Advertisement

ಗ್ರೀಷ್ಮದಲ್ಲಿ ಹೇಮಂತ: ಋತುಗಳೇ ಅದಲು ಬದಲು!

02:47 AM Jun 21, 2021 | Team Udayavani |

ಪ್ರಕೃತಿಯ ಮಡಿಲಲ್ಲಿ ಅದೆಷ್ಟು ಅದ್ಭುತಗಳ್ಳೋ…

Advertisement

ಈಗ ಬಂದಿರುವ ದಕ್ಷಿಣಾಯನ ಪುಣ್ಯ ಕಾಲ, ಜೂನ್‌ 21, ಹೀಗೆಯೇ ಯಾವಾಗಲೂ ನಡೆಯುತ್ತಿದೆ ಅಂತೇನೂ ಇಲ್ಲ. ಕಾಲ ಕಳೆದಂತೆ, ಉತ್ತರಾಯಣ, ದಕ್ಷಿಣಾಯನವಾಗುತ್ತದೆ.ಋತುಗಳೇ ಅದಲುಬದಲಾಗಲಿದೆ. ಸುಮಾರು 13 ಸಾವಿರ ವರ್ಷಗಳ ಅನಂತರ.

ಇಂದು ಜೂನ್‌ 21. ದಕ್ಷಿಣಾಯನ ಪುಣ್ಯ ಕಾಲ. ಆರು ತಿಂಗಳ ಉತ್ತರಾಯಣ ಮುಗಿಸಿ ಸೂರ್ಯನ ದಕ್ಷಿಣ ಮುಖ ಚಲನೆ ಪ್ರಾರಂಭ. ಇದು ಡಿಸೆಂಬರ್‌ 21ರ ವರೆಗೆ. ಅಲ್ಲಿಂದ ಪುನಃ ಉತ್ತರಾಯಣ. ವರ್ಷದಲ್ಲಿ ಆರು ತಿಂಗಳು ಸೂರ್ಯ ಉತ್ತರಾಯಣ, ಆರು ತಿಂಗಳು ದಕ್ಷಿಣಾಯನ.

ಭೂಮಿಯ ಉತ್ತರಾರ್ಧ ಗೋಲದವರಿಗೆ ಈಗ ಬೇಸಗೆ ಕಾಲ, ಹಗಲು ಹೆಚ್ಚು. ಅದೇ ಈಗ ದಕ್ಷಿಣಾರ್ಧ ಗೋಲದವರಿಗೆ ಚಳಿಗಾಲ, ಹಗಲು ಕಡಿಮೆ. ಈ ಹಗಲು, ಭೂಮಧ್ಯ ರೇಖೆಯಿಂದ ಉತ್ತರಕ್ಕೆ ಹೋದಂತೆ ಹೆಚ್ಚುತ್ತಾ ಹೋಗಿ ಉತ್ತರ ಧ್ರುವ ಪ್ರದೇಶದಲ್ಲಿ 24 ಗಂಟೆ ಹಗಲು. ಆಗ ದಕ್ಷಿಣ ಧ್ರುವ ಪ್ರದೇಶದಲ್ಲಿ 24 ಗಂಟೆಯೂ ರಾತ್ರಿ. ಆದರೆ ಡಿಸೆಂಬರ್‌ 21 ರ ಸಮಯ ದಕ್ಷಿಣಾರ್ಧ ಗೋಲದವರಿಗೆ ಬೇಸಗೆ. ಹಗಲು ಹೆಚ್ಚು. ಉತ್ತರಾರ್ಧ ಗೋಲದವರಿಗೆ ಚಳಿಗಾಲ, ಹಗಲು ಕಡಿಮೆ, ರಾತ್ರಿ ಹೆಚ್ಚು.

ವರ್ಷದಲ್ಲಿ, ಎರಡು ದಿನಗಳಲ್ಲಿ ಅಂದರೆ ಮಾರ್ಚ್‌ 21 ಹಾಗೂ ಸೆಪ್ಟಂಬರ್‌ 21ರಂದು ಸೂರ್ಯ, ಭೂಮಧ್ಯ ರೇಖೆಗೆ ನೇರ ಬರುವುದರಿಂದ, ಇಡೀ ಭೂಮಿಯಲ್ಲಿ ಹಗಲು -ರಾತ್ರಿ ಸಮಾನ. 12 ಗಂಟೆ ಹಗಲು, 12 ಗಂಟೆ ರಾತ್ರಿ. ಈ ಎಲ್ಲ ಬದಲಾವಣೆಗಳಿಗೆ ಕಾರಣ, ಭೂಮಿ ಸೂರ್ಯನನ್ನು ಸುತ್ತುವ ಸಮತಲಕ್ಕೆ ನೇರವಾಗಿರದೇ, 23.5 ಡಿಗ್ರಿ ಓರೆಯಾಗಿರುವುದು.

Advertisement

ಇದೊಂದು ಭೂಮಿಯ ಸಕಲ ಚರಾಚರಗಳ ಭಾಗ್ಯ. ನಮಗಂತೂ ವರ್ಷದಲ್ಲಿ ಆರು ಋತುಗಳು, ವಸಂತ, ಗ್ರೀಷ್ಮ, ವರ್ಷ, ಶರತ್‌, ಹೇಮಂತ ಹಾಗೂ ಶಿಶಿರ. ಎರಡೆರಡು ತಿಂಗಳ ಆರು ಋತುಗಳು ಒಂದು ವರ್ಷದಲ್ಲಿ. ವಸಂತದಲ್ಲಿ ಹೊಸ ಚಿಗುರು, ಗ್ರೀಷ್ಮದಲ್ಲಿ ಸೆಖೆಯೋ ಸೆಖೆ. ವರ್ಷದಲ್ಲಿ ಜಡಿ ಮಳೆ. ಶರತ್‌ ಋತುವಿನಲ್ಲಿ ತಿಳಿನೀರಿನ ನದಿ, ಸ್ವತ್ಛ ಶುಭ್ರ ಆಕಾಶ. ಹೇಮಂತದಲ್ಲಿ ಮಳೆಗಾಲ ಕಳೆದು ಚಳಿ ಪ್ರಾರಂಭ. ಚಳಿ ಜೋರಾಗಿ ಹಾಗೆ ಕಡಿಮೆಯಾಗುವುದು ಶಿಶಿರದಲ್ಲಿ.

ಇವೆಲ್ಲ ಭೂಮಿಯ ಕೃಪೆ ನಮಗೆ. ಒಂದು ವೇಳೆ ಭೂಮಿಯ ತಿರುಗುವ ಅಕ್ಷ, ಸೂರ್ಯನ ಸುತ್ತ ತಿರುಗುವ ಸಮತಲಕ್ಕೆ ನೇರ ಲಂಬವಾಗಿದ್ದಿದ್ದರೆ ಅಂದರೆ 23.5 ಡಿಗ್ರಿ ವಾಲದೇ ಇದ್ದಿದ್ದರೆ ಈ ಎಲ್ಲ ಋತುಗಳೂ ಇರುತ್ತಿರಲಿಲ್ಲ. ನಮ್ಮ ಭೂಮಿ ನಮ್ಮ ಖುಷಿಗಾಗಿಯೇ ಬೇಕೆಂಬಷ್ಟೇ ವಾಲಿದೆಯೋ ಎನ್ನುವಂತಿದೆ.

ಭೂಮಿಗೆ ಮೂರು ವಿಧದ ಚಲನೆಗಳಿವೆ. ಒಂದು, ಭೂಮಿ ದಿನಕ್ಕೊಮ್ಮೆ 24 ಗಂಟೆಯಲ್ಲಿ ತನ್ನ ಅಕ್ಷದಲ್ಲಿ ತಿರುಗುವುದು. ಎರಡನೇಯದು, ಸೂರ್ಯನ ಸುತ್ತ 365 ದಿನಗಳಿಗೊಮ್ಮೆ ಸುತ್ತು ಬರುವುದು. ಇವೆರಡೂ ನಮಗೆ ನೇರ ಅನುಭವಕ್ಕೆ ಬರುವುದಿಲ್ಲ. ಹಗಲು ರಾತ್ರಿಗಳಿಂದ, ದಿನದ ಚಲನೆಯ ಅನುಭವ, ಹಾಗೆ ಋತುಗಳ ಬದಲಾವಣೆಯಿಂದ ವರ್ಷದ ಚಲನೆಯ ಅನುಭವ. ಭೂಮಿ ಸೂರ್ಯನ ಸುತ್ತ ಸುತ್ತುವ ವೇಗ ಸಾಮಾನ್ಯವೇನಲ್ಲ, 30 ಕಿ.ಮೀ., ಒಂದು ಸೆಕೆಂಡಿಗೆ. ಅಂದರೆ ಗಂಟೆಗೆ 1,08,000 ಕಿ. ಮೀ. ಇಷ್ಟು ವೇಗದಲ್ಲಿ ಯಾವ ವಾಹನವೂ ಚಲಿಸುವುದಿಲ್ಲ. ಆದರೆ ಈ ಚಲನೆ, ಭೂಮಿಯಲ್ಲಿರುವ ನಮಗೆ ಅನುಭ ವಕ್ಕೆ ಬರುವುದಿಲ್ಲವೇಕೆಂದರೆ ಅದರ ವೇಗ, ಒಂದೇ ರೀತಿ ಯಲ್ಲಿರುವುದು. ಬದಲಾವಣೆ ಇಲ್ಲದ, ಒಂದೇ ರೀತಿಯ ಚಲನೆ, ನಮ್ಮ ಗಮನಕ್ಕೆ ಬರುವುದಿಲ್ಲ. ಇದರ ಅನುಭವ ಋತು ಚಕ್ರದಿಂದ ಗೋಚರಿಸುತ್ತದೆ. ದಿನ ನಿತ್ಯವೂ ಭೂಮಿ ತನ್ನ ಅಕ್ಷದಲ್ಲಿ ತಿರುಗುವಾಗ ಅದರ ವೇಗ 1,600 ಕಿ.ಮೀ. ಗಂಟೆಗೆ. ಇದೂ ಅನುಭವಕ್ಕೆ ಬರುವುದಿಲ್ಲ. ಇದು ಹಗಲು ರಾತ್ರಿಗಳಿಂದ, ಸೂರ್ಯನ ಉದಯ, ಅಸ್ತಗಳಿಂದ ಗೋಚರವಾಗುತ್ತದೆ. ಇನ್ನೊಂದು ಚಲನೆ ಇದೆ. ಅದು, 23.5 ಡಿಗ್ರಿ ಓರೆಯಾಗಿರುವ ಭೂಮಿಯ ಅಕ್ಷದ್ದು. ಅದರ ತಿರುಗುವಿಕೆ. ಇದಕ್ಕೆ ಪ್ರಿಸಿಶನ್‌ (precession) ಎನ್ನುತ್ತಾರೆ. ಆಶ್ಚರ್ಯವೆಂದರೆ ಇದು ಒಂದು ಸುತ್ತಾಗಲು 26 ಸಾವಿರ ವರ್ಷ ಬೇಕು. ತುಂಬಾ ನಿಧಾನದ ಚಲನೆ. ಇದು 72 ವರ್ಷಗಳಲ್ಲಿ ಒಂದು ಡಿಗ್ರಿ ಕೋನೀಯ ಚಲನೆ ಮಾತ್ರ. ಹಾಗಾಗಿ ಸುಮಾರು ಒಂದು ಸಾವಿರ ವರ್ಷಗಳಲ್ಲೂ ಹೆಚ್ಚಿನ ಗಮನ ಸೆಳೆಯದು.

ಈ ರೀತಿಯ ಚಲನೆಯನ್ನು ನಾವು ನಮ್ಮ ಆಟದ ಬುಗುರಿಯಲ್ಲಿ ನೋಡುತ್ತೇವೆ. ಭೂಮಿ ಧ್ರುವ ಪ್ರದೇಶಗಳಲ್ಲಿ ಸ್ವಲ್ಪ ಚಪ್ಪಟೆಯಾಗಿ, ಭೂಮಧ್ಯ ಪ್ರದೇಶದಲ್ಲಿ ಉಬ್ಬಿರುವುದು ಹಾಗೂ ಸೂರ್ಯ, ಚಂದ್ರರ ಗುರುತ್ವ ಬಲ, ಭೂಮಿಯ ಈ ಚಲನೆಗೆ ಕಾರಣ. ಈ ಚಲನೆಯಿಂದ ಈಗ ಭೂಮಿಯ ಅಕ್ಷ ನೇರವಾಗಿ ಧ್ರುವ ನಕ್ಷತ್ರದ ಕಡೆಗಿದ್ದರೆ 13,000 ವರ್ಷಗಳ ಅನಂತರ ಅದು ಅಭಿಜಿತ್‌ ನಕ್ಷತ್ರಕ್ಕೆ (vega) ನೇರವಾಗಿರುತ್ತದೆ. ಆಗ ಜೂನ್‌ 21 ರಂದು ದಕ್ಷಿಣಾಯನದ ಬದಲು ಉತ್ತರಾಯಣ ಏರ್ಪಟ್ಟು ಋತುಗಳು ಏರು ಪೇರಾಗುತ್ತವೆ. ಬದಲಾವಣೆಗಳೇ ಪ್ರಕೃತಿಯ ಸಹಜ ಸ್ವಭಾವಗಳ್ಳೋ ಎನ್ನುವಂತಿದೆ.

– ಡಾ| ಎ. ಪಿ. ಭಟ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next