ಪ್ರಕಟವಾಗಿದೆ. ಮಂಗಳೂರಿನಿಂದಲೂ ಅನೇಕ ಕರೆಗಳು ಬಂದಿವೆ. ಇದರಿಂದಾಗಿ ತಾ.ಪಂ. ಆಡಳಿತಕ್ಕೆ ಮಾತ್ರವಲ್ಲ ತಾಲೂಕಿಗೆ ತೀವ್ರ ಅವಮಾನವಾಗಿದೆ ಎಂದು ವಿಪಕ್ಷ ನಾಯಕ ಅಶೋಕ್‌ ನೆಕ್ರಾಜೆ ಹೇಳಿದರು.

ಇದಕ್ಕೆ ಕಾರಣರಾರು ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಶ್ನಿಸಿದರು. ತಾಪಂ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಉತ್ತರಿಸಿದರೂ ಸದಸ್ಯರು ತೃಪ್ತರಾಗಲಿಲ್ಲ. ಕ್ರೀಡೆಗೆ ಮೀಸಲಿಟ್ಟ ಅನುದಾನ ಸದ್ಬಳಕೆ ಮಾಡಬಹುದಿತ್ತು. ಈಗ ಮುಜುಗರವಾಗಿದೆ. ಗೊಂದಲದ ಕುರಿತು ತಾ.ಪಂ. ಅಧ್ಯಕ್ಷರು, ಶಿಕ್ಷಣ ಇಲಾಖೆ ಮತ್ತು ತಾ.ಪಂ. ಅಧಿಕಾರಿಗಳು ಜನತೆಗೆ ವಿವರ ನೀಡಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಸಹಿತ ಸದಸ್ಯರು ಒತ್ತಾಯಿಸಿದಾಗ ಸಭೆ ಒಪ್ಪಿಗೆ ಸೂಚಿಸಿತು.

ಅಂಬೇಡ್ಕರ್‌ ಭವನ
ತಾ|ನ 12 ಕಡೆ ಅಂಬೇಡ್ಕರ್‌ ಭವನಕ್ಕೆ ಸ್ಥಳ ಮಂಜೂರಾಗಿದ್ದರೂ ಪಂ.ಗಳು ಸ್ಥಳ ಗುರುತಿಸದಿರುವ ಬಗ್ಗೆ ಚರ್ಚೆ ನಡೆಯಿತು. ಕಂದಾಯ ಇಲಾಖೆ ನಿರ್ಲಕ್ಷ ವಹಿಸುತ್ತಿದೆ ಎಂದು ಬೊಳ್ಳೂರು ಹೇಳಿದರು. ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ ದನಿಗೂಡಿಸಿದರು. ಸದಸ್ಯ ಅಬ್ದುಲ್‌ ಗಫೂರ್‌, ಅಭಿವೃದ್ಧಿ ನಡೆಯಬೇಕು. 

ರೂಲಿಂಗ್‌ ನೀಡುವಂತೆ ಒತ್ತಾಯಿಸಿದರು. ವಾರದೊಳಗಾಗಿ ಸ್ಥಳ ಗುರುತಿಸುವ ಕಾರ್ಯ ನಡೆಯದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕು ಎಂದು ಅಧ್ಯಕ್ಷರು ಎಚ್ಚರಿಸಿದರು.

Advertisement

ಕುಡಿಯುವ ನೀರಿನ ಘಟಕ
ತಾಲೂಕಿಗೆ 11 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ನಾಲ್ಕನ್ನು ಕೈಬಿಡಲಾಗಿದೆ. ಉಳಿದ ಘಟಕಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಎಂಜಿನಿಯರ್‌ ತಿಳಿಸಿದರು. ಸದಸ್ಯ ಉದಯ್‌, ಹಿಂದೆ ಕೈಬಿಟ್ಟ ಘಟಕ ಮತ್ತೆ ಪುನರುಜ್ಜೀವನಗೊಳಿಸಿದ ಬಗ್ಗೆ ಉತ್ತರ ದೊರೆತಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಘಟಕದ ಕಾಮಗಾರಿಗಳು ಎಲ್ಲ ಕಳಪೆಯಾಗಿವೆ ಎಂದು ಅಶೋಕ್‌ ನೆಕ್ರಾಜೆ ಹೇಳಿದರು.

ಸುಬ್ರಹ್ಮಣ್ಯ ಮತ್ತು ಯೇನೆಕಲ್ಲು ಗ್ರಾಮದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೇಗೆ ನಿರ್ಣಯಿಸಲಾಗಿತ್ತು. ಅದು ನಡೆದಿಲ್ಲ. ಸರಕಾರದ ವತಿಯಿಂದ ಜಿಪಿಎಸ್‌ ಸರ್ವೇ ನಡೆಸುವಂತೆ ಅಶೋಕ್‌ ನೆಕ್ರಾಜೆ ಆಗ್ರಹಿಸಿದರು. ಈ ಪ್ರದೇಶದ 18 ಜನರಿಗೆ ಹಕ್ಕುಪತ್ರ ವಿತರಣೆ ತಯಾರಾಗಿದೆ. ಯೇನೆಕಲ್ಲಿನಲ್ಲಿ 62 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ 80 ಜನರಿಗೆ ಹಕ್ಕುಪತ್ರ ಮಾಡಿಸಿಕೊಟ್ಟಿದ್ದೇನೆ. ಇನ್ನೂ 280 ಕುಟುಂಬಗಳಿಗೆ ಹಕ್ಕುಪತ್ರಕ್ಕಾಗಿ ಜಂಟಿ ಸರ್ವೆ ಮಾಡಬೇಕು ಎಂದರು.

ಬಾಳಿಲದಲ್ಲಿ ಜರಗಿದ ಪ್ರತಿಭಾ ಕಾರಂಜಿ ಸ್ಪರ್ಧೆಯ ಒಟ್ಟು ಖರ್ಚಿನ ಬಗ್ಗೆ ಮಾಹಿತಿ ನೀಡಬೇಕು. ಪ್ರತಿಭಾ ಕಾರಂಜಿಯಲ್ಲಿ ಅನ್ಯ ತಾಲೂಕಿನ ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸದಸ್ಯೆ ಜಾಹ್ನವೀ ಕಾಚೋಂಡು ಆಗ್ರಹಿಸಿದರು.

ಪಂಜ ವಸತಿ ಶಾಲೆಯ ಮಧ್ಯಭಾಗ ಸಾರ್ವಜನಿಕ ರಸ್ತೆಯಿದೆ. ಕಾಂಪೌಂಡ್‌ ಮುಚ್ಚಿಸಿ, ಹೊರಗಡೆ ರಸ್ತೆ ಮಾಡಿಸಿಕೊಡಬೇಕು ಎಂಬು ಆಗ್ರಹಿಸಿದ್ದರೂ ಕಾರ್ಯಗತವಾಗಿಲ್ಲ ಎಂದು ಸದ ಸ್ಯರು ಹೇಳಿದಾಗ, ಇದಕ್ಕೆಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು ಎಂದು ಅಧಿಕಾರಿ ಉತ್ತರಿಸಿದರು. ಕೃಷಿ ಇಲಾಖೆ ಯಂತ್ರಗಳಿಗೆ ಸಹಾಯಧನ ನೀಡುವ ಯೋಜನೆಯಲ್ಲಿ ಬಿಲ್‌ ನೀಡದೆ ದಲಿತರಿಗೆ ಯಂತ್ರ ಬದಲಿಸಿ ಕೊಟ್ಟಿರುವುದಾಗಿ ಸದಸ್ಯ ಗಫೂರ್‌ ಆಪಾದಿಸಿದರು.

ಕಂದಾಯ ಇಲಾಖೆಯಲ್ಲಿ ಪೋಡಿ ಕೆಲಸಗಳು ನಡೆಯುತ್ತಿದೆ. ಆದರೆ ಹಿಂದೆ ಆದ ದರ್ಖಾಸು ಜಾಗ ಪೋಡಿ ಆಗುತ್ತಿಲ್ಲ. 11,500 ಆರ್‌ಟಿಸಿಗಳನ್ನು 35 ಗ್ರಾಮಗಳಲ್ಲಿ ಮಾಡಲಾಗಿದೆ ಎಂದು ಸರ್ವೆ ಇಲಾಖೆಯ ಅಧಿಕಾರಿ ಉತ್ತರಿಸಿದರು. ಇದಕ್ಕೆ ಸದಸ್ಯ ಗಫೂರ್‌, ಪೋಡಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರು ಹಣ ಕಟ್ಟುತ್ತಿದ್ದಾರೆ. ಅದರಲ್ಲಿ ಕೆಲವರ ಜಾಗ ಆರ್‌ಟಿಸಿ ಆಗುವುದಿಲ್ಲ. ಆಗುವ ಕೆಲಸಕ್ಕೆ ಮಾತ್ರ ಹಣ ಕಟ್ಟಬೇಕು ಎಂದು ಡಿಸಿಗೆ ಪತ್ರ ಬರೆಯುವಂತೆ ಒತ್ತಾಯಿಸಿದರು.

ಕೇನ್ಯದಲ್ಲಿ ಮರಳು ವ್ಯವಹಾರದಲ್ಲಿ 1 ಕೋಟಿ ರೂ. ರಾಜಸ್ವ ಸಂಗ್ರಹವಾಗದಿರುವ ಬಗ್ಗೆ ಅಶೋಕ್‌ ನೆಕ್ರಾಜೆ ಪ್ರಸ್ತಾಪಿಸಿದರು. ಸುಳ್ಯ ಸಮುದಾಯ ಕೇಂದ್ರದಲ್ಲಿ ಯುವತಿಯನ್ನು ಲ್ಯಾಬ್‌ ಟೆಕ್ನೀಶಿಯನ್‌ ತರಬೇತಿ ನೀಡಿ ಎರಡು ತಿಂಗಳು ದುಡಿಸಿಕೊಂಡಿದ್ದರೂ ಹಣ ನೀಡದಿರುವ ಬಗ್ಗೆ ಚರ್ಚೆ ನಡೆಯಿತು. ಶಿಥಿಲಗೊಂಡಿರುವ ದೇವರಹಳ್ಳಿ ಅಂಗನವಾಡಿ ಕಟ್ಟಡ ತೆರವುಗೊಳಿಸುವಂತೆ ಆಗ್ರಹಿಸಲಾಯಿತು. ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್‌. ರೈ, ಪ್ರಭಾರ ಇಒ ಭವಾನಿಶಂಕರ, ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌ ಉಪಸ್ಥಿತರಿದ್ದರು.

ಸೂಕ್ಷ್ಮ ಪರಿಸರ ಯೋಜನೆ 
ಕೊಲ್ಲಮೊಗ್ರು ಮತ್ತು ಹರಿಹರಪಳ್ಳತಡ್ಕ ಪಂ.ನ 5 ಗ್ರಾಮಗಳು ಸೂಕ್ಷ್ಮ ಪರಿಸರ ಯೋಜನೆ ಜಾರಿಯಾಗದಂತೆ ಗ್ರಾಮ ಸಭೆಗಳಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ತಾ.ಪಂ. ಸಭೆಯಲ್ಲೂ ನಿರ್ಣಯ ಕೈಗೊಳ್ಳುವಂತೆ ಸದಸ್ಯ ಉದಯ ಕೊಪ್ಪಡ್ಕ ಪ್ರಸ್ತಾಪಿಸಿದರು. ಇದಕ್ಕೆ ವಿಪಕ್ಷ ಸದಸ್ಯ ಅಶೋಕ್‌ ನೆಕ್ರಾಜೆ ಸಹಿತ ಸದಸ್ಯರು ಒಪ್ಪಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next