ಬಾಗಲಕೋಟೆ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜವಾಬ್ದಾರಿ ಹೊತ್ತ ಎಂಜಿನಿಯರ್ ಗಳು ಮುಂದಿನ 45 ದಿನಗಳ ಕಾಲ ನಿರಂತರವಾಗಿ ಕ್ರಿಯಾ ಯೋಜನೆ ರೂಪಿಸಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಸೂಚಿಸಿದರು.
ಜಿಪಂ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಡಿಯುವ ನೀರು, ಕೃಷಿ ಹಾಗೂ ಇತರೆ ಇಲಾಖೆಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಮಾಹೆ ಹಾಗೂ ಮುಂದಿನ ತಿಂಗಳವರೆಗೆ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಹಂತದಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ಪಡೆದು ಅನುಷ್ಠಾನಗೊಳಿಸಬೇಕು. ಋತುಮಾನ ಪ್ರಾರಂಭವಾಗಲಿದ್ದು, ರೈತರಿಗೆ ಬಿತ್ತನೆಗೆ ಬೀಜ ಹಾಗೂ ಗೊಬ್ಬರಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಸಹ ನಡೆಸಬೇಕು ಎಂದು ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕಿ ಡಾ| ಚೇತನಾ ಪಾಟೀಲ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕುವಾರು ಬಿತ್ತನೆ ಕ್ಷೇತ್ರದ ಗುರಿ, ಬೀಜ ಮತ್ತು ರಸಗೊಬ್ಬರದ ದಾಸ್ತಾನು, ಮಾರಾಟ ಮತ್ತು ಸರಬರಾಜು ಮಾಡಿರುವ ಮಾಹಿತಿಯನ್ನು ಮತ್ತು ಜಿಲ್ಲೆಯಲ್ಲಿ ಬೀಜ, ಕೀಟನಾಶಕ ಹಾಗೂ ರಸಗೊಬ್ಬರ ಪರಿಕರ ಮಾರಾಟಗಾರರ ವಿವರ ಮತ್ತು ಮುಂಗಾರು ಹಂಗಾಮಿನ ತಾಲೂಕುವಾರು ಕ್ಷೇತ್ರವಾರು, ಬೆಳೆವಾರು ಬಿತ್ತನೆಯ ಗುರಿಯ ಬಗ್ಗೆ, ಬೇಕಾಗುವ ಬಿತ್ತನೆ ಬೀಜದ ಪ್ರಮಾಣ, ರಸಗೊಬ್ಬರದ ಲಭ್ಯತೆ ಬಗ್ಗೆ ವಿವರಿಸಿದರು.
ಕಳೆದ ಬೇಸಿಗೆ ಹಂಗಾಮಿನ ಬೆಳೆ ಸಮೀಕ್ಷೆ ಪ್ರಗತಿ ವರದಿಯನ್ವಯ ಕಡಿಮೆ ಪ್ರಗತಿ ಸಾಧಿಸಿದ ಹುನಗುಂದ, ಬಾಗಲಕೋಟೆ, ಬೀಳಗಿ ಮತ್ತು ಇಳಕಲ್ ತಾಲೂಕುಗಳಿಗೆ ಶೇ. 100ರಷ್ಟು ಪ್ರಗತಿ ಸಾಧಿಸಬೇಕು. ಕಡಿಮೆ ಪ್ರಗತಿಗೆ ಕಾರಣಗಳನ್ನು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಅವರು ಮುಳುಗಡೆಯಾದ ತಾಕುಗಳ ಸಂಖ್ಯೆಯನ್ನು ಕೈಬಿಡುವಂತೆ ಕೋರಲಾಗಿದ್ದು, ಉಳಿದ ತಾಕುಗಳನ್ನು ಈ ಕೂಡಲೇ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ ಶೇ. 100 ಪ್ರಗತಿ ಸಾಧಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯವರು ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಶಾಲಾಗಳು ರಜೆಯಲ್ಲಿದ್ದರೂ ಸಹ ವಿಶೇಷ ಆಂದೋಲನ ಹಮ್ಮಿಕೊಳ್ಳಲು ತಿಳಿಸಿದ ಅವರು, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ರೂಪಿಸಲಾದ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸುವ ಕೆಲಸವಾಗಬೇಕು. ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡಿ ಯೋಜನೆ ಮುಟ್ಟಿಸುವ ಕಾರ್ಯವಾಗಲಿ ಎಂದರು.
ಸರಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಸರಕಾರದಿಂದ ಆದೇಶ ಬರುವದನ್ನು ಕಾಯದೆ ಅಗತ್ಯವಾದ ಮಾಹಿತಿ ತಯಾರಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು. ಜಿ.ಪಂ. ಕೆಡಿಪಿ ಪಠ್ಯಕ್ರಮ, ಪಾರಮ್ಯಾಟ್ ಶೀಘ್ರವೇ ಬದಲಾವಣೆಗೆ ಜಿಪಂ ಸಿಇಒ ಟಿ.ಭೂಬಾಲನ್ ಅವರಿಗೆ ತಿಳಿಸಿದರು.
ಸಭೆಯ ಪೂರ್ವದಲ್ಲಿ ನಗರದಲ್ಲಿರುವ ವಿವಿಧ ರೈತ ಸಂಪರ್ಕ ಕೇಂದ್ರಗಳಿಗೆ ಕೃಷಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಭೇಟಿ ನೀಡಿ ಪರಿಶೀಲಿಸಿ ಸಲಹೆ ಸೂಚನೆ ನೀಡಿದರು. ಜಿಪಂ ಸಿಇಒ ಟಿ.ಭೂಬಾಲನ್, ಯುಕೆಪಿ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಉಪಸ್ಥಿತರಿದ್ದರು.