ರಾಯಚೂರು: ಯುವಕರೇ ದೇಶದ ಭವಿಷ್ಯವಾಗಿದ್ದು, ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಯುವನೀತಿ-2021ರ ಸಮರ್ಪಕ ಅನುಷ್ಠಾನಗೊಳಿಸುವ ಮೂಲಕ ಯುವಜನರ ವ್ಯಕ್ತಿತ್ವ ವಿಕಸನ, ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಡಿಸಿ ಕೆ.ಆರ್.ದುರುಗೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಯುವನೀತಿ-2021ರ ರಚಿಸುವ ನಿಟ್ಟಿನಲ್ಲಿ ಸ್ಟೇಕ್ ಹೋಲ್ಡರ್ಸ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ವಿವಿಧ ಕ್ರೀಡಾಪಟುಗಳ ಮಾಹಿತಿ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ತಾಲೂಕುವಾರು ಎನ್‌ಜಿಒಗಳ ಮೂಲಕ ಸಮೀಕ್ಷೆ ಮಾಡಿ ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ನೀಡಬೇಕು ಎಂದರು.
ಯುವಜನರ ವ್ಯಕ್ತಿತ್ವ ವಿಕಸನ, ಸ್ವಯಂ ಉದ್ಯೋಗ ತರಬೇತಿ, ಗ್ರಾಪಂ ಅನುದಾನದಲ್ಲಿ ಯುವ ಸಂಘಗಳಿಗೆ ಅನುದಾನ ಮೀಸಲು ಸೇರಿದಂತೆ ಇತರೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುವಜನರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಯುವ ಸಬಲೀಕರಣ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಇದರ ಮೂಲಕ ಯುವ ಜನರಿಗೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಯುವ ಸಂಘಗಳಿದ್ದು, ಅವುಗಳ ಮೂಲಕ ಆರೋಗ್ಯ, ನೈರ್ಮಲ್ಯ, ವ್ಯವಸಾಯ, ನೀರಾವರಿ, ಅರಣ್ಯ, ಶೈಕ್ಷಣಿಕ, ಮಹಿಳಾ ಸಬಲೀಕರಣ ಇಲಾಖೆ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಕ್ರಮ ವಹಿಸಲಾಗುವುದು. ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ಹಾಗೂ ಉದ್ಯೋಗ ಮೇಳ ಆಯೋಜಿಸಲು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ, ಕರ್ನಾಟಕ ಯುವನೀತಿಯನ್ವಯ ರಚನೆಯ ರೂಪುರೇಷೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಾಜೇಶ್, ಎನ್ನೆಸ್ಸೆಸ್ ಜಿಲ್ಲಾ ಅಧಿಕಾರಿ ಶ್ರೀನಿವಾಸ ಸೇರಿದಂತೆ ಅಧಿಕಾರಿಗಳು ಇದ್ದರು.