Advertisement

ವಿವಿಗಳಲ್ಲಿ ಜಾತಿ, ರಾಜಕೀಯ ಹಸ್ತಕ್ಷೇಪ ಸಲ್ಲ: ಪ್ರೊ.ರಂಗಪ್ಪ

12:01 PM Jan 10, 2017 | |

ಮೈಸೂರು: ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚುತ್ತಿರುವ ಜಾತಿ ಹಾಗೂ ರಾಜಕೀಯ ಹಸ್ತಕ್ಷೇಪದಿಂದ ವಿವಿಗಳ ಘನತೆ ಕ್ಷೀಣಿಸುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ವಿಷಾದಿಸಿದರು. ಕುಲಪತಿ ಅವಧಿಪೂರ್ಣಗೊಳಿಸಿ ಮಂಗಳ ವಾರ ವಿವಿಯಿಂದ ಹೊರ ಹೋಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ಹಸ್ತಕ್ಷೇಪಗಳಿಂದಾಗಿ ತಪ್ಪು ಮಾಡಿದವರನ್ನು ಶಿಕ್ಷಿಸಲು ಆಗದಂತಹ ಪರಿಸ್ಥಿತಿ ಇದೆ.

Advertisement

ಹೀಗಾಗಿ ಇವುಗಳನ್ನು ನಿಯಂತ್ರಿಸಿದಾಗ ಮಾತ್ರ ವಿವಿಯಲ್ಲಿ ಮೆರಿಟ್‌ ಹಾಗೂ ಪಾವಿತ್ರತೆ ಕಾಪಾಡಬಹುದು. ಇದರ ನಡುವೆಯೂ ತಮ್ಮ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ವಿವಿ ಘನತೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದು, ಇರುವ ನಿಯಮಗಳನ್ನು ಪಾಲಿಸುವ ಜತೆಗೆ ತನ್ನ ಪ್ರಭಾವವನ್ನು ಬಳಸಿಕೊಂಡು ವಿವಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.

ಮಜಾ ಮಾಡಬಹುದಿತ್ತು: ಈ ಹಿಂದೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿದ್ದ ಅವಧಿಯಲ್ಲಿ 650 ಕೋಟಿ ರೂ. ವೆಚ್ಚದಲ್ಲಿ ಮುಕ್ತ ವಿವಿಯನ್ನು ಅಭಿವೃದ್ಧಿ ಮಾಡಿದ್ದೇನೆ. ಆದರೆ ತನ್ನ ನಂತರ ಬಂದ ಕುಲಪತಿಗಳು ಇಂತಹ ಯಾವುದೇ ಅಭಿವೃದ್ಧಿಯನ್ನು ಮಾಡುವ ಬಗ್ಗೆ ಆಸಕ್ತಿ ತೋರಲಿಲ್ಲ. ಇದರ ಪರಿಣಾಮ ಇಂದು ಮುಕ್ತ ವಿವಿ ಮುಚ್ಚುವ ಸ್ಥಿತಿಗೆ ತಲುಪಿದೆ. ತಾನು ಅವರಂತೆ ಮಜಾ ಮಾಡಿಕೊಂಡು ಹೋಗಬಹುದಾಗಿತ್ತು, ಆದರೆ, ವಿವಿಯ ಅಭಿವೃದ್ಧಿಗಾಗಿ ತಾನು ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದೇ ತಪ್ಪಾ?.

ವಿವಿಗಳ ನಿಯಮ ಮತ್ತು ಕಾಯ್ದೆಗಳ ಬಗ್ಗೆ ಗೊತ್ತಿಲ್ಲದವರೆಲ್ಲಾ ಮಾತನಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ರಾಜಕೀಯ, ಜಾತೀಯತೆಯ ಹಸ್ತಕ್ಷೇಪ ಇದ್ದಲ್ಲಿ ಯಾವುದೇ ವಿವಿ ಪ್ರಗತಿ ಸಾಧ್ಯವಿಲ್ಲ. ವಿವಿ ನಿಯಮವನ್ನು ಉಲ್ಲಂ ಸಿ ಕೆಲಸ ಮಾಡುವ ಕುಲಪತಿ, ರಿಜಿಸ್ಟ್ರಾರ್‌ ಇದ್ದಲ್ಲಿ ಅವರನ್ನು ಕೆಳಗಿಳಿಸಿ, ಇದರ ಹೊರತಾಗಿ ಕೆಲಸ ಮಾಡುವ ದೂರದೃಷ್ಟಿ ಇರುವವರನ್ನೂ ಇದೇ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ ಎಂದರು.

ಬೋಧಕರ ಕೊರತೆ: ವಿವಿಯಲ್ಲಿ ಬೋಧಕರ ಕೊರತೆ ಎದುರಾಗುತ್ತಿದ್ದು, ನುರಿತ ಅಧ್ಯಾಪಕರ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿದ್ವತ್‌ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ವಿವಿಯ 24 ವಿಭಾಗಗಳಿಗೆ 500 ಮಂದಿ ಬೋಧಕ ಸಿಬ್ಬಂದಿ ಇದ್ದ ಜಾಗದಲ್ಲಿ ಇಂದು 74 ವಿಭಾಗಗಳಿಂದ ಕೇವಲ 128 ಮಂದಿ ಬೋಧಕರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಸ್ವಯಂ ನಿವೃತ್ತಿ ಘೋಷಣೆ
ಮೈಸೂರು ವಿವಿ ಕುಲಪತಿಯಾಗಿ ಜ.10ರಂದು ತಮ್ಮ ಸೇವಾ ಅವಧಿ ಪೂರ್ಣಗೊಂಡಿದೆ. ಆದ್ದರಿಂದ ಸ್ವಯಂ ನಿವೃತ್ತಿ ಪಡೆದಿದ್ದೇನೆ. ಚೀನಾ ಮೂಲದ ಸಿನೋಟಾರ್‌ ಔಷಧ ತಯಾರಿಕಾ ಕಂಪನಿ ಜನವರಿ 15ರಿಂದ ಮೂರು ವರ್ಷಗಳ ಅವಧಿಗೆ ತಮ್ಮನ್ನು ಮುಖ್ಯ ವೈಜಾnನಿಕ ಸಲಹೆಗಾರನನ್ನಾಗಿ ನೇಮಕ ಮಾಡಿಕೊಂಡಿದೆ. ಇದಲ್ಲದೆ ಇಸ್ರೇಲ್‌ ವಿವಿಯೊಂದರಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುವ ಜತೆಗೆ ತಮ್ಮ ಸಂಶೋಧನೆಯನ್ನು ಮುಂದುವರಿಸುವುದಾಗಿ ಪ್ರೊ.ಕೆ.ಎಸ್‌.ರಂಗಪ್ಪ ತಿಳಿಸಿದರು.

ರಾಜಕೀಯ ಪ್ರವೇಶವಿಲ್ಲ: ರಾಜಕೀಯಕ್ಕೆ ಬರುವ ಬಗ್ಗೆ ಈವರೆಗೂ ಯೋಚನೆ ಮಾಡಿಲ್ಲ, ಯಾರು ತನಗೆ ಆಹ್ವಾನವನ್ನೂ ಕೊಟ್ಟಿಲ್ಲ. ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಂಬಂಧಿಯಾದ ಕಾರಣ ಜೆಡಿಎಸ್‌ನಿಂದ ಟಿಕೆಟ್‌ ನೀಡುತ್ತಾರೆ ಎಂಬ ಬಗ್ಗೆ ಊಹಾಪೋಹಗಳು ಹಬ್ಬಿದ್ದು, ಇದರಿಂದ ಸಾಕಷ್ಟು ತೊಂದರೆ ಪಡುತ್ತಿದ್ದೇನೆ. ಒಂದೊಮ್ಮೆ ರಾಜಕೀಯ ಪ್ರವೇಶಕ್ಕೆ ಆಹ್ವಾನ ಬಂದಿದ್ದೇ ಆದಲ್ಲಿ, ನನ್ನದೇ ಆದ ಕೆಲವೊಂದು ಷರತ್ತುಗಳಿವೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನಾನು ಮಾಡಿದ ಕೆಲಸ ಮನಸ್ಸಿಗೆ ತೃಪ್ತಿ ನೀಡಿದೆ. ನಾಲ್ಕು ವರ್ಷದ ಅವಧಿಯಲ್ಲಿ ಯಾರಿಗೂ ಹೆದರಿಲ್ಲ, ಕೆಟ್ಟದ್ದನ್ನು ಮಾಡಿಲ್ಲ. ಸಂತಸದಿಂದ ಕೆಲಸ ಮಾಡಿ, ವಿಶ್ವವಿದ್ಯಾನಿಲಯದ ಘನತೆಯನ್ನು ಹೆಚ್ಚಿಸಿದ್ದೇನೆ.
-ಪ್ರೊ.ಕೆ.ಎಸ್‌.ರಂಗಪ್ಪ, ಕುಲಪತಿ, ಮೈಸೂರು ವಿವಿ

Advertisement

Udayavani is now on Telegram. Click here to join our channel and stay updated with the latest news.

Next