ಮೈಸೂರು: ನಮ್ಮ ದೇಶವನ್ನು ಪಂಚಾಂಗ ಆಳುತ್ತಿದ್ದು, ಇದನ್ನು ತಡೆಯುವ ಕೆಲಸವಾಗಬೇಕಿದೆ. ಅಲ್ಲದೆ ಜನರು ಪಂಚಾಂಗ ನಂಬುವ ಬದಲು ರಾಜ್ಯಾಂಗ ನಂಬಿ ಎಂದು ಸಂಪ್ರದಾಯದ ಆಚರಣೆಯನ್ನು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಟೀಕಿಸಿದರು.
ಯಜ್ಞ-ಯಾಗಾದಿ, ಹೋಮ-ಹವನಗಳಿಂದ ಏನು ಆಗುವುದಿಲ್ಲ. ಒಂದೊಮ್ಮೆ ಯಜ್ಞಗಳ ಆಚರಣೆಯಿಂದ ಹಾಗೂ ಕೈಗಳಿಗೆ ಕಟ್ಟಿಕೊಳ್ಳುವ ದಾರಕ್ಕೆ ನಿಜವಾಗಿಯೂ ಶಕ್ತಿ ಇದ್ದರೆ ಪಾಕಿಸ್ತಾನ ಮತ್ತು ಚೀನಾದ ಗಡಿಭಾಗಕ್ಕೆ ತೆರಳಿ ನೀವು ಕಟ್ಟಿಕೊಂಡಿರುವ ದಾರವನ್ನು ಪ್ರದರ್ಶಿಸಿ. ಇದರಿಂದ ಶತ್ರುಗಳು ಓಡಿ ಹೋಗುವುದಾದರೆ ಗಡಿಯಲ್ಲೇ ಹೋಮ-ಹವನ ಮಾಡಲಿ, ಇವೆಲ್ಲವೂ ಕೇವಲ ಮೂಢನಂಬಿಕೆಯಾಗಿದೆ ಎಂದು ಆಚಾರ ಪದ್ಧತಿಗಳ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಆಷಾಢ ಕೆಟ್ಟದಲ್ಲ: ಆಷಾಢಮಾಸ ಕೆಟ್ಟದ್ದು ಎಂಬುದು ಸುಳ್ಳು. ಆಷಾಢಮಾಸದಲ್ಲೇ ಉತ್ತಮ ಮಳೆಯಾಗಿದ್ದು, ಎಲ್ಲಾ ಜಲಾಶಯಗಳು ಭರ್ತಿಯಾಗಿದೆ. ಹೀಗಾಗಿ ಆಷಾಢಮಾಸ ಎಂದೂ ಕೆಟ್ಟದ್ದಲ್ಲ. ಈ ನಿಟ್ಟಿನಲ್ಲಿ ಸಚಿವ ಜಿ.ಟಿ.ದೇವೇಗೌಡರ ನಿಲುವು ಸರಿಯಾಗಿದೆ ಎಂದು ಆಷಾಢದಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನು ಮುಂದುವರಿಸುತ್ತೇನೆಂಬ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆಗೆ ಭಗವಾನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬುದ್ಧಿವಂತಿಕೆ ಸಾಕು: ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಯಾವುದೇ ಉನ್ನತ ಶಿಕ್ಷಣ, ಪದವಿಗಳ ಅಗತ್ಯವಿಲ್ಲ, ಬದಲಿಗೆ ಬುದ್ದಿವಂತಿಕೆ ಇದ್ದರೆ ಸಾಕು. ಹೀಗಾಗಿ ಜಿ.ಟಿ.ದೇವೇಗೌಡರು ಉನ್ನತ ಶಿಕ್ಷಣ ಇಲಾಖೆ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳು, ಕಾಲೇಜು ಶಿಕ್ಷಣದ ಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿರುವ ಸಚಿವರಿಗೆ ಎಲ್ಲಾ ಕುಲಪತಿಗಳು ಹಾಗೂ ಪ್ರಾಧ್ಯಾಪಕರು ಸಹಕರಿಸಬೇಕಿದೆ ಎಂದರು.
ಚಿಂತನೆ ಉತ್ತಮವಾಗಿದೆ: ಶಿಕ್ಷಣ ಸಚಿವ ಎನ್. ಮಹೇಶ್ ಉತ್ತಮ ರೀತಿಯಲ್ಲಿ ಇಲಾಖೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇವರು ಜಾರಿಗೊಳಿಸಲು ಚಿಂತನೆ ಮಾಡಿರುವ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ನಿರ್ಧಾರ ಉತ್ತಮವಾಗಿದೆ. ಇಂದು ಬಹುತೇಕ ಮಕ್ಕಳು ಪಠ್ಯ ಪುಸ್ತಕ ಓದುವುದನ್ನೇ ಮರೆತಿದ್ದು, ಎಲ್ಲರೂ ಗೈಡ್‌ಗಳನ್ನು ಅವಲಂಬಿಸಿದ್ದಾರೆ.
ಆದರೆ ಮಕ್ಕಳು ಪಠ್ಯ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆದರೆ ಅವರ ಜ್ಞಾನ ಹೆಚ್ಚಾಗಲಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನೇರವಾಗಿ ಅರ್ಥವಾಗಲಿದೆ. ಹೀಗಾಗಿ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ಕ್ರಮ ಜಾರಿಯಾಗಲಿ ಎಂದು ಹೇಳಿದರು.