ಯಲ್ಲಾಪುರ: ಎಲ್ಲ ಪಂಚಾಯತಗಳಲ್ಲಿಯೂ 14ನೇ ಹಣಕಾಸಿನ ಬಳಕೆ ಯಾವುದೇ ಕಾರಣಕ್ಕೂ ಬರುವ ಫೆಬ್ರುವರಿ ಕೊನೆಯೊಳಗೆ ಮುಗಿಯಬೇಕಾಗಿದೆ ಎಂದು ಜಿ.ಪಂ ಮುಖ್ಯ ಯೋಜನಾಧಿಕಾರಿ ವಿ.ಎಂ. ಹೆಗಡೆ ಹೇಳಿದರು.
ಅವರು ತಾ.ಪಂ ಸಭಾಭವನದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 14ನೇ ಹಣಕಾಸು ಎರಡು ಕಂತಿನಲ್ಲಿ ಹಣ ಜಮಾ ಆಗಿದ್ದು, ಈವರೆಗೆ 2016-17ರ ಕ್ರಿಯಾ ಯೋಜನೆಯನ್ನೇ ಪೂರ್ತಿಗೊಳಿಸದ ಬಗ್ಗೆ ಅಸಮಾಧಾನವಿದೆ. 2018-19 ರ
ಕ್ರಿಯಾಯೋಜನೆ ಕಾಮಗಾರಿಗಳನ್ನು ಕೂಡ ಆದಷ್ಟು ಬೇಗ ಮುಗಿಸಿ, ಪ್ರಗತಿಯ ವರದಿಯನ್ನು ಕೊಡಬೇಕು. ತಾವು ಕೊಟ್ಟ ವರದಿ ಪರಿಶೀಲಿಸಿದಾಗ ಮಾಹಿತಿ ಸರಿಯಾಗಿ ನೀಡದೇ ಇರುವುದು ವ್ಯತ್ಯಾಸ ತೋರಿಸುತ್ತದೆ. ಮುಂದಿನ ಪ್ರಗತಿ ಪರಿಶೀಲನೆಗೆ ಪ್ರತಿಯೊಬ್ಬ ಪಿಡಿಒ ಕೂಡ ತಮ್ಮ ಮಾಹಿತಿ ವರದಿಯನ್ನು ಸ್ಪಷ್ಟ ಮತ್ತು ನಿಖರವಾಗಿ ನೀಡಬೇಕು ಎಂದು ತಾಕೀತು ಮಾಡಿದರು.
15 ಗ್ರಾ.ಪಂಗಳಲ್ಲಿ ಒಟ್ಟು 231 ಕಾಮಗಾರಿಗಳು ಪೂರ್ತಿಗೊಂಡಿಲ್ಲ. 14ನೇ ಹಣಕಾಸಿನ 3.48 ಕೋಟಿ ರೂ ಅನುದಾನ ಖರ್ಚಾಗದೇ ಬಾಕಿ ಉಳಿದಿದೆ. ಇವುಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ತಿಳಿಸಿದರು. ಮೂರು ದಿನಗಳಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ, ಒಪ್ಪಿಗೆ ಪಡೆದು ಕಾಮಗಾರಿ ಪ್ರಾರಂಭಿಸಬೇಕು ಎಂದರು.
42 ಶಾಲೆಗಳಿಗೆ ಕಂಪೌಂಡ್, ಆಟದ ಮೈದಾನ, ಕಿಚನ್ ಗಾರ್ಡನ್ ಮಾಡಲು ನರೇಗಾದಲ್ಲಿ ಅವಕಾಶವಿದ್ದು, ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಆದಷ್ಟು ಬೇಗ ಕ್ರಿಯಾಯೋಜನೆ ಸಿದ್ಧಪಡಿಸಿ ಕೆಲಸ ಆರಂಭಿಸಿ ಎಂದರು. ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಜಿ.ಪಂ ಇಂಜನಿಯರಿಂಗ್ ವಿಭಾಗದ ಎಇಇ ಸುರೇಶ ನಾಯ್ಕ, ತಾ.ಪಂ ಇಒ ಜಗದೀಶ ಕಮ್ಮಾರ, ವ್ಯವಸ್ಥಾಪಕ ಎಸ್.ಆರ್.ಆಚಾರಿ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು