ಕೊಪ್ಪಳ: ಆರೋಗ್ಯಾಧಿಕಾರಿಗಳು ಜನನ ಮತ್ತು ಮರಣ ಪ್ರಮಾಣಪತ್ರ ನಿಯಮನುಸಾರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಆಡಳಿತ ಅಧಿಕಾರಿ ನಾಗರಾಜ ಜುಮ್ಮನ್ನವರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ನಾಗರಿಕ ನೋಂದಣಿ ಪದ್ಧತಿ ನಿಯಮಗಳು ಹಾಗೂ ಇ-ಜನ್ಮ ತಂತ್ರಾಂಶದ ನಿರ್ವಹಣೆಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಸೌಲಭ್ಯ ಮತ್ತು ಶೈಕ್ಷಣಿಕ ಸೌಲಭ್ಯ ಪಡೆಯಲು ಜನನ ಮತ್ತು ಮರಣ ಪ್ರಮಾಣಪತ್ರ ಅವಶ್ಯ. ಸಿಬ್ಬಂದಿಗಳುಈ-ತಂತ್ರಾಂಶ ಸರಿಯಾಗಿ ಅರಿತುಕೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಜನನ-ಮರಣ ಪ್ರಮಾಣಪತ್ರ ಡಿಜಿಟಲ್ ಸಹಿಯೊಂದಿಗೆ ನೀಡುವ ಪ್ರಕ್ರಿಯೆ ಜ.1, 2021ರಿಂದ ಆರಂಭವಾಗುತ್ತಿದ್ದು, ಆರೋಗ್ಯ ಅಧಿಕಾರಿಗಳು ಮತ್ತು ವಿಷಯ ನಿರ್ವಾಹಕರು, ಡಾಟಾ ಎಂಟ್ರಿ ಆಪರೇಟರ್ ಗಳು ಸೂಕ್ತ ಮತ್ತು ನಿಖರ ಮಾಹಿತಿ ಪಡೆದು ಸ್ಥಳ, ದಿನಾಂಕ, ಹೆಸರಿನ ಕುರಿತು ನಿಖರ ಮಾಹಿತಿ ತಂತ್ರಾಂಶದಲ್ಲಿ ನಮೂದಿಸಬೇಕು. ಇ-ಜನ್ಮ ತಂತ್ರಾಂಶವು ಡಾಟಾ ಎಂಟ್ರಿ ಆಪರೇಟರ್ ಪೋರ್ಟಲ್ ಮತ್ತು ನೋಂದಣಾಧಿ ಕಾರಿ, ಉಪನೋಂದಣಾಧಿಕಾರಿಗಳ ಪೋರ್ಟಲ್ ಎಂದು 2 ಪೋರ್ಟಲ್‌ಗಳನ್ನು ಹೊಂದಿದೆ. ಬಹುತೇಕ ಶೇ.70-80 ಜನನಗಳು ಆಸ್ಪತ್ರೆಯಲ್ಲಿಯೇ ಆಗುವುದರಿಂದ ಆನ್‌ಲೈನ್ ನೋಂದಣಿ ಸುಲಭವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಮಾಣಪತ್ರ ನೀಡುವ ವೇಳೆ ನಿಯಮನುಸಾರ ಮಾಹಿತಿ ಪಡೆದು ಪ್ರಮಾಣಪತ್ರ ನೀಡಬೇಕು. ಎಲ್ಲ ಗ್ರಾಪಂನಲ್ಲಿ ಅಂಗೀಕೃತಗೊಂಡ ಪ್ರಮಾಣಪತ್ರ ಪಿಡಿಒಗಳು ನೀಡುತ್ತಾರೆ ಎಂದರು.
ಮರಣ ಪ್ರಮಾಣಪತ್ರ ನೀಡುವಾಗ ಅಗತ್ಯ ಮತ್ತು ಕಡ್ಡಾಯ ದಾಖಲೆ ಪರಿಶೀಲಿಸಿ ಆನ್‌ಲೈನ್‌ನಲ್ಲಿ ನಮೂದಿಸಿ. ನಕಲಿ ಮರಣ ಪ್ರಮಾಣಪತ್ರಗಳಿಂದಅಥವಾ ಅಪೂರ್ಣ ಮಾಹಿತಿಯೊಂದಿಗೆ ನೀಡುವ ಪ್ರಮಾಣಪತ್ರಗಳಿಂದಸಂಬಂಧಿಸಿದ ಕುಟುಂಬದವರು ವಿವಿಧ ರೀತಿಯ ಕಾನೂನು ತೊಡಕು ಎದುರಿಸಬೇಕಾಗಬಹುದು. ಆದ್ದರಿಂದ ಮರಣ ಪ್ರಮಾಣಪತ್ರ ನೀಡುವಾಗ ಎಲ್ಲ ರೀತಿಯ ದಾಖಲೆ ಪರಿಶೀಲಿಸಿ ಎಂದರು.
ಕಾರ್ಯಾಗಾರದಲ್ಲಿ ಗಂಗಾವತಿ ತಾಲೂಕು ಆರೋಗ್ಯಾಧಿಕಾರಿ ಗೌರಿ ಶಂಕರ, ಕಾರಟಗಿ ಪುರಸಭೆ ಮುಖ್ಯಾಧಿಕಾರಿ ಶಿವಲಿಂಗಪ್ಪ, ಕನಕಗಿರಿ ಪಪಂ ಮುಖ್ಯಾಧಿಕಾರಿ ತಿರುಮಲಾ.ಎಂ, ಕಚೇರಿ ಅಧಿಧೀಕ್ಷಕ ಎನ್. ಮಂಜುನಾಥ ಸೇರಿದಂತೆ ಇತರರು ಇದ್ದರು.