ಬೀದರ: ಬೆಳಗಾವಿಯಲ್ಲಿ ನಡೆದ ಬಸವೇಶ್ವರ ಭಾವಚಿತ್ರ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಘಟನೆಗಳನ್ನು ಖಂಡಿಸಿ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಶಿವಾಜಿ ವೃತ್ತದಿಂದ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಬೆಳಗಾವಿಯಲ್ಲಿ ಕಿಡಿಗೇಡಿಗಳು ಮಹಾಪುರುಷರ ಭಾವಚಿತ್ರ, ಪ್ರತಿಮೆಗಳಿಗೆ ಅವಮಾನಿಸಿ, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ಸಮಾಜದಲ್ಲಿ ಶಾಂತಿಗೆ ಭಂಗ ತರಲು ಪ್ರಯತ್ನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆದ ರಾಯಣ್ಣ ಪ್ರತಿಮೆ ಭಗ್ನ, ಕನ್ನಡ ಬಾವುಟಕ್ಕೆ ಬೆಂಕಿ ಹಾಗೂ ಹಲಸಿ ಗ್ರಾಮದಲ್ಲಿನ ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಮೆತ್ತಿ ಅವಮಾನಿಸಿದ ಘಟನೆಗಳು ಅತ್ಯಂತ ಹೀನ ಕೃತ್ಯವಾಗಿವೆ ಎಂದು ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ ಆಕ್ರೋಶ ವ್ಯಕ್ತಪಡಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿ, ಪ್ರಕರಣಗಳ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮಹಾಪುರುಷರ ಭಾವಚಿತ್ರ, ಪ್ರತಿಮೆಗಳಿಗೆ ಅವಮಾನ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಮಹಾಪುರುಷರ ಭಾವಚಿತ್ರ, ಪ್ರತಿಮೆಗಳಿಗೆ ಅವಮಾನಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಸಮಾಜದ ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ದತ್ತಾತ್ರಿ ಮೂಲಗೆ, ಸಂಘಟನೆ ಪ್ರಮುಖರಾದ ಮಾನಶೆಟ್ಟಿ ಬೆಳಕೆರೆ, ಸಂದೀಪ ಥಮಕೆ, ಲೋಕೇಶ ಕನಶೆಟ್ಟಿ, ಕೀರ್ತಿ ಭಂಗೂರೆ, ಸೋಮನಾಥ ಹುಣಜೆ, ಶಿವರಾಜ ವೀರಣ್ಣೋರ, ನವೀನ್ ಸ್ವಾಮಿ, ಉದಯಕುಮಾರ ಗೋಪಾಲ್ ದೊಡ್ಡಿ, ಆದಿತ್ಯ, ರವಿ ಮಾಲ್ದಾರ್, ಶಿವಕುಮಾರ ರಾಜಗಿರೆ, ನರಸಿಂಗ್ ಶೆಟ್ಟೆ, ಶಿವಕುಮಾರ ಮೂಲಗೆ, ಆನಂದ ಭಾಲ್ಕೆ ಗಾದಗಿ, ಸಿದ್ದು ಗಾದಗಿ, ರಾಹುಲ್ ಸ್ವಾಮಿ, ಆದಿತ್ಯ ಹೂಗಾರ್, ಶೈಲೇಶ, ಸಂಗಮೇಶ ಬಿರಾದಾರ ಪಾಲ್ಗೊಂಡಿದ್ದರು.