Advertisement

6 ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲು

12:32 AM Jan 29, 2020 | Lakshmi GovindaRaj |

ಬೆಂಗಳೂರು: ಆರು ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಾಯಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಮಂಗಳವಾರ ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಆಯೋಜಿಸಿದ್ದ ಅಕ್ರಮ- ಸಕ್ರಮ ಯೋಜನೆಯಡಿ ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜಧಾನಿಯ ಜನತೆ ಅಚ್ಚರಿ ಪಡುವಂತೆ ಬೆಂಗಳೂರನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ 9 ಸಾವಿರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಸಾವಿರ ಸೇರಿದಂತೆ ಒಟ್ಟು 10 ಸಾವಿರ ಆರ್ಥಿಕವಾಗಿ ಹಿಂದುಳಿದ ವರ್ಗದ ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿರುವುದು ತೃಪ್ತಿ ತಂದಿದೆ ಎಂದರು.

ಜನರ ಶ್ರೇಯೋಭಿವೃದ್ಧಿಗಾಗಿ ಕಂದಾಯ ಇಲಾಖೆ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿ ಸುತ್ತಿದೆ. ಅದರಲ್ಲಿ 94 (ಸಿ) ಮತ್ತು 94 (ಸಿಸಿ) ಯಡಿ ಅಕ್ರಮ ಸಕ್ರಮ ಯೋಜನೆ ಬಡಜನರಿಗೆ ಅತ್ಯಂತ ಉಪಯುಕ್ತವಾಗಿದೆ.

ಸರ್ಕಾರಿ ಜಮೀನುಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ವಾಸದ ಮನೆಗಳನ್ನು ನಿರ್ಮಿಸಿಕೊಂಡಿದ್ದಲ್ಲಿ ಅಂತಹ ವಾಸದ ಮನೆಗಳನ್ನು ಸಕ್ರಮ ಮಾಡಲು ಕರ್ನಾಟಕ ಭೂ-ಕಂದಾಯ ಕಾಯ್ದೆ 1964 ರ ಕಲಂ 94 (ಸಿ) ಮತ್ತು 94 (ಸಿಸಿ) ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ ಎಂದರು.

Advertisement

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಸರ್ಕಾರ ಬಂದು ಆರು ತಿಂಗಳಲ್ಲಿಯೇ 1090 ಎಕರೆ ಗೋಮಾಳವನ್ನು ಸ್ಮಶಾನ ಮತ್ತು ಶಾಲೆಗಳಿಗೆ ನೀಡಲಾಗಿದೆ. ಎಲ್ಲೆಲ್ಲಿ ಸರ್ಕಾರಿ, ಗೋಮಾಳ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆಯೋ ಎಲ್ಲವನ್ನು ವಶಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಚಿವ ವಿ.ಸೋಮಣ್ಣ, ಸಂಸದ ಮುನಿಸ್ವಾಮಿ, ಪಿ.ಸಿ.ಮೋಹನ್‌, ಶಾಸಕ ಅರವಿಂದ ಲಿಂಬಾವಳಿ, ಎಸ್‌.ರಘು, ಭೈರತಿ ಬಸವರಾಜು, ಸತೀಶ್‌ರೆಡ್ಡಿ, ಗೋಪಾಲಯ್ಯ, ರವಿಸುಬ್ರಮಣ್ಯ, ಎಸ್‌.ಟಿ.ಸೋಮಶೇಖರ್‌, ಮೇಯರ್‌ ಗೌತಮ್‌ ಕುಮಾರ್‌ ಜೈನ್‌ ಉಪಸ್ಥಿತರಿದ್ದರು.

10 ಸಾವಿರ ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 886, ರಾಜರಾಜೇಶ್ವರಿ ನಗರ 136, ದಾಸರಹಳ್ಳಿ 372, ಯಲಹಂಕ 1660, ಮಹದೇವಪುರ 1773, ಕೆ.ಆರ್‌.ಪುರ 13, ಸಿ.ವಿ.ರಾಮನ್‌ನಗರ 93, ಬೆಂಗಳೂರು ದಕ್ಷಿಣ 2137, ಪದ್ಮನಾಭನಗರ 41, ವಿಜಯನಗರ 13, ಬೊಮ್ಮನಹಳ್ಳಿ 460, ಬ್ಯಾಟರಾಯನಪುರ 882, ಆನೇಕಲ್‌ 534, ಬೆಂಗಳೂರು ಗ್ರಾಮಾಂತರದಲ್ಲಿ 1000 ಸೇರಿ ಒಟ್ಟಾರೆ 10 ಸಾವಿರ ಫ‌ಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಯಿತು.

ವಸತಿ ಇಲಾಖೆಯಿಂದ ಬೆಂಗಳೂರಿನಲ್ಲಿ 1 ಲಕ್ಷ ಮನೆಗಳು ಹಾಗೂ 200 ಕೊಳಗೇರಿ ಪ್ರದೇಶದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಬಡವರ ನೆಮ್ಮದಿ ಬದುಕಿಗೆ ಸರ್ಕಾರ ಬದ್ಧವಾಗಿದ್ದು, ಆರು ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಾಗಲಿದೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next