Advertisement

ಗುರು ಮಾರ್ಗದರ್ಶನದಿಂದ ಜೀವನದ ದಿಕ್ಕು ಬದಲು

05:27 PM May 19, 2018 | Team Udayavani |

ಶೃಂಗೇರಿ: ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರಿಂದ ಯಶಸ್ಸಿನ ಹಾದಿ ದೊರಕುತ್ತದೆ. ಯೋಗ್ಯ ಗುರುವಿನ
ಮಾರ್ಗದರ್ಶನ ಜೀವನದ ದಿಕ್ಕನ್ನೇ ಬದಲಿಸಬಹುದಾಗಿದೆ ಎಂದು ಯುವ ವಿಪ್ರ ವೇದಿಕೆ ಅಧ್ಯಕ್ಷ ನೈಭಿ ಸುಬ್ರಹ್ಮಣ್ಯ ಹೇಳಿದರು. ತಾಲೂಕಿನ ಅಡ್ಡಗದ್ದೆ ಗ್ರಾ.ಪಂ.ನ ಉಳುವೆಬೈಲು ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಯುವ ವಿಪ್ರ ವೇದಿಕೆ ಏರ್ಪಡಿಸಿರುವ ಒಂದು ವಾರದ ಸಂಸ್ಕಾರ ಶಿಬಿರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಶಿಬಿರದಲ್ಲಿ ವಿವಿಧ ರೀತಿಯ ತರಬೇತಿ, ಆಟ, ಕಥೆ, ವ್ಯಾಯಾಮ, ಯೋಗ, ರಾಮಾಯಣ, ಮಹಾಭಾರತದ ಕಥೆ, ಸಂಧ್ಯಾವಂದನೆ ಸಹಿತ ಎಲ್ಲವನ್ನು ಬೋಧಿ ಸಲಾಗುತ್ತದೆ. ಬೆಳಗ್ಗೆ ಬೇಗ ಏಳುವುದು ಮತ್ತು ಕಲಿಕೆಯನ್ನು ಬೆಳಗಿನ
ಜಾವದಲ್ಲಿ ಮಾಡುವುದರಿಂದ ಗ್ರಹಿಕಾ ಶಕ್ತಿ ಹೆಚ್ಚುತ್ತದೆ. ಸಂಧ್ಯಾವಂದನೆ ಮಾಡುವುದರಿಂದ ಏಕಾಗ್ರತೆ ಹಾಗೂ ಗುರು ಹಿರಿಯರಲ್ಲಿ ಭಕ್ತಿ ಬರುತ್ತದೆ ಎಂದರು.

ಶಿಕ್ಷಕ ಎಸ್‌.ಗುರುಮೂರ್ತಿ ಮಾತನಾಡಿ, ನಮ್ಮ ದೇಶದ ಇತಿಹಾಸವನ್ನು ನೋಡಿದರೆ, ಧರ್ಮಾಚರಣೆ ಮತ್ತು ಭಯ ಭಕ್ತಿ ಹೊಂದಿದ್ದ ಸಾಮಾನ್ಯ ಜನರು ಸಂಸ್ಕಾರವಂತರಾಗಿದ್ದರು. ಮನುಷ್ಯರಿಗೆ ಸಂಸ್ಕಾರ ಎಂಬುದು ಅತಿ ಮುಖ್ಯ. ಪ್ರಾಣಿಗಳಿಗೆ ಸಂಸ್ಕಾರ ಇರದಿರುವುದರಿಂದ ಬದುಕಿಗೆ ಅರ್ಥವಿಲ್ಲ. ಆದರೆ ಮನುಷ್ಯರು ಬದುಕಿನ ವಾತಾವರಣ, ಬಾಲ್ಯದ ಶಿಕ್ಷಣ, ಪೋಷಕರ ಹಾಗೂ ಗುರುವಿನ ಮಾರ್ಗದರ್ಶನ ದೊರಕಿದರೆ ಮಾತ್ರ ಯೋಗ್ಯ ಪ್ರಜೆಯಾಗಲು ಸಾಧ್ಯ. ಧರ್ಮಾಚರಣೆ ಮಾಡುವುದರಿಂದ ಜೀವನದಲ್ಲಿ ಶಿಸ್ತನ್ನು ಕಲಿಯಲು ಸಾಧ್ಯವಾಗಲಿದೆ.

ನಮ್ಮ ದೇಶಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದು, ಹಿಂದೂ ಧರ್ಮವು ಉತ್ತಮ ಸಂಸ್ಕಾರದಿಂದ ವಿಶ್ವಕ್ಕೆ ಒಳ್ಳೆಯ  ಸಂದೇಶವನ್ನು ನೀಡಿದೆ ಎಂದರು.

ಶಿಬಿರವನ್ನು ರಮೇಶ್‌ ಡೋಂಗ್ರೆ ಉದ್ಘಾಟಿಸಿದರು. ಪ್ರಸನ್ನ ಗಣಪತಿ ದೇವಸ್ಥಾನದ ಅರ್ಚಕ ರಾಘವೇಂದ್ರ ಭಟ್‌, ಉಳುವೆ ಶೇಷಣ್ಣಯ್ಯ,ಕೃಷ್ಣಮೂರ್ತಿ, ಮಾಕೋಡು ಗಣಪತಿ, ದಿಲೀಪ್‌, ವಿಘ್ನೇಶ್‌, ಅಣ್ಣು ಕೊಡಿಗೆ ಶ್ರೀಧರರಾವ್‌ ಮತ್ತಿತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next