ಧಾರವಾಡ: ಸಾಹಿತ್ಯದಿಂದ ರಾಜಕಾರಣಿಗಳು ದೂರವಾದರೆ, ಸಾಹಿತಿಗಳು ರಾಜಕಾರಣಕ್ಕೆ ಹತ್ತಿರವಾದ ಕಾರಣ ಮೌಲ್ಯಗಳು ಗೌಣವಾಗುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಆಯುಕ್ತ, ಸಾಹಿತಿ ವೆಂಕಟೇಶ ಮಾಚಕನೂರ ಹೇಳಿದರು.
ಕವಿಸಂನಲ್ಲಿ ಗದಿಗೆಯ್ಯ ಹೊನ್ನಾಪುರಮಠ 152ನೇ ಜನ್ಮದಿನ ಹಾಗೂ ಅವರ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ರಾಜಕಾರಣಿಗಳು ಅಭಿರುಚಿಯನ್ನು ಕೆಡಿಸಿ, ಜನರ ಆಲೋಚನೆಯ ದಿಕ್ಕು ತಪ್ಪಿಸಿದ್ದಾರೆ. ಹೀಗಾಗಿ ಪ್ರತಿಭಟನೆ ಮಾಡುವ ಶಕ್ತಿಯನ್ನೇ ಜನ ಕಳೆದುಕೊಂಡಿದ್ದು, ಮುಂದೊಂದು ದಿನ ಬದಲಾವಣೆ ಬಂದೇ ಬರುತ್ತದೆ ಎಂಬ ವಿಶ್ವಾಸವನ್ನು ನಾವು ಹೊಂದಬೇಕಾಗಿದೆ.
ಕನ್ನಡ ಕಟ್ಟಿದವರು ಇಂದು ಕನ್ನಡ ಉಳಿಸುವ ಕಾಲ ಬಂದಿದೆ ಎಂದರು. ಧಾರವಾಡ ಸಾಹಿತ್ಯಿಕ ಬದುಕು ಪ್ರಾರಂಭಿಸಿದ್ದು ಗಂಡು ಮಕ್ಕಳ ಟ್ರೇನಿಂಗ್ ಶಾಲೆಯಿಂದ. ಅಂದು ಕನ್ನಡಕ್ಕಾಗಿ ಹೋರಾಡಿದವರ ಧಿಧೀಮಂತರ ಪರಿಚಯ ಇಂದು ಶಿಕ್ಷಕರಿಗೆ ಇಲ್ಲದಾಗಿದೆ. ಡೆಪ್ಯುಟಿ ಚೆನ್ನಬಸಪ್ಪ ಮತ್ತು ಕೆಲವು ಬ್ರಿಟಿಷ್ ಅ ಧಿಕಾರಿಗಳು ಕನ್ನಡದ ಬೇರುಗಳು ಈ ನೆಲದಲ್ಲಿ ಬೇರೂರುವಂತೆ ಮಾಡಿದ ಮೊದಲಿಗರು ಎಂದು ಹೇಳಿದರು.
ಲೇಖಕನ ಲೋಕಪ್ರಜ್ಞೆ: ಒಳನೋಟ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಬೆಂಗಳೂರು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿ, ಅಂದಿನ ಬದುಕು ಮತ್ತು ಚಳವಳಿ ಬೇರೆ ಬೇರೆಯಾಗಿದ್ದಿಲ್ಲ. ಆದರೆ ಇಂದು ಎರಡೂ ಬೇರೆ ಬೇರೆಯಾಗಿವೆ. ಎಲ್ಲ ರಂಗ ವಿಫಲವಾಗಿರುವ ಕಾಲಘಟ್ಟದಲ್ಲಿದ್ದು, ಎಲ್ಲವೂ ಖಾಲಿ ಖಾಲಿಯಾಗಿ ಕಾಣಿಸುತ್ತಿದೆ. ನೈತಿಕ ಮೌಲ್ಯಗಳು ಕುಸಿದು ಹೋಗಿರುವುದು ಆತಂಕ ತರುತ್ತಿದೆ ಎಂದರು. ಲೋಕಪ್ರಜ್ಞೆ ಇಲ್ಲದವ ಎಂದಿಗೂ ಲೇಖಕ ಆಗಲಾರ. ಅದರಲ್ಲೂ ಲೇಖಕರು ಬರೀ ರಾಜಕಾರಣಿಗಳನ್ನು ಬೈದರೆ ಸಾಲದು. ಸಾಂಸ್ಕೃತಿಕ ರಾಜಕಾರಣದ ಬಗ್ಗೆಯೂ ಬೈಯಬೇಕಾಗಿದೆ. ಲೇಖಕನು ಜನರ ನಡುವಿನ ಸಮಸ್ಯೆಗಳನ್ನು ತನ್ನ ಬರವಣಿಗೆಯ ಮೂಲಕ ಹೇಳಬೇಕು ಮತ್ತು ಅದಕ್ಕೆ ಪರಿಹಾರವನ್ನೂ ಸೂಚಿಸಬೇಕು ಎಂದು ಹೇಳಿದರು.
ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸಹಕಾರ್ಯದರ್ಶಿ ಶಂಕರ ಕುಂಬಿ, ದತ್ತಿದಾನಿಗಳ ಪರವಾಗಿ ಜಗದೇವಿ ಹೊನ್ನಾಪೂರಮಠ ಇದ್ದರು. ಗುರು ಹಿರೇಮಠ ಸ್ವಾಗತಿಸಿ, ಪರಿಚಯಿಸಿದರು. ಡಾ| ಮಹೇಶ ಹೊರಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.