Advertisement

Solar park: ವಿದ್ಯುತ್‌ ಉಪಕೇಂದ್ರಗಳ ಬಳಿ ಸೌರ ಉದ್ಯಾನ ಸ್ಥಾಪನೆ

11:19 PM Aug 23, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಯ ಉಪಕೇಂದ್ರ (ಸಬ್‌ ಸ್ಟೇಷನ್‌)ಗಳ ಬಳಿ ಸೌರ ಉದ್ಯಾನ (ಸೋಲಾರ್‌ ಪಾರ್ಕ್‌) ಸ್ಥಾಪನೆ ಹಾಗೂ ಐಪಿ ಫೀಡರ್‌ಗಳನ್ನು ಸೋಲಾರೈಸೇಷನ್‌ ಮಾಡಲು ಸರಕಾರ ಮುಂದಾಗಿದೆ.

Advertisement

ಈ ಸಂಬಂಧ ಬುಧವಾರ ಬೆಂಗಳೂರಿನ ಬೆಳಕು ಭವನದಲ್ಲಿ ಎಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಇಂಧನ ಸಚಿವ ಕೆ.ಜೆ. ಜಾರ್ಜ್‌, ಈ ಯೋಜನೆಯ ಅನುಷ್ಠಾನದಿಂದ ಸ್ಥಳೀಯವಾಗಿ ವಿದ್ಯುತ್‌ ಉತ್ಪಾದನೆ ಹೆಚ್ಚುತ್ತದೆ. ಇದರಿಂದಾಗಿ ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್‌ ಪೂರೈಸಲು ಸಾಧ್ಯವಾಗಲಿದೆ ಎಂದರು.

ರಾಜ್ಯದ ಪ್ರಗತಿಯಲ್ಲಿ ಇಂಧನವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂರಕ್ಷಿಸ ಬೇಕು.

ಸೌರಶಕ್ತಿಯ ಸುಲಭ ಸ್ಥಾಪನೆ ಮತ್ತು ದೀರ್ಘ‌ಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ಐದು ವಿದ್ಯುತ್‌ ಸರಬರಾಜು ಕಂಪನಿಗಳ ಪೈಕಿ ಬೆಸ್ಕಾಂ, ಸೆಸ್ಕಾಂ ಮತ್ತು ಹೆಸ್ಕಾಂ ಈಗಾಗಲೇ ಸೋಲಾರ್‌ ಪಾರ್ಕ್‌ಗಳನ್ನು ಸ್ಥಾಪಿಸಲು ಭೂಮಿ ಗುರುತಿಸಿವೆ. ಉಳಿದ ವಿದ್ಯುತ್‌ ಸರಬರಾಜು ಕಂಪನಿಗಳು ಭೂಮಿ ಗುರುತಿಸುವ ಪ್ರಕ್ರಿಯೆಯಲ್ಲಿವೆ ಎಂದು ವಿವರಿಸಿದರು.

ಇದೇ ವೇಳೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್‌ ಸೆಟ್‌ (ಐಪಿ) ತಯಾರಕರೊಂದಿಗೆ ಸಭೆ ನಡೆಸಿದ ಸಚಿವರು, ಸೋಲಾರ್‌ ಪಂಪ್‌ ಸೆಟ್‌ ಅಳವಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸೂಚಿಸಿದರು.

Advertisement

ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಧನ ಸಹಾಯದೊಂದಿಗೆ ರಾಜ್ಯದಲ್ಲಿ 2014-15ರಲ್ಲಿ ಸೌರಚಾಲಿತ ಪಂಪ್‌ಸೆಟ್‌ ಯೋಜನೆ ಪ್ರಾರಂಭಿಸಲಾಯಿತು. ಕರ್ನಾಟಕ ಇಂಧನ ಸಚಿವಾಲಯವು ರಾಜ್ಯದಲ್ಲಿ ಒಟ್ಟು 4369 ಸೋಲಾರ್‌ ಪಂಪ್‌ ಸೆಟ್‌ಗಳನ್ನು ಸ್ಥಾಪಿಸಿದೆ. ಪ್ರಧಾನಮಂತ್ರಿ ಕುಸುಮ್‌ ಯೋಜನೆಯಡಿ ಗ್ರಿಡ್‌ ಪೂರೈಕೆ ಲಭ್ಯವಿಲ್ಲದಿರುವೆಡೆ ಡೀಸೆಲ್‌ ಕೃಷಿ ಪಂಪ್‌ಗ್ಳು, ನೀರಾವರಿ ವ್ಯವಸ್ಥೆ ಬದಲಿಗೆ 7.5 ಎಚ್‌ಪಿವರೆಗಿನ ಸೌರ ಕೃಷಿ ಪಂಪ್‌ ಸೆಟ್‌ಗಳನ್ನು ಸ್ಥಾಪಿಸಲು ರೈತರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.

ಸಭೆಯಲ್ಲಿ ಇಂಧನ ಮತ್ತು ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ, ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next