Advertisement

ಮಳೆ ಹಾನಿಗೆ ತತ್‌ಕ್ಷಣ ಪರಿಹಾರ; ಉಸ್ತುವಾರಿ ಸಚಿವ ಬೊಮ್ಮಾಯಿ ಸೂಚನೆ

11:10 AM Aug 07, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ತತ್‌ಕ್ಷಣವೇ ಪರಿಹಾರ ವಿತರಿಸುವಂತೆ ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಅವರು ಗುರುವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲೆಯ ಮಳೆ ಹಾನಿ ಹಾಗೂ ಕೋವಿಡ್‌ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಗೊಳಗಾದ ಮನೆಗಳಿಗೆ ತತ್‌ಕ್ಷಣ ಪ್ರಾಥಮಿಕ ಹಂತದ ಪರಿಹಾರ ಬಿಡುಗಡೆಗೊಳಿಸಿ, ಮನೆ ಹಾನಿಯ ವಿವರ ಕುರಿತು ರಾಜೀವ್‌ ಗಾಂಧಿ ವಸತಿ ನಿಗಮದ ಪೋರ್ಟಲ್‌ನಲ್ಲಿ ಹಾನಿಯಾದ ದಿನವೇ ಅಪ್‌ಲೋಡ್‌ ಮಾಡುವಂತೆ ಸೂಚಿಸಿದರು.

ಕೃಷಿ ಹಾನಿ ಪರಿಶೀಲಿಸಲು ತಾಲೂಕುವಾರು ಕಂದಾಯ, ಕೃಷಿ ಮತ್ತು ಪಿಡಿಒ ಒಳಗೊಂಡ ತಂಡಗಳನ್ನು ರಚಿಸಿ, ಹಾನಿಯ ಸಮೀಕ್ಷೆಯನ್ನು ಶೀಘ್ರದಲ್ಲಿ ನಡೆಸಿ ವರದಿ ಪಡೆದು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ. ಪ್ರವಾಹ ಪೀಡಿತ ಪ್ರದೇಶಗಳಿದ್ದಲ್ಲಿ ಮುಂದಿನ ತಿಂಗಳ ಪಡಿತರವನ್ನೂ ವಿತರಿಸಿ ಎಂದರು.

118 ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಇದುವರೆಗೆ 116 ಮನೆಗಳಿಗೆ ಭಾಗಶಃ ಮತ್ತು 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಪರಿಹಾರ ವಿತರಿಸಲಾಗಿದೆ. ತಹಶೀ ಲ್ದಾರ್‌ಗಳಿಗೆ ಹಾನಿಯ ಪರಿಹಾರ ವಿತರಿಸುವ ಅಧಿಕಾರ ನೀಡಲಾಗಿದೆ. ಜನರನ್ನು ಸ್ಥಳಾಂತರಿಸುವ ಪರಿಸ್ಥಿತಿ ಜಿಲ್ಲೆಯಲ್ಲಿ ಇಲ್ಲ, ಪ್ರವಾಹ ಪೀಡಿತ ಸಂಭವವಿರುವ 26 ಗ್ರಾಮಗಳನ್ನು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಎಲ್ಲ ಅಧಿಕಾರಿ ಗಳಿಗೆ ಕೇಂದ್ರ ಸ್ಥಾನದಲ್ಲಿರುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿ ಕಾರಿ ಸಚಿವರಿಗೆ ತಿಳಿಸಿದರು.

1,000 ಟನ್‌ ರಸಗೊಬ್ಬರ ಅಗತ್ಯ
ಜಿಲ್ಲೆಯಲ್ಲಿ ಈ ತಿಂಗಳ ಪಡಿತರ ಎತ್ತುವಳಿ ಆಗಿದ್ದು, ಕಳೆದ ತಿಂಗಳು ಶೇ. 95 ಪಡಿತರ ವಿತರಣೆ ಆಗಿದೆ. 1,000 ಟನ್‌ ರಸಗೊಬ್ಬರದ ಆವಶ್ಯಕತೆಯಿದ್ದು, ಎಂಸಿಎಫ್ನಿಂದ ನಾಳೆ ಸರಬರಾಜು ಆಗಲಿದೆ. ರಸಗೊಬ್ಬರದ ಸಮಸ್ಯೆ ಇಲ್ಲ, ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು ಶೇ. 88 ಪೂರ್ಣಗೊಂಡಿದೆ. ಮರವಂತೆ ಮತ್ತು ನಾವುಂದಕ್ಕೆ ಭೇಟಿ ನೀಡಿ ನೆರೆ ಕುರಿತು ಪರಿಶೀಲನೆ ನಡೆಸ ಲಾಗಿದೆ ಎಂದು ಡಿಸಿ ಹೇಳಿದರು.

Advertisement

ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಎಸ್ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿ ಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಉಪಸ್ಥಿತರಿದ್ದರು.

ಕೊರೊನಾ: 15 ದಿನಗಳಿಂದ ಮರಣ ಪ್ರಮಾಣ ಅಧಿಕ
ಕೋವಿಡ್‌ -19 ಸ್ಥಿತಿಗತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಕಳೆದ ವಾರದಿಂದ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 145 ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಸ್ತುತ 2,100 ಸಕ್ರಿಯ ಪ್ರಕರಣಗಳಿವೆ. 1,000 ಮಂದಿ ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಮತ್ತು 1,100 ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ. ಇದುವರೆಗೆ ಒಟ್ಟು 46 ಮರಣ ಸಂಭವಿಸಿದ್ದು 15 ದಿನಗಳಿಂದ ಮರಣದ ಸಂಖ್ಯೆ ಅಧಿಕವಾಗಿದೆ ಎಂದರು.

ಕೊನೆಯ ಹಂತದಲ್ಲಿ ಆಸ್ಪತ್ರೆಗೆ
ಚಿಕಿತ್ಸೆಗೆ ಸಂಬಂಧಿಸಿದಂತೆ ಬೆಡ್‌ಗಳು, ವೆಂಟಿಲೇಟರ್‌ ಮತ್ತು ಹೈ ಪ್ರೋ ಆಕ್ಸಿಜನ್‌ ಬೆಡ್‌ಗಳ ಕೊರತೆ ಇಲ್ಲ. ಪಾಸಿಟಿವ್‌ ಬಂದ ಕೊನೆಯ ಹಂತದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಮರಣ ಅಧಿಕವಾಗಿದ್ದು, ಇದನ್ನು ತಪ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಕ್ಷಣೆ ನಡೆಸಬೇಕಿದೆ. ಇದಕ್ಕಾಗಿ ಅಗತ್ಯ ಸಿಬಂದಿ ನೇಮಿಸಿಕೊಳ್ಳಲು ಅನುಮತಿ ನೀಡುವಂತೆ ಸಚಿವರಲ್ಲಿ ಕೋರಿದರು.

ಸಿಬಂದಿ ನೇಮಕಕ್ಕೆ ಗಮನ
ಸರಕಾರಿ ಕೋವಿಡ್‌ ಲ್ಯಾಬ್‌ ಕಾರ್ಯ, ಪರೀಕ್ಷಾ ಕಿಟ್‌ ಸರಬರಾಜು ಕುರಿತು ಮಾಹಿತಿ ಪಡೆದ ಸಚಿವರು, ತುರ್ತು ಸಂದರ್ಭಗಳಲ್ಲಿ ಮಾತ್ರ ಆ್ಯಂಟಿಜೆನ್‌ ಕಿಟ್‌ಗಳನ್ನು ಬಳಕೆ ಮಾಡುವಂತೆ ಮತ್ತು ರೋಗ ಲಕ್ಷಣವಿರುವ ವ್ಯಕ್ತಿಗಳನ್ನು ಆರ್‌ಟಿಪಿಸಿಆರ್‌ ಮೂಲಕ ಪರೀಕ್ಷೆ ನಡೆಸುವಂತೆ ಸೂಚಿಸಿದರು. ಆರೋಗ್ಯ ಇಲಾಖೆಯಲ್ಲಿ ಸರ್ವೇಕ್ಷಣ ಸಿಬಂದಿ ನೇಮಕ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬೊಮ್ಮಾಯಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next