ಬಂಟ್ವಾಳ : ಬಿ.ಸಿ. ರೋಡ್ ನಗರದ ಹೃದಯ ಭಾಗದಲ್ಲಿ ನಗರ ನೀರು ಸರಬರಾಜು ಒಳ ಚರಂಡಿ ಮಂಡಳಿಯು ಇತ್ತೀಚೆಗೆ ಪೈಪ್‌ಲೈನ್ ದುರಸ್ತಿಗಾಗಿ ಕಾಂಕ್ರಿಟ್ ರಸ್ತೆಯನ್ನು ಒಡೆದು ಹಾಕಿದ್ದು ಸರ್ವಿಸ್ ರಸ್ತೆಯಲ್ಲಿ ಸಂಚಾರ ಅಡಚಣೆ ಬಗ್ಗೆ ಸಾರ್ವಜನಿಕರಿಂದ ದೂರು ವ್ಯಕ್ತವಾಗಿದ್ದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಅ. 30ರಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕಾಂಕ್ರಿಟೀಕೃತ ರಸ್ತೆಯನ್ನು ಒಡೆದು ಯಾವುದೇ ಸುರಕ್ಷಾ ಕ್ರಮಗಳನ್ನು ಅಳವಡಿಸದೆ ಗುಂಡಿಯನ್ನು ಹಾಗೇ ಬಿಟ್ಟಿರುವುದು, ವಾಹನ ಸಂಚಾರಕ್ಕೆ ಅಡಚಣೆ ಮಾಡಿರುವುದರಿಂದ ಜನರಿಗೆ ತೊಂದರೆ ಆಗಿದೆ. ತಕ್ಷಣಕ್ಕೆ ದುರಸ್ತಿ ಕಾರ್ಯ ನಡೆಸಿ ಗುಂಡಿ ಮುಚ್ಚಿಸುವಂತೆ ಶಾಸಕರು ಸೂಚಿಸಿದರು.
ಬುಧವಾರದೊಳಗೆ ಬಗೆಹರಿಸಿ
ಪೈಪ್ ಒಡೆದು ಕುಡಿಯುವ ನೀರು ಪೋಲಾಗುವುದನ್ನು ತಡೆಯಲು ರಸ್ತೆಯನ್ನು ಅಗೆದು ಹಾಗೇ ಬಿಟ್ಟು ಹೋಗುವುದಲ್ಲ. ಸಮಸ್ಯೆಯನ್ನು ಸ್ಥಳದಲ್ಲಿ ಪರಿಹರಿಸದೆ ನಾಳೆಗೆ ಮುಂದೂಡಿದ ಕ್ರಮದ ಸರಿಯಲ್ಲ ಎಂದು ತಿಳಿಸಿದ ಅವರು ಬುಧವಾರದೊಳಗೆ ಸಮಸ್ಯೆ ಬಗೆ ಹರಿಸಿ ಎಂದು ಆದೇಶಿಸಿದರು.
ಅಗೆದ ಸ್ಥಳ ಆಳವಾಗಿರುವುದರಿಂದ ರಾತ್ರಿ ಹೊತ್ತಲ್ಲಿ ದ್ವಿಚಕ್ರವಾಹನದವರು ತಪ್ಪಿ ಬಿದ್ದು ಪ್ರಾಣಾಪಾಯವಾಗುವ ಸಂಭವವಿದೆ. ಹಾಗಾಗಿ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನು ಪರಿಹರಿಸಬೇಕು. ಈ ಹಿಂದೆ ಪಿಂಟೋ ಕಾಂಪ್ಲೆಕ್ಸ್ ಎದುರುಗಡೆ ನೀರಿನ ಪೈಪ್ ಸರಿ ಮಾಡಲು ಹೆದ್ದಾರಿ ಇಲಾಖೆ ಡಾಮರು ಅಗೆದು ಹಾಕಿದ್ದು ಈ ವರೆಗೆ ಮರು ಡಾಮರೀಕರಣ ಮಾಡದೆ ವಾಹನ ಸಂಚಾರಕ್ಕೆ ಅಡ್ಡಿ ಆಗುತ್ತಿರುವ ಬಗ್ಗೆಯೂ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿತ್ತು.
ಇದೇ ರೀತಿ ಪೋಲೀಸ್ ಠಾಣೆಗೆ ತಿರುಗುವಲ್ಲಿಯೂ ಸರ್ವಿಸ್ ರಸ್ತೆಯಲ್ಲಿ ಪೈಪ್ ಒಡೆದು ನೀರು ಪೋಲಾಗುತ್ತಿತ್ತು. ಪೈಪ್ ಸರಿ ಪಡಿಸಲು ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕಿದ ಇಲಾಖೆ ಈವರೆಗೆ ಮರು ಕಾಂಕ್ರೀಟ್ ಹಾಕುವ ಕಾಯಕಕ್ಕೆ ಮುಂದಾಗಿಲ್ಲ ಎನ್ನುವುದು ಸಾರ್ವಜನಿಕರಿಂದ ವ್ಯಕ್ತವಾಗಿರುವ ಅಭಿಪ್ರಾಯ. ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ಸಮಯದಲ್ಲಿ ಕುಡಿಯುವ ನೀರಿನ ಪೈಪ್ ಲೈನ್‌ನ ಬಗ್ಗೆ ನಿಗಾ ವಹಿಸಿದ್ದರೆ ಇಂತಹ ಸಮಸ್ಯೆ ಗಳು ಉದ್ಭವ ಆಗುತ್ತಿರಲಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯವನ್ನು ಶಾಸಕರು ಇದೇ ಸಂದರ್ಭದಲ್ಲಿ ಸ್ಮರಿಸಿದರು.