Advertisement

Tipu Sultan ನಾಮಫಲಕಕ್ಕೆ ಅಪಮಾನ; ಸಿರವಾರದಲ್ಲಿ ಉದ್ವಿಗ್ನ ಪರಿಸ್ಥಿತಿ

01:01 PM Jan 31, 2024 | Team Udayavani |

ಸಿರವಾರ (ರಾಯಚೂರು): ಪಟ್ಟಣದ ಮುಖ್ಯರಸ್ತೆಯಲ್ಲಿರುವ ಟಿಪ್ಪು ನಾಮಫಲಕಕ್ಕೆ ರಾತ್ರಿ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದು, ಪಟ್ಟಣದಲ್ಲಿ ಉಗ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಸ್ಲಿಂ ಸಮುದಾಯದವರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಮಟನ್ ಮಾರ್ಕೆಟ್ ಹತ್ತಿರವಿರುವ ಟಿಪ್ಪು ಸರ್ಕಲ್‌ನಲ್ಲಿ ಕಿಡಿಗೇಡಿಗಳು ತಡರಾತ್ರಿ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿದ್ದು, ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ಉದ್ವಿಗ್ನ ವಾತವರಣ ನಿರ್ಮಾಣವಾಗಿತ್ತು. ಮುಸ್ಲಿಂ ಯುವಕರು ಮುಖ್ಯರಸ್ತೆ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ತಹಶೀಲ್ದಾರ ರವಿ ಎಸ್ ಅಂಗಡಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಪಟ್ಟಣದ ಎಲ್ಲ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು ಎಂದರು. ಘಟನೆ ಕುರಿತಂತೆ ಪೊಲೀಸರು 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು.

ಟಿಪ್ಪು ನಾಮಫಲಕಕ್ಕೆ ಮಾಲಾರ್ಪಣೆ ಮಾಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಘಟನೆ ಸ್ಥಳಕ್ಕೆ ಶಾಸಕ ಜಿ.ಹಂಪಯ್ಯ ನಾಯಕ ಭೇಟಿ ನೀಡಿ ಟಿಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪಟ್ಟಣದಲ್ಲಿ ಮೊದಲಿನಿಂದಲೂ ಎಲ್ಲ ಸಮಾಜದವರು ಸೌಹಾರ್ದತೆಯಿಂದ ಬೆಳೆದು ಬಂದಿದ್ದು ಯಾರೋ ಕಿಡಿಗೇಡಿಗಳಿಂದ ಇಂತಹ ಕೃತ್ಯ ಎಸಗಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ ಎಂದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಸಿಪಿಐ ಶಶಿಕಾಂತ ಎಂ, ಪಿಎಸ್‌ಐ ಗುರುಚಂದ್ರ ಯಾದವ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next