ರಾಯಚೂರು: ವಿದ್ಯಾರ್ಥಿಗಳು ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ವಿದ್ಯಾಭ್ಯಾಸದ ಸದುದ್ದೇಶ ಈಡೇರುತ್ತದೆ. ಯುವಕರು ಇಂತಹ ಉತ್ತಮ ಶಿಬಿರಗಳ ಪ್ರಯೋಜನ ಪಡೆಯಬೇಕು ಎಂದು ಶಾಂತಾಶ್ರಮದ ಶ್ರೀ ನಿಜಾನಂದ ಸ್ವಾಮೀಜಿ ಸಲಹೆ ನೀಡಿದರು.
ಮಿಟ್ಟಿಮಲ್ಕಾಪುರದ ಶಾಂತಾಶ್ರಮದಲ್ಲಿ ಜ್ಞಾನತುಂಗಾ ಸ್ನಾತಕೋತ್ತರ ಕೇಂದ್ರ ಮತ್ತು ಸಮಾಜ ಕಾರ್ಯ ಅಧ್ಯಯನ ವಿಭಾಗದಿಂದ ನ.8ರಿಂದ 14ರವರೆಗೆ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಾಜ ಕಾರ್ಯ ಶಿಬಿರ ಶಿಸ್ತು, ಸಮಯ ಪಾಲನೆ, ಜೀವನಶೈಲಿ ಅಭಿವೃದ್ಧಿಪಡಿಸಲು ಸಹಾಯಕವಾಗಿದೆ. ಶಿಬಿರದಿಂದ ಪಡೆದ ಜ್ಞಾನ ಗ್ರಾಮಾಭಿವೃದ್ಧಿಗೆ ವಿನಿಯೋಗಿಸುವ ಮೂಲಕ ಸಮಾಜ ಕಾರ್ಯ ಯಶಸ್ವಿಗೊಳಿಸಲು ಸಲಹೆ ನೀಡಿದರು.
ಶಿಬಿರದ ನಿರ್ದೇಶಕ ಡಾ| ಶರಣ ಬಸವರಾಜ ಮಾತನಾಡಿ, ಸತತ ಏಳು ದಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ, ಪಿಆರ್‌ಎ ಸಹಭಾಗಿ ಗ್ರಾಮೀಣ ಸಮೀಕ್ಷೆ, ಕೋವಿಡ್ ವ್ಯಾಕ್ಸಿನೇಶನ್, ತಂಬಾಕು ಸೇವನೆ ನಿಯಂತ್ರಣ, ಅಪೌಷ್ಟಿಕತೆ, ಶ್ರಮದಾನ ವರದಿ ನೀಡುವ ಜೊತೆಗೆ ಸಾಕಷ್ಟು ವಿಷಯ ಅರಿತು ಮತ್ತು ಗ್ರಾಮದ ಜನತೆಗೆ ತಿಳಿಹೇಳಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಶಿಬಿರದಲ್ಲಿ ಭಾಗವಹಿಸಿ ಗ್ರಾಮದ ಜನತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದರು.
ಈ ವೇಳೆ ಉಪನ್ಯಾಕರಾದ ಡಾ| ರಶ್ಮಿರಾಣಿ, ಬಜಾರಪ್ಪ, ಸಮಾಜ ಕಾರ್ಯ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಇದ್ದರು.