Advertisement
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಹಾಗೂ ಎಲ್ಲ ತಹಶೀಲ್ದಾರ್ ಗಳೊಂದಿಗೆ ವಿಡಿಯೋ ಕಾನರೆನ್ಸ್ ಮೂಲಕ ಮಳೆಯಿಂದ ಆಗುತ್ತಿರುವ ಹಾನಿ ಹಾಗೂ ಮುಂಜಾಗ್ರತೆ ಕುರಿತು ತುರ್ತು ಸಭೆ ಕೈಗೊಂಡು ಅವರು ನಿರ್ದೇಶನ ನೀಡಿದರು.
Related Articles
Advertisement
ವಿದ್ಯಾರ್ಥಿ ವಸತಿ ನಿಲಯ, ಶಾಲೆ ಕಾಲೇಜು, ಆಸ್ಪತ್ರೆಗಳಲ್ಲಿ ಸೋರಿಕೆ, ಮಳೆ ನೀರು ಕಟ್ಟಡದಲ್ಲಿ ಬರುವುದು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ, ಆರೋಗ್ಯ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದ ಡಿಸಿ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿಡಿಯೋ ಕಾನರೆನ್ಸ್‌ನಲ್ಲಿ ನವಲಗುಂದ ತಹಶೀಲ್ದಾರ್ ನವೀನ್ ಹುಲ್ಲೂರ ಮಾತನಾಡಿ, ತಾಲೂಕಿನಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ತುಂಬಿ ಹರಿಯುತ್ತಿವೆ. ಈಗಾಗಲೇ ನಾಲಾ ಉದ್ದಕ್ಕೂ ಸ್ವಚ್ಛತೆ ಮಾಡಿರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ. ತಾಲೂಕಿನ ಬಹುತೇಕ ಕೆರೆಗಳು ಶೇ.70 ಭರ್ತಿಯಾಗಿವೆ. ಆರೆಕುರಹಟ್ಟಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಹಲವು ಮನೆಗಳು ಜಲಾವೃತವಾಗಿದ್ದು, ತಕ್ಷಣದಿಂದ ಅಲ್ಲಿಯ ನಿರಾಶ್ರಿತರಿಗೆ ಪುನರ್ವಸತಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕುಂದಗೋಳ ತಹಶೀಲ್ದಾರ್ ಬಸವರಾಜ ಮೆಳವಂಕಿ ಮಾತನಾಡಿ, ತಾಲೂಕಿನಲ್ಲಿ 89 ಮನೆಗಳಿಗೆ ಹಾನಿಯಾಗಿದ್ದು, ಬಹುತೇಕ ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಯರೇಬೂದಿಹಾಳ ಗ್ರಾಮದಲ್ಲಿ ಆಕಳು ಮತ್ತು ಕರು ಜೀವಹಾನಿಯಾಗಿದೆ. ಅಲ್ಲಾಪೂರ ಗ್ರಾಮದ ಕೆರೆ ಸಂಪೂರ್ಣ ತುಂಬಿದ್ದು, ಹೆಚ್ಚಿನ ನೀರು ಹಳ್ಳಕ್ಕೆ ಹೋಗಲು ಜೆಸಿಬಿ ಮೂಲಕ ದಾರಿ ಮಾಡಲಾಗಿದೆ. ಹುಬ್ಬಳ್ಳಿ, ಕಲಘಟಗಿ ಮತ್ತು ಕುಂದಗೋಳ ಜಮೀನುಗಳ ಹೆಚ್ಚುವರಿ ಮಳೆನೀರು ಯಲಿವಾಳ, ಇನಾಂಕೊಪ್ಪ ಹಾಗೂ ಬೂ. ಅರಳಿಕಟ್ಟಿ ಹತ್ತಿರದ ಸುಮಾರು 300 ಎಕರೆ ಕೃಷಿ ಭೂಮಿಯಲ್ಲಿ ಬಂದು ನಿಂತಿದೆ. ಈ ಕುರಿತು ರೈತರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಶೀಘ್ರ ಸಮಸ್ಯೆ ಪರಿಹರಿಸಿ ನೀರು ಹೊರ ಹೋಗುವಂತೆ ಮಾಡಲಾಗುವುದು ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ ಮಾತನಾಡಿ, ಅಳ್ನಾವರದ ಡೌಗಿ ನಾಲಾ ಮತ್ತು ಹುಲಿಕೇರಿ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರ ಹೋಗಲು ಕ್ರಮ ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿ, ಕಲಘಟಗಿ ತಹಶೀಲ್ದಾರರು ಮಾತನಾಡಿದರು. ಎಸ್ಪಿ ಸಂಗೀತಾ ಜಿ. ಮಾತನಾಡಿ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳ ಪರಿಹಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತೊಂದರೆಗೀಡಾದ ಜನ-ಜಾನುವಾರು ಕುಟುಂಬಗಳ ಬಗ್ಗೆ ತಕ್ಷಣ ಮಾಹಿತಿ ನೀಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್, ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ್ ಇಟ್ನಾಳ, ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಆಹಾರ ಇಲಾಖೆಯ ಜಂಟಿನಿರ್ದೇಶಕ ಡಾ|ಸದಾಶಿವ ಮರ್ಜಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜನರ ನೆರವಿಗೆ ಸಹಾಯವಾಣಿ:
ಹೆಚ್ಚು ಮಳೆಯಿಂದ ತೊಂದರಿಗೀಡಾದವರು ಮತ್ತು ಮಳೆಹಾನಿಗಳ ಕುರಿತು ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲಾಡಳಿತವು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಎಲ್ಲ ತಾಲೂಕಿನ ತಹಶೀಲ್ದಾರ್ ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಿದೆ. ಜಿಲ್ಲಾಧಿಕಾರಿಗಳ ಕಚೇರಿ ವಾಟ್ಸ್‌ಆ್ಯಪ್ ಸಂಖ್ಯೆ 9480230962, ಸಹಾಯವಾಣಿ ಸಂಖ್ಯೆ: 1077. ನವಲಗುಂದ ತಹಶೀಲ್ದಾರ್ ಕಾರ್ಯಾಲಯ-08380-229240, ಕಲಘಟಗಿ ತಹಶೀಲ್ದಾರ್ ಕಾರ್ಯಾಲಯ- 08370-284535, ಕುಂದಗೋಳ ತಹಶೀಲ್ದಾರ್ ಕಾರ್ಯಾಲಯ-08304-280239, ಅಣ್ಣಿಗೇರಿ ತಹಶೀಲ್ದಾರ್ ಕಾರ್ಯಾಲಯ-08380-229240, ಅಳ್ನಾವರ ತಹಶೀಲ್ದಾರ್ ಕಾರ್ಯಾಲಯ-0836-2385544, ಧಾರವಾಡ ತಹಶೀಲ್ದಾರ್ ಕಾರ್ಯಾಲಯ -0836-2233822, ಹುಬ್ಬಳ್ಳಿ ತಹಶೀಲ್ದಾರ್ ಕಾರ್ಯಾಲಯ-0836-2358035.
ವಾಹನ ಸಂಚಾರಕ್ಕೆ ತಡೆ:
ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿಯ ಕಾಕತಿ ಹತ್ತಿರ ಭೂಕುಸಿತವಾಗಿರುವುದರಿಂದ ಸೋಮವಾರದಿಂದ ವಾಹನ ಸಂಚಾರ ತಡೆಯಲಾಗಿದೆ. ಧಾರವಾಡದ ಬೇಲೂರು ಪ್ರದೇಶ, ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಸೇರಿದಂತೆ ಸಾವಿರಾರು ವಾಹನಗಳನ್ನು ತಡೆ ಹಿಡಿಯಲಾಗಿದೆ. ಆದರೂ ಹಾವೇರಿ ಕಡೆಯಿಂದ ಹೆಚ್ಚು, ಹೆಚ್ಚು ವಾಹನಗಳು ಬರುತ್ತಿದ್ದು, ಅವುಗಳನ್ನು ಬಂಕಾಪುರ ಕ್ರಾಸ್‌ದಿಂದ ಮಾರ್ಗ ಬದಲಾಯಿಸಲು ಹಾವೇರಿ ಜಿಲ್ಲಾಧಿಕಾರಿಗಳಿಗೆ ತಿಳಿಸುವಂತೆ ಎಸ್‌ಪಿ ಸಂಗೀತಾ ಅವರು ಜಿಲ್ಲಾಧಿಕಾರಿಗಳಿಗೆ ವಿನಂತಿಸಿದರು.
ಕೆರೆ ಒಡೆಯದಂತೆ ಮುಂಜಾಗ್ರತೆ ವಹಿಸಿ:
ಸತತ ಮಳೆಯಿಂದಾಗಿ ಜಿಲ್ಲೆಯ ಕೆರೆ, ಕಟ್ಟೆ ತುಂಬುತ್ತಿವೆ. ನಾಲಾಗಳು ತುಂಬಿ ಹರಿಯುತ್ತಿವೆ. ಸಣ್ಣ ನೀರಾವರಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕೆರೆಗಳು ಬಹುತೇಕ ಭರ್ತಿ ಆಗಿದ್ದು, ನೀರು ಹೊರಚೆಲ್ಲುತ್ತಿವೆ. ಯಾವುದೇ ಕಾರಣಕ್ಕೂ ಕೆರೆ ಒಡ್ಡು ಒಡೆಯದಂತೆ ಮುಂಜಾಗ್ರತೆ ವಹಿಸಿ, ಹೆಚ್ಚುವರಿ ನೀರನ್ನು ಕೆರೆಕೋಡಿ ಮೂಲಕ ಹರಿದು ಹೋಗುವಂತೆ ಮಾಡುವಂತೆ ಡಿಸಿ ದೀಪಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ತಡವಾಗಿದ್ದರಿಂದ ರೈತರು ಬಿತ್ತನೆ ತಡವಾಗಿ ಮಾಡಿದ್ದಾರೆ. ಅತಿಯಾದ ಮಳೆಯಿಂದಾಗಿ ಬೆಳೆ ನಾಶವಾಗಬಹುದು. ಈ ಕುರಿತು ಗ್ರಾಮ ಮಟ್ಟದಿಂದ ಅಧಿಕಾರಿಗಳು ಸಮೀಕ್ಷೆ ಮಾಡಿ ವರದಿ ನೀಡಬೇಕು. •ದೀಪಾ ಚೋಳನ್, ಜಿಲ್ಲಾಧಿಕಾರಿ, ಧಾರವಾಡ