ಬೀದರ: ಕೋವಿಡ್-19 ಹಿನ್ನೆಲೆಯಲ್ಲಿ ಏನೇ ಸವಾಲುಗಳಿದ್ದರೂ ಸರ್ಕಾರದ ಮಾರ್ಗಸೂಚಿಯನುಸಾರ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್‌ಲೈನ್ ಶಿಕ್ಷಣ ಆರಂಭಕ್ಕೆ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಇತ್ತೀಚೆಗೆ ಕೃಷಿ, ಶಿಕ್ಷಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಬೆಳೆ ಸಮೀಕ್ಷೆ, ಬೆಳೆ ವಿಮೆ ಮತ್ತು ಆನ್‌ಲೈನ್ ಶಿಕ್ಷಣ ಸೇರಿದಂತೆ ನಾನಾ ವಿಷಯಗಳ ಕುರಿತು ಮಾಹಿತಿ ಪಡೆದರು. ಆನ್‌ಲೈನ್ ಶಿಕ್ಷಣ ಪದ್ಧತಿಗೆ ಹೇಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಈಗಾಗಲೇ ಮೇಲಿಂದ ಮೇಲೆ ವಿಡಿಯೋ ಸಂವಾದ ನಡೆಸಿ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಇಂಟರ್‌ನೆಟ್ ಸಮಸ್ಯೆ ಎದುರಾದರೆ ಏನು ಮಾಡಬಹುದು ಎಂಬುದರ ಬಗ್ಗೆ ಯೋಜಿಸಲಾಗುತ್ತಿದೆ. ಈಗಾಗಲೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ಸಿಆರ್‌ಪಿ ಮತ್ತು ಬಿಆರ್‌ಪಿಗಳು ಉತ್ತಮ ರೀತಿಯಲ್ಲಿ ಉಸ್ತುವಾರಿ ನಡೆಸುತ್ತಿದ್ದಾರೆ ಎಂದು ಮಹಮ್ಮದ್ ಗುಲ್‌ಸಿನ್ ಅವರು ಸಭೆಗೆ ಮಾಹಿತಿ ನೀಡಿದರು.
ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ವಠಾರ ಶಾಲೆಯಿಂದ ಪಾಠ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ 1280 ಶಾಲೆಗಳ ಪೈಕಿ 3288 ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ 7262 ಶಿಕ್ಷಕರು ಪಾಠ ಮಾಡುತ್ತಿದ್ದಾರೆ. 92,847 ಮಕ್ಕಳು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರರು. ನೆರೆ ಎದುರಾದ ಈ ವೇಳೆಯಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ಕೆಲವು ಇಲಾಖೆಗಳ ಪಾತ್ರ ಅತ್ಯಂತ ಅಮೂಲ್ಯವಾಗಿದ್ದು, ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಡಾ| ಡಿಸೋಜಾ ತಿಳಿಸಿದರು. ಕೃಷಿ ಜಂಟಿ ನಿರ್ದೇಶಕ ತಾರಾಮನಿ ಜಿ.ಎಚ್. ಮಾತನಾಡಿ, ಜಿಲ್ಲೆಯಲ್ಲಿ 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಬೀದರ ಜಿಲ್ಲೆಯಲ್ಲಿ ಎಲ್ಲಾ ಬೆಳೆಗಳು ಚೆನ್ನಾಗಿವೆ. ಈ ವರ್ಷ ಫಸಲ್ ಬಿಮಾ ಯೋಜನೆಯಡಿ ಅಂದಾಜು 2.13 ಲಕ್ಷ ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇದು ರಾಜ್ಯದಲ್ಲಿ ಗರಿಷ್ಠ ಸಾಧನೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಸವಕಲ್ಯಾಣ ತಾಲೂಕಿನಲ್ಲಿ ಮಳೆ ಹೆಚ್ಚಾಗಿ ಮುಡಬಿ, ಮಂಠಾಳ ಮತ್ತು ಕೊಹಿನೂರ ಹೋಬಳಿಗಳಲ್ಲಿ ಒಟ್ಟು 22 ಹಳ್ಳಿಗಳಲ್ಲಿ ಬೆಳೆ ಹಾನಿಯಾಗಿದೆ. ಮುಡಬಿ ಹೋಬಳಿಯಲ್ಲಿ ಅಂದಾಜು 2350 ಹೆಕ್ಟೇರ್, ಮಂಠಾಳ ಹೋಬಳಿಯಲ್ಲಿ ಅಂದಾಜು 1163 ಹೆಕ್ಟೇರ್ ಜೊತೆಗೆ ಕೋಹಿನೂರ ಹೋಬಳಿ ಸೇರಿದಂತೆ ಜೊತೆಗೆ ಔರಾದ ತಾಲೂಕಿನ ದಾಬಕಾ ಮತ್ತು ಸಂತಪುರ ಹೋಬಳಿ ವ್ಯಾಪ್ತಿಯಲ್ಲಿ ಕೂಡ ಅಂದಾಜು 30 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಆಯಾ ತಾಲೂಕುಗಳ ಅಧಿಕಾರಿಗಳು ತಿಳಿಸಿದ್ದು, ಈ ಕುರಿತು ಜಂಟಿ ಸರ್ವೇ ನಡೆಯುತ್ತಿದೆ ಎಂದು ತಿಳಿಸಿದರು. ಡಿಸಿ ರಾಮಚಂದ್ರನ್ ಆರ್., ಸಿಇಒ
ಗ್ಯಾನೇಂದ್ರಕುಮಾರ ಗಂಗವಾರ, ಸಹಾಯಕ ಆಯುಕ್ತ ಅಕ್ಷಯ ಶ್ರೀಧರ, ಭಂವರಸಿಂಗ್ ಮೀನಾ, ತಹಶೀಲ್ದಾರ್ ಗಂಗಾದೇವಿ, ಕೃಷಿ ಉಪ ನಿರ್ದೇಶಕ ಸೋಮಶೇಖರ ಬಿರಾದಾರ, ತೋಟಗಾರಿಕಾ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವುಗೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಇದ್ದರು.